ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುವ ವಿಚಾರ ಜಿಲ್ಲಾ ರಾಜಕಾರಣದಲ್ಲಿ ಹೊಸ ತಲ್ಲಣ ಸೃಷ್ಠಿಸಿದೆ. ಸುಮಲತಾ ಚುನಾವಣೆ ಸ್ಪರ್ಧೆಗೆ ಒಲವು ತೋರಿದ ಬೆನ್ನಲ್ಲೇ ಅಂಬಿ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ವಾರ್ ಶುರು ಮಾಡಿದ್ದಾರೆ.
ಇನ್ನೂ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರ ಅಂತಿಮಗೊಂಡಿಲ್ಲ. ಮಂಡ್ಯ ಕ್ಷೇತ್ರ ಯಾರಿಗೆ ಎನ್ನುವುದು ನಿರ್ಧಾರವಾಗಿಲ್ಲ. ಆದರೂ ಕಾಂಗ್ರೆಸ್ ಟಿಕೆಟ್ ಬಯಸಿರುವ ಸುಮಲತಾ ಚುನಾವಣಾ ಸ್ಪರ್ಧೆಗೆ ಪೂರ್ವತಯಾರಿ ಆರಂಭಿಸಿದ್ದಾರೆ. ಸುಮಲತಾ ಮಂಡ್ಯ ಕ್ಷೇತ್ರಕ್ಕೆ ಆಗಮಿಸಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಹೋಗಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ಸಂಚಲನ ಉಂಟುಮಾಡಿದೆಯಲ್ಲದೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಕದನ ತಾರಕಕ್ಕೇರುವಂತೆ ಮಾಡಿದೆ.
ಬೆಂಬಲಿಗರ ಸವಾಲು: ತಾಕತ್ತಿದ್ದರೆ ನಿಮ್ಮ ನಾಯಕರ ಮಗ (ನಿಖೀಲ್)ನನ್ನು ಕರೆತಂದು ಅಭ್ಯರ್ಥಿ ಮಾಡಿ ಎಂದು ಅಂಬರೀಶ್ ಬೆಂಬಲಿಗರು ಸವಾಲು ಹಾಕಿದರೆ, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಚುನಾವಣೆಯಲ್ಲಿ ಗೆಲ್ಲಿಸಿ ತೋರಿಸ್ತೀವಿ ಅಂತ ಜೆಡಿಎಸ್‌ನವರು ಪ್ರತಿ ಸವಾಲು ಹಾಕಿದ್ದಾರೆ. ಅಂಬರೀಶ್ ಸಹಾಯದಿಂದಲೇ ಸಿ.ಎಸ್.ಪುಟ್ಟರಾಜು ಸಂಸದರಾದರು ಎಂದು ಮತ್ತೆ ಅಂಬಿ ಅಭಿಮಾನಿಗಳು ಚಾಟಿ ಬೀಸಿದರೆ, ಅಂಬರೀಶ್‌ಗೆ ಸಚಿವ ಸ್ಥಾನ ಹೋದಾಗ ನೀವೆಲ್ಲಾ ಎಲ್ಲಿಗೆ ಹೋಗಿದ್ದಿರಿ ಎಂದು ಜೆಡಿಎಸ್‌ನವರು ಕಾಲೆಳೆದಿದ್ದಾರೆ.
ಸುಮಲತಾ ಸ್ಪರ್ಧೆ ಮಾಡುತ್ತಿರುವುದಕ್ಕೆ ಹೆದರಿರೋ ಜೆಡಿಎಸ್ ನಾಯಕರು ಬೇರೆ ಯಾರಾದ್ರೂ ಶಿವರಾಮೇಗೌಡರ ಥರ ಕುರಿ ಸಿಕ್ತಾರಾ ಅಂತ ಹುಡುಕುತ್ತಿದ್ದಾರೆ ಎಂದು ಮತ್ತೆ ಅಂಬರೀಶ್ ಬೆಂಬಲಿಗರು ವ್ಯಂಗ್ಯವಾಡಿದರೆ, ನಮ್ಮ ವರಿಷ್ಠರು ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸದಿಂದ ಉತ್ತರಿಸಿದ್ದಾರೆ.
ದೇವೇಗೌಡರ ಕುಟುಂಬದ ರಾಜಕೀಯ ವ್ಯಭಿಚಾರಕ್ಕೆ ಮಂಡ್ಯ ಜನ ಕೆ.ಆರ್.ಪೇಟೆ ಕೃಷ್ಣ ಮತ್ತು ಚೆಲುವರಯಸ್ವಾಮಿಯಂತಹ ಉತ್ತಮ ನಾಯಕರನ್ನು ಕಳೆದುಕೊಂಡರು. ಇನ್ನಾದರೂ ಇವರ ರಾಜಕೀಯ ದೊಂಬರಾಟಕ್ಕೆ ಇನ್ನಾದರೂ ಇವರ ದೊಂಬರಾಟಕ್ಕೆ ಬಲಿಯಾಗದೆ ಅರಿತು ಬಾಳಿದರೆ ಒಳಿತು ಎಂದು ಅಂಬರೀಶ್ ಕಿವಿಮಾತು ಹೇಳಿದ್ದಾರೆ. ಇದಲ್ಲದೆ, ಅಸಭ್ಯ ಮಾತುಗಳಿಂದ, ಅಂಬರೀಶ್ ಮಾದರಿಯ ಡೈಲಾಗ್‌ಗಳ ಮೂಲಕವೇ ಜೆಡಿಎಸ್‌ನವರನ್ನು ಅಂಬರೀಶ್ ಬೆಂಬಲಿಗರು ಕೆಣಕಿದ್ದರೆ, ಅಷ್ಟೇ ತೀಕ್ಷ್ಣವಾಗಿ ಜೆಡಿಎಸ್‌ನವರೂ ಉತ್ತರ ನೀಡಿದ್ದಾರೆ.
ಪ್ರತಿಯೊಬ್ಬರಿಗೂ ಅಭಿಮಾನಿಗಳು ಇರುತ್ತಾರೆ. ಅವರ ವೈಯಕ್ತಿಕ ಅಭಿಪ್ರಾಯಕ್ಕೆ ಧಕ್ಕೆ ತರುವುದಿಲ್ಲ. ನೀವು ಅಂದುಕೊಂಡಂತೆ ಯಾವ ವಾರ್ ಕೂಡ ಇಲ್ಲ. ಬಹಳ ಜನ, ಬಹಳ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿಕೊಂಡಿದ್ದಾರೆ. ಅದರಲ್ಲಿ ಇಂತಹ ಚರ್ಚೆಗಳು ಸಹಜ. ಸಾಮಾಜಿಕ ಜಾಲ ತಾಣಗಳಿಂದ ಏನೂ ನಡೆಯುವುದಿಲ್ಲ. ಏನೇ ನಡೆದರೂ ಮತದಾರರ ಆಶೀರ್ವಾದದಿಂದ ಮಾತ್ರ ನಡೆಯುತ್ತೆ. ಜಿಲ್ಲೆಯ ಜನ ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೂ ಕಾಯೋಣ.
-ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವ