Advertisement

ಡೇಟಿಂಗ್ ಪ್ರಿಯರಿಗೆ ಬಂದಿದೆ ಫೇಸ್ಬುಕ್ಕಿನ ಹೊಸ ಆಪ್ಷನ್!

10:21 AM Sep 07, 2019 | Hari Prasad |

ಸ್ಯಾನ್‌ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್‌ ಜಗತ್ತಿನಾದ್ಯಂತ ಸಾವಿರಾರು ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ಬದಲಾಗುತ್ತಿರುವ ಜೀವನಶೈಲಿಗೆ ಹಾಗೂ ಯುವಜನತೆಯ ಮನೋಕಾಮನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಈ ಸಂಸ್ಥೆ ಪೇಸ್ಬುಕ್‌ ಡೇಟಿಂಗ್‌ ತಾಣವನ್ನು ಆರಂಭಿಸಿದೆ.

Advertisement

ಸಾಮಾಜಿಕ ಜಾಲತಾಣಗಳ ಮೂಲಕ ಸಂಗಾತಿಯ ಹುಡುಕಾಟದಲ್ಲಿರುವವರಿಗೆ ಈ ತಾಣ ನೆರವಾಗಬಹುದು ಎಂಬುದು ಇದರ ಹಿಂದಿರುವ ಯೋಚನೆಯಾಗಿದೆ. ಪ್ರಸ್ತುತ ಅಮೆರಿಕ ಸೇರಿದಂತೆ ಇತರ 19 ದೇಶಗಳಲ್ಲಿ ಈ ಡೇಟಿಂಗ್‌ ತಾಣವನ್ನು ಆರಂಭಿಸಿದ್ದು ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಲಭ್ಯವಾಗಲಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಪೇಸ್ಬುಕ್‌ ಬಳಕೆದಾರರು ಡೇಟಿಂಗ್‌ ಮಾಡಲು ಇಚ್ಚಿಸಿದರೆ ಇಲ್ಲಿ ಪ್ರತ್ಯೇಕವಾದ ಡೇಟಿಂಗ್‌ ಪ್ರೊಫೈಲ್‌ ಅನ್ನು ರಚಿಸಬೇಕಾಗುತ್ತದೆ. ಇದು ಫೇಸ್ಬುಕ್ಕಿನದ್ದೇ ಖ್ಯಾತ ಫೋಟೋ ಶೇರಿಂಗ್‌ ತಾಣವಾದ ಇನ್‌ ಸ್ಟಾಗ್ರಾಂ ಗೆ ಲಿಂಕ್‌ ಹೊಂದಿರಲಿದೆ.

ಇನ್‌ ಸ್ಟಾಗ್ರಾಂನಲ್ಲಿ ನಾವು ಹಂಚಿಕೊಂಡಿರುವ ಚಿತ್ರಗಳನ್ನು ಈ ಡೇಟಿಂಗ್‌ ತಾಣದಲ್ಲಿ ನಾವು ನೋಡಬಹುದಾಗಿದೆ. ಈ ಡೇಟಿಂಗ್‌ ಗೆ ತಮ್ಮ ಫೇಸ್ಬುಕ್‌ ಖಾತೆಯ ಸ್ನೇಹಿತರು ಮಾತ್ರವಲ್ಲದೇ ನಮ್ಮ ಇನ್‌ ಸ್ಟಾಗ್ರಾಂ ಖಾತೆಯ ಬೆಂಬಲಿಗರನ್ನು ಸೇರಿಸಿಕೊಳ್ಳಬಹುದಾಗಿದೆ.

ಈಗಾಗಲೇ ನೂರಾರು ಡೇಟಿಂಗ್‌ ಆ್ಯಪ್‌ ಗಳು ಇದ್ದು, ಅವುಗಳು ಜಾಹೀರಾತುಗಳತ್ತ ಮಾತ್ರ ಗಮನಹರಿಸುತ್ತಿದ್ದು ಜನ ಸಂಪರ್ಕ ಸಾಧಿಸಲು ನೆರವಾಗುತ್ತಿಲ್ಲ ಎಂಬ ಆರೋಪ ಇದೆ. ಈ ನಿಟ್ಟಿನಲ್ಲಿ ಫೇಸ್ಬುಕ್‌ ತಮ್ಮದೇ ಆದ ಡೇಟಿಂಗ್‌ ತಾಣವನ್ನು ಹೊಂದಲು ತೀರ್ಮಾನಿಸಿದೆ.

Advertisement

ನಿಮಗೆ ಯಾರ ಮೆಲಾದರೂ ಕ್ರಶ್‌ ಆಗಿದ್ದರೆ ಅಥವಾ ನೀವು ಯಾರನ್ನಾದರೂ ಇಷ್ಟ ಪಡುತ್ತಿದ್ದರೆ ಅಂತಹವರ ಪ್ರೊಫೈಲ್‌ಗೆ ಹೋಗಿ ಅಲ್ಲಿ ಕಮೆಂಟ್‌ ಮತ್ತು ಲೈಕ್‌ ಮಾಡಬೇಕು. ಈ ಮೂಲಕ ಪರಿಚಯವಾದ ಅಥವ ಲಭ್ಯವಾದ ಸಂಬಂಧಗಳ ಸಂಪರ್ಕಗಳು ಇದೇ ತಾಣದ ಮುಖಾಂತರ ನಡೆಯುತ್ತದೆ. ಆದರೆ ಇದು ನಿಮ್ಮ ಅಧಿಕೃತ ಫೇಸ್ಬುಕ್‌ ಪುಟದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ನಿಮ್ಮ ಸಂಬಂಧಗಳ ಗುಟ್ಟು ಹೊರ ಜಗತ್ತಿಗೆ ತಿಳಿಯುವುದಕ್ಕೆ ಸಾಧ್ಯವೇ ಇಲ್ಲ.

ಈಗಾಗಲೇ ಜಗತ್ತಿನಾದ್ಯಂತ ಪ್ರೈವಸಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದಕ್ಕೂ ಈ ಹೊಸ ತಾಣದಲ್ಲಿ ಮಹತ್ವವನ್ನು ನೀಡಲಾಗಿದೆ. ಬಳಕೆದಾರರ ಸುರಕ್ಷೆ ಮುಖ್ಯ ಎಂದು ಸಂಸ್ಥೆ ಹೇಳಿದೆ.

ಸಾಂಪ್ರದಾಯಿಕ ಮನಸ್ಥಿತಿಯ ಜನರಿರುವ ಭಾರತದಂತಹ ದೇಶಗಳಲ್ಲಿ ಈ ಹೊಸ ಆ್ಯಪ್ ಗೆ ಯಾವ ರೀತಿಯ ಸ್ವಾಗತ ಸಿಗುತ್ತದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅಲ್ಲಿನ ಸಂಸ್ಕೃತಿಗೆ ಇದು ಸರಿಯಾಗಿ ಕಂಡರೂ ಭಾರತದಂತಹ ಸಂಸ್ಕೃತಿಗೆ ಮೌಲ್ಯ ನೀಡುವ ದೇಶಗಳಲ್ಲಿ ಈ ಪ್ರಯೋಗ ಹೇಗೆ ಸ್ವೀಕರಿಸಲ್ಪಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next