Advertisement

ಫೇಸ್‌ಬುಕ್‌ ಪೇಜ್‌: ಮೂರೇ ದಿನಗಳಲ್ಲಿ 8 ಲಕ್ಷ ಮಂದಿ ವೀಕ್ಷಣೆ

11:46 AM Feb 02, 2018 | Team Udayavani |

ಬೆಳ್ತಂಗಡಿ: ಭಾರೀ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ… ಈ ಹಾಡನ್ನು ಕೇಳದವರು ವಿರಳ. ಸಿನೆಮಾದ ಹಾಡಿಗೆ ನಾವು – ನೀವು ಹೆಜ್ಜೆ ಹಾಕಿದರೆ ಅದು ನೋಡುಗರಿಗೆ ಇಷ್ಟವಾಗಬಹುದಾ?

Advertisement

ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಾದ ಪ್ರತೀಕ್‌, ಪ್ರಣೀತ್‌, ಪ್ರಜ್ವಲ್‌, ಕಿಶೋರ್‌, ಶುಭಕಲಾ, ಅನ್ವಿತಾ, ಚೈತ್ರಾ ಅಂಜನಿಪುತ್ರ ಸಿನೆಮಾದ ‘ಭಾರೀ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ’ ಹಾಡಿಗೆ ಹೆಜ್ಜೆ ಹಾಕುವ ನಿರ್ಧಾರಕ್ಕೆ ಬಂದರು. ವಿದ್ಯಾರ್ಥಿಗಳ ಆಸಕ್ತಿ ಕಂಡು ಇಲ್ಲಿನ
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರುತಿ ಜೈನ್‌ ಕೊರಿಯೋಗ್ರಾಫಿ ಜವಾಬ್ದಾರಿ ವಹಿಸಿ ವಿದ್ಯಾರ್ಥಿಗಳ ಜತೆ ಸ್ವತಃ ಹೆಜ್ಜೆ ಹಾಕಿದರು. 

ಒಂದು ವೇದಿಕೆಯಲ್ಲೇ ನೃತ್ಯ ಮಾಡದೆ ಕಾಲೇಜ್‌ ಆವರಣದ ಮೂರು ಕಡೆಗಳಲ್ಲಿ ನೃತ್ಯ ಚಿತ್ರೀಕರಣ ಮಾಡಲು ನಿರ್ಧರಿಸಿದರು. ತಪ್ಪುಗಳಾಗಬಾರದೆಂದು ಎಲ್ಲರೂ ಶ್ರಮಪಟ್ಟು ಒಂದೇ ದಿನದಲ್ಲಿ ನೃತ್ಯ ಕಲಿತರು. ಹಾಡಿನ ಚಿತ್ರೀಕರಣವನ್ನು ಕಲರ್‌ಫ‌ುಲ್‌ ಗೊಳಿಸುವ ನಿಟ್ಟಿನಲ್ಲಿ ಸಿನೆಮಾದಂತೆ ಇಲ್ಲೂವಿಶೇಷ ಸೆಟ್‌ ಅನ್ನು ಎಸ್‌ಡಿಎಂ ಕಲಾ ಕೇಂದ್ರದ ನಾಟಕ ನಿರ್ದೇಶಕ ಶಿವಶಂಕರ್‌ ನೀನಾಸಂ ಹಾಕಿಕೊಟ್ಟರು. ಸಣ್ಣಪುಟ್ಟ ಖರ್ಚನ್ನು ಶ್ರುತಿ ಭರಿಸಿದರು. 

ಬೆಳಗ್ಗೆಯಿಂದ ಸಂಜೆಯಾಗುವುದರೊಳಗೆ ನೃತ್ಯದ ಚಿತ್ರೀಕರಣ ಮತ್ತು ಛಾಯಾಚಿತ್ರಗ್ರಹಣವನ್ನು ಸಂದೀಪ್‌ ದೇವ್‌, ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ಲೋಯ್ಡ ಡಯಾಸ್‌ ಹಾಗೂ ಅಭಿನಂದನ್‌ ಜೈನ್‌ ಮುಗಿಸಿಕೊಟ್ಟರು. ಎಡಿಟಿಂಗ್‌ ಮತ್ತು ಚಿತ್ರೀಕರಣ ಕೆಲಸದಲ್ಲಿ ಎಸ್‌ಡಿಎಂ ಮಲ್ಟಿಮೀಡಿಯ ಸ್ಟುಡಿಯೋದ ಕಾರ್ಯಕ್ರಮ ಮುಖ್ಯಸ್ಥ ಮಾಧವ ಹೊಳ್ಳ ಸಹಕರಿಸಿದ್ದಾರೆ. ಉಪನ್ಯಾಸಕರಾದ ಶ್ರುತಿ ಜೈನ್‌ ಹಾಗೂ ಸುನಿಲ್‌ ಹೆಗ್ಡೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.

ಸಿನೆಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಸಹ ಈ ನೃತ್ಯದ ವೀಡಿಯೋವನ್ನು ವೀಕ್ಷಿಸಿದ್ದು, ವಿದ್ಯಾರ್ಥಿಗಳು ಸಿನೆಮಾದಲ್ಲಿರುವಂತೆ ಬೇರೆ ಬೇರೆ ಲೊಕೇಶನ್‌ ಆಯ್ದು ಕೊಂಡು ನೃತ್ಯಕ್ಕೆ ಪೂರಕವಾಗಿ ವಸ್ತ್ರಾಲಂಕಾರವನ್ನು ಮಾಡಿದ್ದಾರೆ. ಸಿನೆಮಾದ ಹಾಡಿಗೆ ವಿದ್ಯಾರ್ಥಿಗಳು ಹೀರೋ-ಹೀರೋಯಿನ್‌ಗಳಂತೆ ಹೆಜ್ಜೆ ಹಾಕಿದ್ದು ನೋಡಿ ಖುಷಿಯಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ವಿದ್ಯಾರ್ಥಿಗಳ ಪ್ರಯತ್ನಕ್ಕೆ ಇದೀಗ ಎಲ್ಲೆಡೆಯಿಂದ ಅಭಿನಂದನೆಯ ಮಹಾ ಪೂರವೇ ಹರಿದುಬರುತ್ತಿದೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಪ್ರೊ| ಟಿ.ಎನ್‌. ಕೇಶವ್‌ ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಮೂಡಿದ ಹೊಸ ಉತ್ಸಾಹ
ನೂತನ ಶೈಲಿಯಲ್ಲಿ ಎಡಿಟಿಂಗ್‌ ಕೆಲಸವನ್ನು ಮುಗಿಸಿದ ಅನಂತರ ನೃತ್ಯದ ವೀಡಿಯೋವನ್ನು ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ಎಂಬ ಫೇಸ್‌ಬುಕ್‌ ಪೇಜ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ಮೂರೇ ದಿನಗಳಲ್ಲಿ 8 ಲಕ್ಷ ಮಂದಿ ಈ ವೀಡಿಯೋವನ್ನು ವೀಕ್ಷಿಸಿದಲ್ಲದೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಶೇರ್‌ ಕೂಡ ಮಾಡಿದ್ದಾರೆ. ಪ್ರಸ್ತುತ ವೀಕ್ಷಕರ ಸಂಖ್ಯೆ 10.50 ಲಕ್ಷ ತಲುಪುವ ಮೂಲಕ ಸದಾ ಹೊಸತನದತ್ತ ತುಡಿಯುತ್ತಿರುವ ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ತಂಡ ಹಾಗೂ ಇಲ್ಲಿನ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ನೃತ್ಯವನ್ನು ದೇಶ-ವಿದೇಶಗಳ ಲಕ್ಷಾಂತರ ಮಂದಿ ವೀಕ್ಷಿಸಿದ್ದಲ್ಲದೆ, ಒಂದಷ್ಟು ಮಂದಿ ಕಾಲೇಜಿಗೆ ಕರೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಹಾಡಿಗೆ ಸಾಹಿತ್ಯ ಬರೆದಿರುವ ಪ್ರಮೋದ್‌ ಮರವಂತೆ ಕರೆ ಮಾಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಶ್ರುತಿ ಜೈನ್‌
ಉಪನ್ಯಾಸಕಿ, ನೃತ್ಯ ನಿರ್ದೇಶಕಿ

ಹೆಮ್ಮೆ ಎನಿಸುತ್ತದೆ
ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆದ ವೀಡಿಯೋ ಇದು. ತಂಡದ ಸಾಧನೆಗೆ ಹೆಮ್ಮೆ ಎನಿಸುತ್ತದೆ.
ಪ್ರೊ| ಭಾಸ್ಕರ ಹೆಗಡೆ,
 ಕಾಲೇಜಿನ ಪತ್ರಿಕೋದ್ಯಮ
ವಿಭಾಗದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next