Advertisement

ಸಮನ್ವಯದಿಂದ ಪ್ರವಾಹ ಎದುರಿಸಿ

02:30 PM Aug 14, 2020 | Suhan S |

ರಾಯಚೂರು: ನಾರಾಯಣಪುರ ಜಲಾಶಯದಿಂದ 2-3 ದಿನಗಳಲ್ಲಿ ಕೃಷ್ಣಾನದಿಗೆ ಲಕ್ಷಾಂತರ ಕ್ಯೂಸೆಕ್‌ ನೀರು ಹರಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ದೇವದುರ್ಗದ ಹೂವಿನಹೆಡಗಿ ಮತ್ತು ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರವಾಹ ಕುರಿತು ಪೊಲೀಸ್‌ ಅಧಿಕಾರಿಗಳು ಮತ್ತು ಎನ್‌ಡಿಆರ್‌ ಎಫ್‌ ತಂಡದೊಂದಿಗೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೂವಿನಹೆಡಗಿ ಬಳಿ ಸುಮಾರು 2.25 ಲಕ್ಷ ಕ್ಯೂಸೆಕ್‌ ಮತ್ತು ಶೀಲಹಳ್ಳಿ ಸೇತುವೆ ಬಳಿ 1.5 ಲಕ್ಷ ಕ್ಯೂಸೆಕ್‌ ನೀರಿನ ಮಟ್ಟವಿದೆ. ಸೇತುವೆ ಮುಳುಗಡೆಯಾಗುವ ಸಂಭವವಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನದಿ ಹತ್ತಿರ ಜನ, ಜಾನುವಾರು ತೆರಳದಂತೆ ಪೊಲೀಸರನ್ನು ನಿಯೋಜಿಸಬೇಕು ಎಂದರು. ನದಿ ತೀರದ ಗ್ರಾಮಗಳನ್ನು ಗುರುತಿಸಿ ಸಂತ್ರಸ್ತರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಅವರಿಗೆ ಅಗತ್ಯ ನೀರು, ಆಹಾರ, ಊಟ ಸೌಲಭ್ಯ ಕಲ್ಪಿಸಬೇಕು. ತಾಲೂಕು ಕೇಂದ್ರಗಳಲ್ಲಿ ಕೋವಿಡ್‌-19, ಕೆನಾಲ್‌ ಬಳಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಸಿಬ್ಬಂದಿಗೆ ಪ್ರವಾಹದ ಹೊಣೆ ನೀಡಬೇಕು. ಲಿಂಗಸುಗೂರು, ರಾಯಚೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಟಾಸ್ಟ್‌ಫೋರ್ಸ್‌ ಸಮಿತಿ ರಚಿಸಿ ಆಯಾ ತಾಲೂಕುಗಳಲ್ಲಿ ಡಿವೈಎಸ್‌ಪಿ, ಸಿಪಿಐ  ಧಿಕಾರಿಗಳ ಸಹಭಾಗಿತ್ವದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ ನದಿ ತೀರದ ಪ್ರದೇಶಗಳ ಮೇಲೆನಿಗಾವಹಿಸಬೇಕು ಎಂದರು.

ಎಸ್‌ಪಿ ಪ್ರಕಾಶ ನಿಕ್ಕಂ ಮಾತನಾಡಿ, ಎನ್‌ಡಿಆರ್‌ಎಫ್‌ ತಂಡದೊಂದಿಗೆ ತಾಲೂಕು ಅಧಿಕಾರಿಗಳು ನಿರಂತರ ಸಂಪರ್ಕ ಹೊಂದಿರಬೇಕು ಎಂದರು. ಎನ್‌ಡಿಆರ್‌ಎಫ್‌ ತಂಡದ ಇನ್ಸ್ಪೆಕ್ಟರ್‌ ದಿವಾಕರಸಿಂಗ್‌ ರವಿ ಮಾತನಾಡಿ, ಕೃಷ್ಣಾ ನದಿ ತೀರದಲ್ಲಿ ಸಂಭವಿಸುವ ಪ್ರವಾಹ ಸ್ಥಳಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಗ್ನಿಶಾಮಕ ದಳ ಮತ್ತು ಬೋಟಿಂಗ್‌ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಎಡಿಸಿ ದುರುಗೇಶ, ಎಸಿ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ತಹಶೀಲ್ದಾರ್‌ ಡಾ| ಹಂಪಣ್ಣ, ಡಿವೈಎಸ್‌ಪಿ ಶಿವನಗೌಡ ಪಾಟೀಲ, ಸಿಪಿಐ, ಪಿಎಸ್‌ಐ, ಅಗ್ನಿಶಾಮಕ ದಳ, ಎನ್‌ಡಿಆರ್‌ ಎಫ್‌ ತಂಡದ ಸಿಬ್ಬಂದಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next