Advertisement

ವಿಪತ್ತು ನಿರ್ವಹಣೆಗೆ ಸರಕಾರದ ಜತೆ ಕೈಜೋಡಿಸಿದ ಫೇಸ್‌ಬುಕ್‌

06:05 AM Nov 10, 2017 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಮನೋರಂಜನೆ, ಮಾಹಿತಿ ವಿನಿಯಮಕ್ಕೆ ಮಾತ್ರ ಸೀಮಿತವಾಗಿದ್ದ ಜನಪ್ರಿಯ ಜಾಲತಾಣ “ಫೇಸ್‌ಬುಕ್‌’ ಇದೀಗ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲೂ ಕೈ ಜೋಡಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಕ್ಕೆ ಶ್ರೀಕಾರ ಹಾಕಿದೆ.

Advertisement

ಇದೇ ವರ್ಷ ಜಾಗತಿಕ ಮಟ್ಟದಲ್ಲಿ ತಾನು ಪರಿಚಯಿಸಿದ್ದ “ಡಿಸಾಸ್ಟರ್‌ ಮ್ಯಾಪ್ಸ್‌’ ಸೇವೆಯನ್ನು ಇದೀಗ ಭಾರತಕ್ಕೂ ಪರಿಚಯಿಸಿರುವ ಫೇಸ್‌ಬುಕ್‌, ಈ ಮೂಲಕ ವಿಕೋಪ ಬಾಧೆಗೆ ಒಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಲು ಬೇಕಾದ ಮಾಹಿತಿ ರವಾನಿಸುವು ದಲ್ಲದೆ, ವಿಕೋಪದ ಅನಂತರ ಆಗಬೇಕಾದ ಕೆಲಸಗಳ ಬಗ್ಗೆಯೂ ಸರಕಾರ ಮಾಹಿತಿ ನೀಡಲಿದೆ. ಇದಕ್ಕಾಗಿ, ಭಾರತದ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ಸಮರ್ಥ ಪರಿಸರ ಮತ್ತು ಪರಿಸರ ಅಭಿವೃದ್ಧಿ ಸೊಸೈಟಿ (ಸೀಡ್ಸ್‌) ಜತೆಗೆ ಫೇಸ್‌ಬುಕ್‌ ಕೈ ಜೋಡಿಸಿದೆ. 

ಕಾರ್ಯ ವೈಖರಿ ಹೇಗೆ?: ಈ ಯೋಜನೆಯಡಿ, ಪ್ರಾಕೃತಿಕ ವಿಕೋಪ ಉಂಟಾದ ಪ್ರದೇಶಗಳಿಗೆ ಸಂಬಂಧಪಟ್ಟಂತೆ, “ಲೊಕೇಷನ್‌ ಡೆನ್ಸಿಟಿ ಮ್ಯಾಪ್‌’, “ಮೂವ್‌ಮೆಂಟ್‌ ಮ್ಯಾಪ್‌’, “ಸೇಫ್ಟಿ ಚೆಕ್‌ ಮ್ಯಾಪ್‌’ ಎಂಬ 3 ಬಗೆಯ ಭೂಪಟಗಳ ಸೇವೆ ನೀಡುವ ಮೂಲಕ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡ ಲಿದೆ ಫೇಸ್‌ಬುಕ್‌. “ಲೊಕೇಷನ್‌ ಮ್ಯಾಪ್‌’ ಸಹಾಯ ದಿಂದ ವಿಕೋಪಕ್ಕೆ ತುತ್ತಾದ ಸ್ಥಳದ ಮುಂಚಿನ, ವಿಕೋಪದ ಸಂದರ್ಭದ, ವಿಕೋಪದ ಅನಂತರದ ಸ್ಥಿತಿಗಳ ಮಾಹಿತಿ ರವಾನೆಯಾದರೆ, “ಮೂವ್‌ಮೆಂಟ್‌ ಮ್ಯಾಪ್‌’ ಸಹಾಯದಿಂದ ವಿಕೋಪ ತುತ್ತಾದ ಘಳಿಗೆಯ ಅನಂತರದ ಕೆಲವಾರು ಗಂಟೆಗಳಲ್ಲಿ ಅಲ್ಲಿನ ಜನರು ಸಾಗಿಹೋಗಿರುವ ಅಥವಾ ಸಿಲುಕಿ ಹಾಕಿ ಕೊಂಡಿರುವ ಸ್ಥಳಗಳ ಮಾಹಿತಿ ಸಿಗುತ್ತದೆ.  ಇನ್ನು “ಸೇಫ್ಟಿ ಮ್ಯಾಪ್‌’ ಮೂಲಕ ಸಾರ್ವಜನಿಕರು ವಿಕೋಪಕ್ಕೆ ತುತ್ತಾದ ಸ್ಥಳಗಳಲ್ಲಿರಬಹುದಾದ ತಮ್ಮ ಸಂಬಂಧಿಕರು, ಸ್ನೇಹಿತರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. 

ಸಜ್ಜಾಗುತ್ತಿದ್ದಾರೆ ಸ್ವಯಂ ಸೇವಕರು
ಸೀಡ್ಸ್‌ ಸಹಭಾಗಿತ್ವದಲ್ಲಿ ಫೇಸ್‌ಬುಕ್‌ನಲ್ಲಿ ನೊಂದಾಯಿತ ಸ್ವಯಂ ಸೇವಕರಿಗೆ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕ್ರಮ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಇವರು ಈ ವಿಕೋಪದ ಸಂದರ್ಭಗಳಲ್ಲಿ ಮ್ಯಾಪ್‌ ವ್ಯವಸ್ಥೆಗೆ ನೈಜ ಮಾಹಿತಿ ರವಾನಿಸುವ ಕೆಲಸ ಮಾಡಲಿದ್ದಾರೆ. ಸದ್ಯ ಅಸ್ಸಾಂ ಮತ್ತು ಉತ್ತರಾಖಂಡ ಗಳಲ್ಲಿ ಈ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಫೇಸ್‌ಬುಕ್‌ ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next