Advertisement

ಬೋರ್ಡಿಂಗ್‌ ಪಾಸ್‌ಗೆ ಫೇಸ್‌ ರೆಕಗ್ನಿಶನ್‌ : ದೇಶದ 6 ವಿಮಾನ ನಿಲ್ದಾಣಗಳಲ್ಲಿ ಹೊಸ ಸೌಲಭ್ಯ

12:14 AM Apr 17, 2021 | Team Udayavani |

ವಿಮಾನ ನಿಲ್ದಾಣಕ್ಕೆ ಹೋದರೆ ನಿಮ್ಮ ಬೋರ್ಡಿಂಗ್‌ ಪಾಸ್‌ ಅನ್ನು ನೀವು ತೋರಿಸುವ ಅಗತ್ಯವಿರುವುದಿಲ್ಲ. ವಿಮಾನ ನಿಲ್ದಾಣಕ್ಕೆ ಒಮ್ಮೆ ನೀವು ಪ್ರವೇಶ ಪಡೆದರೆ ಬೋರ್ಡಿಂಗ್‌ವರೆಗೆ ನಿಮ್ಮ ಮುಖವು ನಿಮಗೆ ಬೋರ್ಡಿಂಗ್‌ ಪಾಸ್‌ ಮತ್ತು ಐಡಿ ಪ್ರೂಫ್ ಆಗಿ ಕಾರ್ಯನಿರ್ವಹಿಸಲಿದೆ. ಈ ವ್ಯವಸ್ಥೆಯನ್ನು ದೇಶದ ಪ್ರಮುಖ 6 ವಿಮಾನ ನಿಲ್ದಾಣಗಳು ಹೊಂದಲಿವೆ.
ವಿಮಾನಯಾನ ಸಚಿವಾಲಯದ “ಡಿಜಿ ಯಾತ್ರೆ’ ಎಂಬ ಹೊಸ ಯೋಜನೆಯಡಿ ದೇಶದ ವಿಮಾನ ನಿಲ್ದಾಣಗಳಲ್ಲಿ ಮುಖ ಗುರುತಿಸುವಿಕೆ (ಫೇಸ್‌ ರೆಕಗ್ನಿಶನ್‌)ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಯೋಜನೆಯಿಂದ ವಿಮಾನ ನಿಲ್ದಾಣದ ಭದ್ರತ ವ್ಯವಸ್ಥೆಯು ಮತ್ತಷ್ಟು ಬಲಗೊಳ್ಳಲಿದೆ.

Advertisement

ಫೇಸ್‌ ರೆಕಗ್ನಿಶನ್‌ ಯಾವಾಗ, ಎಲ್ಲಿ ಪ್ರಾರಂಭ?
ಮೊದಲ ಹಂತದಲ್ಲಿ ಈ ಸೌಲಭ್ಯ ಕೋಲ್ಕತಾ, ವಾರಾಣಸಿ, ಪುಣೆ, ವಿಜಯವಾಡ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ. ಪ್ರಸ್ತುತ ಈ ತಂತ್ರಜ್ಞಾನದ ಪ್ರಯೋಗವು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿದೆ. ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ 2020ರ ಸೆಪ್ಟಂಬರ್‌ 6ರಂದು ಈ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೊಳಿಸಲಾಯಿತು. ಈಗಾಗಲೇ ಬೆಂಗಳೂರು, ಮುಂಬಯಿ ವಿಮಾನ ನಿಲ್ದಾಣ ಗಳಲ್ಲಿ ಯೋಜನೆ ನಡೆಯುತ್ತಿದೆ. ಇದನ್ನು ಜುಲೈ 2019ರಲ್ಲಿ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿಯೂ ಪ್ರಯೋಗಿಕ ವಾಗಿ ಪರೀಕ್ಷಿಸಲಾಗಿತ್ತು.
ಈ ವರ್ಷದ ಅಂತ್ಯದ ವೇಳೆಗೆ ವಿಮಾನ ನಿಲ್ದಾಣಗಳಲ್ಲಿ ಮುಖ ಗುರುತಿಸುವಿಕೆ ವ್ಯವಸ್ಥೆ ಕಾರ್ಯಾರಂಭ ಮಾಡಲಿದೆ.

ಏನಿದು ಡಿಜಿ ಯಾತ್ರೆ ಯೋಜನೆ?
ಡಿಜಿ ಯಾತ್ರೆ ವಿಮಾನ ಪ್ರಯಾಣವನ್ನು ಸುಲಭ ಮತ್ತು ಕಾಗದ ಬಳಕೆ ಕಡಿಮೆ ಮಾಡುವ ಯೋಜನೆಯಾಗಿದೆ. ಡಿಜಿ ಯಾತ್ರೆ ಹೈಟೆಕ್‌ ಬಾಡಿ ಸ್ಕ್ಯಾನರ್‌ಗಳನ್ನು, ವಿಮಾನ ನಿಲ್ದಾಣಗಳಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲಿದೆ. ಇದು ಪ್ರಯಾಣಿಕರಿಗೆ ಅಲ್ಪಾವಧಿಯಲ್ಲಿಯೇ ಹಲವು ಹಂತದ ಭದ್ರತ ಪರಿಶೀಲನೆಗಳ ಮೂಲಕ ಪ್ರವೇಶ ಮತ್ತು ನಿರ್ಗಮಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪ್ರಯಾಣಿಕರನ್ನು ನೋಂದಾಯಿಸಲಾಗುತ್ತದೆ. ನೋಂದಣಿ ಅಅನಂತರ ಅವರಿಗೆ ಡಿಜಿ ಟ್ರಾವೆಲ್‌ ಐಡಿ ನೀಡಲಾಗುತ್ತದೆ. ನೋಂದಾಯಿಸಿದ ಅಅನಂತರ ನಿಮ್ಮ ಡೇಟಾವನ್ನು ಈ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ. ಇದರ ಬಳಿಕ ನೀವು ಟಿಕೆಟ್‌ ಕಾಯ್ದಿರಿಸುವ ಸಮಯದಲ್ಲಿ ಈ ಐಡಿಯನ್ನು ಬಳಸಬೇಕಾಗುತ್ತದೆ.

ಏನು ಪ್ರಯೋಜನ?
ಪ್ರಯಾಣಿಕರ ಪ್ರವೇಶದ್ವಾರದಿಂದ ವಿಮಾನ ನಿಲ್ದಾಣದ ಬೋರ್ಡಿಂಗ್‌ ಗೇಟ್‌ ವರೆಗೆ ಕಾಗದ ರಹಿತ ಸೇವೆಯನ್ನು ಒದಗಿಸಲಿದೆ. ಇದು ಪ್ರಯಾಣಿಕರ ಸಮಯವನ್ನೂ ಉಳಿಸುತ್ತದೆ. ಜತೆಗೆ ವಿಮಾನ ನಿಲ್ದಾಣದ ಸಮೀಪ ಪ್ರಯಾಣಿಕರ ನೈಜ ಸಮಯದ ಮಾಹಿತಿಯೂ ಇರುತ್ತದೆ. ಇದರ ಜತೆಗೆ ಭದ್ರತೆಯೂ ಉತ್ತಮವಾಗಿರುತ್ತದೆ.

ಜನದಟ್ಟಣೆ ನಿಯಂತ್ರಣ ಪ್ರಯಾಣಿಕರು ವಿಮಾನ ನಿಲ್ದಾಣದ ವಿವಿಧ ಗೇಟ್‌ಗಳಲ್ಲಿ ದಾಖಲೆಗಳನ್ನು ತೋರಿಸಬೇಕಾಗಿಲ್ಲ. ಅವರು ಕೇವಲ ಐದು ನಿಮಿಷಗಳ ಕಾಲ ಬೇರೆ ಬೇರೆ ಗೇಟ್‌ನಲ್ಲಿರುವ ಕೆಮರಾವನ್ನು ನೋಡಬೇಕು ಮತ್ತು ಆ ಬಳಿಕ ಅವರು ಮುಂದೆ ಸಾಗಬಹುದು. ಇದರಿಂದ ಜನಸಂದಣಿ ಕಡಿಮೆಯಾಗುತ್ತದೆ.

Advertisement

ಸುಧಾರಣೆ ಯತ್ನ
ಸದ್ಯ ಮಾಸ್ಕ್ ಇದ್ದರೆ ಇದು ಕೆಲಸ ಮಾಡುವುದಿಲ್ಲ. ಮಾಸ್ಕ್, ಕನ್ನಡಕಗಳನ್ನು ಧರಿಸಿದ್ದರೂ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗುವಂತೆ ತಂತ್ರಜ್ಞಾನದಲ್ಲಿ ಸುಧಾರಣೆ ತರಲು ತಜ್ಞರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಗೌಪ್ಯತೆಯ ರಕ್ಷಣೆ: ಡಿಜಿಟಲೀ ಕರಣದ ಅಅನಂತರ ಬಳಕೆದಾರರ ಗೌಪ್ಯತೆಯ ಪ್ರಶ್ನೆ ಬರುತ್ತದೆ. ಇಲ್ಲಿ ವಿಮಾನ ಟೇಕ್‌ಆಫ್ ಆದ 1 ಗಂಟೆಯ ಅಅನಂತರ ಅಥವಾ ಪ್ರಯಾಣ ಪೂರ್ಣಗೊಂಡ ತತ್‌ಕ್ಷಣ ಪ್ರಯಾಣಿಕರ ಡೇಟಾವನ್ನು ಸಿಸ್ಟಮ್‌ನಿಂದ ಅಳಿಸಲಾಗುತ್ತದೆ. ಫೋಟೋ ಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ತಂತ್ರಜ್ಞಾನದ ಕಾರ್ಯನಿರ್ವಹಣೆ ಹೇಗೆ?
ಈ ತಂತ್ರಜ್ಞಾನದ ಮೂಲಕ ವ್ಯಕ್ತಿಯ ಫೋಟೋಗಳನ್ನು ಅವನ ಮುಖದ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಡಿಜಿಟಲ್‌ ಡೇಟಾಬೇಸ್‌ಗಳಾಗಿ ಪರಿವರ್ತಿಸಲಾಗುತ್ತದೆ. ಇದಕ್ಕಾಗಿ ನಿಮ್ಮ ಮುಖದ ರಚನೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ. ಈ ಡಿಜಿಟಲ್‌ ಡೇಟಾವನ್ನು ಫೇಸ್‌ಪ್ರಿಂಟ್‌ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಫಿಂಗರ್‌ಪ್ರಿಂಟ್‌ ಹೇಗೆ ಭಿನ್ನವಾಗಿದೆಯೋ ಹಾಗೆಯೇ ಪ್ರತಿಯೊಬ್ಬರ ಫೇಸ್‌ಪ್ರಿಂಟ್‌ ಕೂಡ ಭಿನ್ನವಾಗಿರುತ್ತದೆ. ಸಂಬಂಧಪಟ್ಟ ವ್ಯಕ್ತಿಯನ್ನು ಗುರುತಿಸಲು ಈ ಫೇಸ್‌ಪ್ರಿಂಟ್‌ ಅನ್ನು ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next