ನವದೆಹಲಿ:ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ “Resignmodi” ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ನಡೆಸಿದ್ದರು. ಆದರೆ ಈ ರಿಸೈನ್ ಮೋದಿ ಎಂಬ ಪೋಸ್ಟ್ ಗಳನ್ನು ಫೇಸ್ ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ನಿಮ್ಮ ಹಣ ದುಪ್ಪಟ್ಟಾಗಬೇಕೆ..? ಪೋಸ್ಟ್ ಆಪೀಸ್ ನ ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ
ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳು ಕೂಡಾ ಭಾರತ ಕೋವಿಡ್ ಸೋಂಕಿನ ಮೂಲ ಎಂದು ಆರೋಪಿಸಿದ್ದವು. ಮತ್ತೊಂದೆಡೆ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿ ರಿಸೈನ್ ಮೋದಿ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ನಡೆಸಿದ್ದರು.
ಏತನ್ಮಧ್ಯೆ ರಿಸೈನ್ ಮೋದಿ ಹ್ಯಾಷ್ ಟ್ಯಾಗ್ ನಿರ್ಬಂಧಿಸಲು ಭಾರತ ಸರಕಾರ ಒತ್ತಡ ಹೇರಿತ್ತು ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಫೇಸ್ ಬುಕ್, ಕಣ್ತಪ್ಪಿನಿಂದಾಗಿ ರಿಸೈನ್ ಮೋದಿ ಹ್ಯಾಷ್ ಟ್ಯಾಗ್ ಗೆ ಸಂಬಂಧಿಸಿದ ಪೋಸ್ಟ್ ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತೇ ಹೊರತು, ಭಾರತ ಸರಕಾರದ ಆದೇಶದಿಂದ ಈ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದೆ.
ಫೇಸ್ ಬುಕ್ ಬಳಕೆದಾರರು ತಮ್ಮ ರಿಸೈನ್ ಮೋದಿ ಹ್ಯಾಷ್ ಟ್ಯಾಗ್ ಹುಡುಕಾಡಿದಾಗ ಅದು hide ಆಗಿರುವುದು ಪತ್ತೆಯಾಗಿತ್ತು, ಅಲ್ಲದೇ ಫೇಸ್ ಬುಕ್ ನಿಯಮ ಉಲ್ಲಂಘಿಸಿದ್ದರಿಂದ ಈ ಪೋಸ್ಟ್ ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದಾಗಿ ಸಂದೇಶ ಬಂದಿತ್ತು.
ನಾವು ತಪ್ಪಾಗಿ ಈ ಹ್ಯಾಷ್ ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದೇವೆ ವಿನಃ ಭಾರತ ಸರಕಾರದ ಆದೇಶದ ಮೇರೆಗೆ ಅಲ್ಲ, ನಂತರ ಪೋಸ್ಟ್ ಗಳು ಮತ್ತೆ ಬಳಕೆದಾರರಿಗೆ ಲಭ್ಯವಾಗುವಂತೆ ಕ್ರಮತೆಗೆದುಕೊಳ್ಳಲಾಗಿದೆ ಎಂದು ಫೇಸ್ ಬುಕ್ ವಕ್ತಾರ ಆ್ಯಂಡಿ ಸ್ಟೋನ್ ಬಝ್ ಫೀಡ್ ನ್ಯೂಸ್ ಗೆ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿರು ಕುರಿತು ಟೀಕಿಸಿದ್ದ 50 ಪೋಸ್ಟ್ ಗಳನ್ನು ಟ್ವೀಟರ್ ಕೂಡಾ ನಿರ್ಬಂಧಿಸಿದ್ದು, ಅಷ್ಟೇ ಅಲ್ಲ ಇದನ್ನು ಸರಕಾರದ ಆದೇಶದ ಮೇರೆಗೆ ಪೋಸ್ಟ್ ಗಳನ್ನು ನಿರ್ಬಂಧಿಸಿತ್ತು ಎಂದು ವರದಿ ವಿವರಿಸಿದೆ.