ನವದೆಹಲಿ: ಫೇಸ್ ಬುಕ್ ಇದೀಗ ಭಾರತ ಸೇರಿದಂತೆ ಇತರ ದೇಶಗಳ ಸುದ್ದಿ ಪ್ರಕಾಶಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲೇ ಫೇಸ್ ಬುಕ್ ನ್ಯೂಸ್ ಜಾರಿಗೆ ಬರಲಿದ್ದು ಇದರಲ್ಲಿ ದೈನಂದಿನ ಸುದ್ದಿ ಪ್ರಕಟಿಸುವವರಿಗೆ ಹಣಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣದ ದೈತ್ಯ ಈ ವರ್ಷದ ಆರಂಭದಲ್ಲಿ ಫೇಸ್ ಬುಕ್ ನ್ಯೂಸ್ ಅನ್ನು ಅಮೆರಿಕಾದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿತ್ತು. ಆ ಮೂಲಕ ನ್ಯೂಸ್ ಪಬ್ಲಿಷರ್ಸ್ ಗಳಿಗೆ ಹೆಚ್ಚು ಹೆಚ್ಚು ಲೈಕ್ಸ್, ಫಾಲೋವರ್ಸ್ ಬರುವಂತೆ ನೆರವಾಗಿತ್ತು. ಇದೇ ಸೇವೆಯನ್ನು ಭಾರತ, ಜರ್ಮನಿ, ಫ್ರಾನ್ಸ್, ಬ್ರೆಜಿಲ್ ರಾಷ್ಟ್ರಗಳಿಗೀಗ ಪರಿಚಯಿಸಲು ಮುಂದಾಗಿದೆ.
ಈ ಪ್ರಗತಿಯನ್ನು ಆಧರಿಸಿ, ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಯೋಜನೆಗಳನ್ನು ವಿಸ್ತರಿಸುತ್ತಿದ್ದೇವೆ. ಮುಂದಿನ ಆರು ತಿಂಗಳಿಂದ ಒಂದು ವರ್ಷದೊಳಗೆ ನಾವು ಅನೇಕ ದೇಶಗಳಲ್ಲಿ ಫೇಸ್‌ಬುಕ್ ನ್ಯೂಸ್ ಅನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ. ಈ ಎಲ್ಲಾ ದೇಶಗಳಲ್ಲೂ ನಾವು ಸುದ್ದಿ ಪ್ರಕಾಶಕರಿಗೆ ಹಣ ಪಾವತಿಸುತ್ತೇವೆ ಎಂದು ಫೇಸ್‌ಬುಕ್ ತಿಳಿಸಿದೆ.
ಫೇಸ್ ಬುಕ್ ನ್ಯೂಸ್ ಗೆ ಶೇ 95% ರಷ್ಟು ಟ್ರಾಫಿಕ್ ಹೆಚ್ಚಾಗುತ್ತಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲದೆ ಫೇಸ್ ಬುಕ್ ನ್ಯೂಸ್ ಗೆ ಕಂಟೆಂಟ್ ಅಪ್ಲೋಡ್ ಮಾಡುವ ಸುದ್ದಿ ಮಾಧ್ಯಮ/ ಪಬ್ಲಿಷರ್ಸ್/ ವ್ಯಕ್ತಿಗಳ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸಲಾಗುವುದು. ಆ ಮೂಲಕ ಫೇಸ್ ಬುಕ್ ನ್ಯೂಸ್ ನ ಗುಣಮಟ್ಟ ಹೆಚ್ಚಿಸಲಾಗುವುದು. ಎಂದು ಕೂಡ ಫೇಸ್ ಬುಕ್ ಹೇಳಿಕೊಂಡಿದೆ.
ಗಮನಾರ್ಹವೆಂದರೇ ಫೇಸ್ ಬುಕ್ ನ್ಯೂಸ್ ಜಾರಿಗೆ ಬರುವ ದೇಶಗಳ ಪಟ್ಟಿಯಿಂದ ಆಸ್ಟ್ರೇಲಿಯಾವನ್ನು ಹೊರಗಿಡಲಾಗಿದೆ. ಕೆಲ ತಿಂಗಳ ಹಿಂದಷ್ಟೆ ಆಸ್ಟ್ರೇಲಿಯಾ ಸರ್ಕಾರ, ತಮ್ಮ ದೇಶದ ಮಾಧ್ಯಮಗಳು ನೀಡುವ ಸುದ್ದಿ ಮೂಲಗಳಿಗೆ ಗೂಗಲ್ ಮತ್ತು ಫೇಸ್ ಬುಕ್ ಹಣಪಾವತಿಸಬೇಕೆಂದು ಆದೇಶ ಹೊರಡಿಸಿತ್ತು. ಇದೇ ಮಾದರಿಯ ಆದೇಶವನ್ನು ಫ್ರಾನ್ಸ್ ಸರ್ಕಾರ ಕೂಡ ಹೊರಡಿಸಿತ್ತು. ಆದರೇ ಫ್ರಾನ್ಸ್, ಫೇಸ್ ಬುಕ್ ಜಾರಿಗೆ ಬರುವ ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.