Advertisement

ಭೂಸ್ವಾಧೀನಕ್ಕೆ ಎದುರಾಗಿದೆ ತಾಂತ್ರಿಕ ಸಮಸ್ಯೆ!

10:03 PM Oct 09, 2020 | mahesh |

ಮಹಾನಗರ: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿರುವಾಗಲೇ, ಇದೀಗ ಅದಕ್ಕೆ ಬೇಕಾಗಿರುವ ಭೂಸ್ವಾಧೀನ ಪ್ರಕ್ರಿಯೆ ತಾಂತ್ರಿಕ ಅಡ್ಡಿ ಎದುರಾಗಿದೆ. ಹೀಗಾಗಿ, ನಗರ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಈ ಮಹತ್ವದ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರಿಂದ ಮಹಾಕಾಳಿಪಡು³ ರೈಲ್ವೇ ಕೆಳಸೇತುವೆ ಮುಖಾಂತರ ಮೋರ್ಗನ್ಸ್‌ಗೆಟ್‌ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಯೋಜನೆಯನ್ನು 50 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ವಿಸ್ತೃತ ಯೋಜನ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಯೋಜನೆಗೆ ಈಗಾಗಲೇ ರೈಲ್ವೇ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದ್ದು, ರೈಲ್ವೇ ಇಲಾಖೆಗೆ 30 ಕೋ.ರೂ. ಠೇವಣಿ ಇಡಬೇಕಾಗಿದೆ. ಆದರೆ ಸದ್ಯದ ನಿಯಮಾವಳಿಗಳ ಪ್ರಕಾರ, ಈ ರಸ್ತೆ ನಿರ್ಮಾಣಕ್ಕೆ ಬೇಕಾಗಿರುವ ಖಾಸಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕಾರ ಆಡಳಿತಾತ್ಮಕವಾಗಿ ತಾಂತ್ರಿಕ ಅಡಚಣೆ ಎದುರಾಗಿದೆ.

ಪಾಲಿಕೆ ಹೆಗಲಿಗೆ!
ಇದೇ ಜು. 6ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ಈ ವಿಚಾರವನ್ನು ಗಮನಕ್ಕೆ ತಂದಾಗ, ಮಂಗಳೂರು ಪಾಲಿಕೆಯಲ್ಲಿ ಹಾಲಿ ಸಂಗ್ರಹವಿರುವ ಪ್ರೀಮಿಯಂ ಎಫ್‌. ಎ.ಆರ್‌. ಅನುದಾನವನ್ನು ಭೂಸ್ವಾಧೀನ ಪಡಿಸಲು ಉಪಯೋಗಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ್ದರು. ಹೀಗಾಗಿ ಖಾಸಗಿ ಜಮೀನುಗಳನ್ನು ಮಂಗಳೂರು ಪಾಲಿಕೆ ಭೂಸ್ವಾಧೀನ ಪಡಿಸಿಕೊಂಡು ಬಳಿಕ ಸ್ಮಾರ್ಟ್‌ ಸಿಟಿಗೆ ಹಸ್ತಾಂತರಿಸಬೇಕಾಗಿದೆ.

ಪಾಲಿಕೆಗೂ ಅವಕಾಶವಿಲ್ಲ!
ಭೂಸ್ವಾಧೀನಕ್ಕೆ 20 ಕೋ.ರೂ. ಅನುದಾನದ ಆವಶ್ಯಕತೆಯಿದ್ದು, ಇದರಲ್ಲಿ ಶೇ.50ರಷ್ಟನ್ನು ರಾಜ್ಯ ಸರಕಾರ ಹಾಗೂ ಉಳಿದ ಶೇ.50 ಭಾಗವನ್ನು ಪಾಲಿಕೆಯಿಂದ ಭರಿಸಲು ಮುಖ್ಯಕಾರ್ಯದರ್ಶಿಯವರು ಸೂಚಿಸಿದ್ದಾರೆ. ಆದರೆ, ಪಾಲಿಕೆಯ ಸ್ವಂತ ನಿಧಿಯಂತೆ ಪ್ರೀಮಿಯಂ ಎಫ್‌.ಎ.ಆರ್‌. ನಿಧಿ ಲಭ್ಯವಿದ್ದು, ಮಾರ್ಗಸೂಚಿಯಂತೆ ಇದನ್ನು ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ವಿಸ್ತರಣೆ ಯೋಜನೆಗೆ ಮಾತ್ರ ವಿನಿಯೋಗಿಸಬೇಕಾಗಿದೆ. ಭೂಸ್ವಾಧೀನ ವೆಚ್ಚವನ್ನು ಇದರಲ್ಲಿ ನೀಡಲು ಸದ್ಯ ಅವಕಾಶವಿಲ್ಲ; ಹೀಗಾಗಿ ಪಾಲಿಕೆಗೆ ಮತ್ತೂಂದು ಸಮಸ್ಯೆ ಎದುರಾಗಿದೆ.

ಪಾಲಿಕೆ ಪರಿಷತ್‌ ಸಭೆಯಲ್ಲಿ ತೀರ್ಮಾನ
ಪ್ರಸ್ತಾವಿತ ರಸ್ತೆಗೆ ಜಮೀನು ಸ್ವಾಧೀನಪಡಿಸುವುದು ಅತೀ ಆವಶ್ಯ. ಸಾರ್ವಜನಿಕರಿಗೆ ಅನುಕೂಲವಾಗುವ ಕಾರಣದಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪ್ರೀಮಿಯಂ ಎಫ್‌.ಐ.ಆರ್‌. ನಿಧಿಯಿಂದ ಶೇ.50ನ್ನು ಹಾಗೂ ಉಳಿದ ಮೊತ್ತವನ್ನು ಸರಕಾರದಿಂದ ಪಡೆಯುವ ಬಗ್ಗೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಂದಿನ ಪಾಲಿಕೆ ಪರಿಷತ್‌ ಕೈಗೊಳ್ಳುವ ತೀರ್ಮಾನ ಅಂತಿಮವಾಗಲಿದೆ.

Advertisement

ವಿವಾದದಲ್ಲೇ ಮುಂದುವರಿದ ಯೋಜನೆ
ಜೆಪ್ಪು ಮಹಾಕಾಳಿಪಡು³ವಿನಲ್ಲಿ ಈ ಮೊದಲು ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ. ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ.50:50ರಂತೆ ಪಾಲಿಕೆ, ರೈಲ್ವೇಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ; ಹೀಗಾಗಿ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆಯು ವಾಪಸ್‌ ಕಳುಹಿಸಿತ್ತು. 24 ಕೋ.ರೂ.ಗಳನ್ನು ಮಂಗಳೂರು ಪಾಲಿಕೆ ಭರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿಸಲು ತೀರ್ಮಾನಿಸಿ, ಅದರಂತೆ 10 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌, ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. ಆದರೆ ಅದಕ್ಕೂ ಅನುಮೋದನೆ ದೊರೆತಿರಲಿಲ್ಲ. ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ವ್ಯಾಪಕ ಬೇಡಿಕೆ-ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಏನಿದು ಸಮಸ್ಯೆ?
ಜಪ್ಪಿನಮೊಗರು ತಿರುವಿನಿಂದ ಮೋರ್ಗನ್‌ಗೆàಟ್‌ವರೆಗೆ ಯೋಜನೆಯಲ್ಲಿ ರಸ್ತೆ ವಿಸ್ತರಣೆ ಒಳಗೊಂಡಿದ್ದು, 3.75 ಎಕರೆ ಖಾಸಗಿ ಜಮೀನು ಸ್ವಾಧೀನ ಮಾಡಬೇಕಿದೆ. ಈ ಪೈಕಿ 2.50 ಎಕರೆ ಜಮೀನನ್ನು ಟಿ.ಡಿ.ಆರ್‌. ಮೂಲಕ ಸ್ವಾಧೀನಪಡಿಸಲು ಭೂಮಾಲಕರು ಒಪ್ಪಿಗೆ ನೀಡಿದ್ದಾರೆ. ಉಳಿದ 1.25 ಎಕರೆ ಜಮೀನನ್ನು ಭೂಸ್ವಾಧೀನ ಮೂಲಕ ಪಡೆಯಬೇಕಾಗಿದೆ. ಆದರೆ ಯೋಜನೆಯು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಜಾರಿಗೊಳ್ಳುವ ಕಾರಣ ಸ್ಮಾರ್ಟ್‌ಸಿಟಿ ಮಿಷನ್‌ ನಿಯಮಾವಳಿಯಂತೆ ಭೂಸ್ವಾಧೀನ ಪ್ರಕ್ರಿಯೆಗೆ ಅವಕಾಶ ಇಲ್ಲ.

ಅನುಮೋದನೆ
ಜಪ್ಪು ಮಹಾಕಾಳಿಪಡು³ವಿನಲ್ಲಿ ರೈಲ್ವೇ ಅಂಡರ್‌ಪಾಸ್‌, ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ವಿಚಾರವು ಸದ್ಯ ಚರ್ಚೆಯಲ್ಲಿದೆ. ಸರಕಾರ, ಮಂಗಳೂರು ಪಾಲಿಕೆಯಿಂದ ಭೂಸ್ವಾಧೀನ ನಡೆಸಲು ಉದ್ದೇಶಿಸಲಾಗಿದ್ದು, ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next