Advertisement

ಫೇಸ್‌ಬುಕ್‌-ರಿಲಯನ್ಸ್‌ ಸಹಭಾಗಿತ್ವ ಬದಲಾಗುವುದೇ ಡಿಜಿಟಲ್‌ ದಿಕ್ಕು?

11:31 AM Apr 24, 2020 | mahesh |

ಪ್ರಪಂಚದ ಅತಿದೊಡ್ಡ ಸೋಷಿಯಲ್‌ ನೆಟ್ ವರ್ಕಿಂಗ್  ಕಂಪೆನಿ ಫೇಸ್‌ಬುಕ್‌, ರಿಲಯನ್ಸ್‌ ಜಿಯೋದಲ್ಲಿ 43,574 ಕೋಟಿ ರೂ ಹೂಡಿಕೆ ಮಾಡಿ, ಅದರಲ್ಲಿನ ಅಜಮಾಸು 10 ಪ್ರತಿಶತ ಪಾಲುದಾರಿಕೆ ಪಡೆದಿದೆ. ಫೇಸ್‌ಬುಕ್‌ ಇದುವರೆಗೂ ಯಾವೊಂದು ಕಂಪೆನಿಯಲ್ಲೂ ಇಷ್ಟೊಂದು ಬೃಹತ್‌ ಪ್ರಮಾಣದ ಆರ್ಥಿಕ ಹೂಡಿಕೆ ಮಾಡಿದ್ದಿಲ್ಲ. ಭಾರತದ ನಂಬರ್‌ 1 ಟೆಲಿಕಾಂ ಕಂಪೆನಿ ಮತ್ತು ಜಗತ್ತಿನ ನಂಬರ್‌ 1 ಸೋಷಿಯಲ್‌ ನೆಟ್ ವರ್ಕಿಂಗ್ ‌ ಕಂಪೆನಿಯ ಈ ಸಹಭಾಗಿತ್ವವು ಭಾರತದ ಟೆಲಿಕಾಂ ವಲಯದಲ್ಲಷ್ಟೇ ಅಲ್ಲದೇ, ದೇಶದ ಇ-ಕಾಮರ್ಸ್‌, ಇ-ಪೇಮೆಂಟ್‌ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಯ ಸೂಚನೆ ನೀಡುತ್ತಿದೆ.

Advertisement

ಇಲ್ಲಿ ನೆನಪಿಸಲೇಬೇಕಾದ ಸಂಗತಿಯೆಂದರೆ, ಫೇಸ್‌ಬುಕ್‌ ಅಷ್ಟೇ ಅಲ್ಲದೇ, ಅದರ ಅಂಗವಾದ ವಾಟ್ಸ್‌ ಆ್ಯಪ್‌ನ ಗ್ರಾಹಕರೂ ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಇದೇ ವೇಳೆಯಲ್ಲೇ ವಾಟ್ಸ್‌ ಆ್ಯಪ್‌ ಕೂಡ ಪೇಟಿಎಂ, ಗೂಗಲ್‌ಪೇನಂತೆ ಪೇಮೆಂಟ್‌ ಸೇವೆಗಳನ್ನು ಆರಂಭಿಸುವ ತಯಾರಿಯಲ್ಲಿದೆ. ಹೀಗಾಗಿ, ಇದೊಂದು ಅಭೂತಪೂರ್ವ ಒಪ್ಪಂದವಾಗಿದ್ದು, ಸಂವಹನ, ಇ-ಸೇವೆ ವಲಯಕ್ಕೆ ಹೊಸ ಸವಾಲನ್ನಂತೂ ಎದುರಿಟ್ಟಿದೆ. ಜಿಯೋ ಬಂದ ನಂತರ ದೇಶದ ಟೆಲಿಕಾಂ ಕ್ಷೇತ್ರದ ದಿಕ್ಕೇ ಬದಲಾಗಿದೆ ಎನ್ನುವುದು ಸತ್ಯ. ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಅತಿ ಅಗ್ಗದ ದರದಲ್ಲಿ ಪೂರೈಸಬಹುದೆಂದು ತೋರಿಸಿಕೊಟ್ಟ ಸಂಸ್ಥೆಯಿದು. ಅಲ್ಲಿಯವರೆಗೂ ಇತರೆ ಟೆಲಿಕಾಂ ಕಂಪೆನಿಗಳು 1 ಜಿಬಿ ಡೇಟಾಗೆ ಗ್ರಾಹಕರಿಂದ 150-200 ಪಡೆಯುತ್ತಿದ್ದವು! ಇಂಟರ್ನೆಟ್‌ ಎನ್ನುವುದು ಹಣವಿದ್ದವರಿಗಷ್ಟೇ ಎನ್ನುವಂಥ ಸ್ಥಿತಿಯಿತ್ತು. ಆದರೆ ಜಿಯೋ ಪ್ರವೇಶದ ನಂತರ, ದೇಶದ ಮೂಲೆಮೂಲೆಯ ಜನರ ಕೈಗೂ 4 ಜಿ ಸೇವೆ ಕೈಗೆಟುಕುವಂತಾಯಿತು. ತದನಂತರದಿಂದ, ಎಲ್ಲಾ ಟೆಲಿಕಾಂ ಕಂಪೆ‌ನಿಗಳೂ ಅಗ್ಗದ ಇಂಟರ್ನೆಟ್‌ ಸೇವೆ ಒದಗಿಸಲಾರಂಭಿಸಿದವು. ಇಂದು ಲಾಕ್‌ಡೌನ್‌ ಸಮಯದಲ್ಲಿ ಮನೆಮನೆಯಲ್ಲೂ ಅಗ್ಗದ ದರಲ್ಲಿ 4 ಜಿ ಸೌಲಭ್ಯ ಸಿಗುವಂತಾಗಿರುವುದರಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಜಿಯೋ ಪಾತ್ರ ಇದೆ.

ಇದೇನೇ ಇದ್ದರೂ, ಎಲ್ಲಕ್ಕಿಂತ ಮುಖ್ಯವಾಗಿ ಈ ಸಹಭಾಗಿತ್ವವು, ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇ-ಕಾಮರ್ಸ್‌ ವೇದಿಕೆ “ಜಿಯೋ ಮಾರ್ಟ್‌’ಗೆ ಬಹಳ ವೇಗ ಕೊಡುವ ಸಾಧ್ಯತೆಯಿದ್ದು, ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಂಥ ಕಂಪೆನಿಗಳಿಗೆ ಬಹುದೊಡ್ಡ ಸ್ಪರ್ಧೆ ಎದುರಾಗಲಿದೆ. 2018ರ ವೇಳೆಗೆ 30 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶದ ಇ-ಕಾಮರ್ಸ್‌ ವ್ಯವಹಾರವು, 2028ರ ವೇಳೆಗೆ 200 ಶತಕೋಟಿ ಡಾಲರ್‌ ತಲುಪುವ ನಿರೀಕ್ಷೆಯಿದೆ. ಫೇಸ್‌ಬುಕ್‌ನ ಹೂಡಿಕೆಯಲ್ಲಿ 15 ಸಾವಿರ ಕೋಟಿ ರೂಪಾಯಿ ಜಿಯೋ ಜತೆಗೇ ಉಳಿಯಲಿದೆ. ಇದು ಬಹುದೊಡ್ಡ ಮೊತ್ತವಾಗಿದ್ದು, ಈ ಹಣವನ್ನು ಜಿಯೋ-ಮಾರ್ಟ್‌ ಬೆಳವಣಿಗೆಗೆ ಬಳಸಿಕೊಳ್ಳಲೂ­ಬಹುದು.

ಇದೇ ವೇಳೆಯಲ್ಲೇ ಕೆಲವು ವರ್ಷಗಳಿಂದ ಫೇಸ್‌ಬುಕ್‌ ಎದುರಿಸುತ್ತಿರುವ ಆರೋಪವನ್ನೂ ನಾವು ಪರಿಗಣಿಸಬೇಕಿದೆ. ಆ ಸಂಸ್ಥೆ ಬಳಕೆದಾರರ ಡೇಟಾವನ್ನು ರಾಜಕೀಯ ಪಕ್ಷಗಳಿಗೆ, ಕಂಪೆನಿಗಳಿಗೆ ಮಾರಿಕೊಂಡು ಟೀಕೆಗೊಳಗಾದ ಉದಾಹರಣೆಯೂ ನಮ್ಮೆದುರಿಗಿದೆ. ಇಂದು ಆ ಕಂಪೆನಿಯ ಬಳಿ ದೇಶದ ಕೋಟ್ಯಂತರ ಜನರ ಡೇಟಾ ಇದೆ. ಜಿಯೋದೊಂದಿಗಿನ ಸಹಭಾಗಿತ್ವದಿಂದಾಗಿ ದೇಶದಲ್ಲಿ ಅದರ ಉಪಸ್ಥಿತಿ ಹೆಚ್ಚಲಿದೆ. ಹೀಗಿರುವಾಗ, ಭಾರತೀಯರ ಡೇಟಾ ಪ್ರೈವೆಸಿಗೆ ಎದುರಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ. ಈ ವಿಚಾರದಲ್ಲಿ ಸರಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕಿದೆ. ಒಟ್ಟಲ್ಲಿ, ಈ ಸಹಭಾಗಿತ್ವವು, ದೇಶದ ಡಿಜಿಟಲ್‌ ವಲಯದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎನ್ನುವ ಪ್ರಶ್ನೆಗೆ ಸಮಯವೇ ಉತ್ತರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next