ಬಳ್ಳಾರಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯಲು ಭಯ, ಆತಂಕಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವ ಮೂಲಕ ಸಂಭ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಾಮಪ್ಪ ಸಲಹೆ ನೀಡಿದರು.
ನಗರದ ರಾಘವ ಕಲಾಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರವಾಗುತ್ತಿವೆ ಎಂದು ವಿದ್ಯಾರ್ಥಿಗಳು ಭಯಪಡದೆ, ಆತಂಕಕ್ಕೆ ಒಳಗಾಗದೆ, ಕಡಿಮೆ ಸಮಯದಲ್ಲಿ ಹೆಚ್ಚು ಓದುವುದು, ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದಕ್ಕಾಗಿ ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳುವ ಮೂಲಕ ಪರೀಕ್ಷೆಯನ್ನು ದೃಢವಿಶ್ವಾಸದಿಂದ ಬರೆಯಬೇಕು ಎಂದರು.
ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರ ಪರಿಣಾಮಕಾರಿಯಾಗಿದ್ದು, ಎಲ್ಲರೂ ಉತ್ತೀರ್ಣರಾಗಬೇಕು. ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯನವರು ಕಡುಬಡತನದಲ್ಲಿದ್ದರೂ ಓದಿ ಸಾಧನೆ ಮಾಡಿದ್ದರು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ, ದೃಢವಾದ ನಂಬಿಕೆ, ಸತತ ಪ್ರಯತ್ನದಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಪರೀಕ್ಷೆ ಬರೆಯಿರಿ ಎಂದು ಹೇಳಿದರು.
ಗ್ರಾಮೀಣ ಡಿವೈಎಸ್‌ಪಿ ಎಂ.ಜಿ. ಸತ್ಯನಾರಾಯಣರಾವ್ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳು ಸಮಾಜಕ್ಕೆ ಶ್ರೇಷ್ಠರು. ಇವರ ಮಹತ್ವವನ್ನು ಅರಿತು ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿಸಿ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಾಮಂದಿರ ಮಾಲೀಕ ಲಕ್ಷ್ಮೀಕಾಂತ್ ರೆಡ್ಡಿ, ಗೌರವಾಧ್ಯಕ್ಷ ಡಾ| ಪಿ.ರಾಧಾಕೃಷ್ಣ, ಉಪಾಧ್ಯಕ್ಷ ಜಗದೀಶ್, ಹನುಮಂತರೆಡ್ಡಿ, ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ಧಲಿಂಗಮೂರ್ತಿ, ವಿಷಯ ಪರಿವೀಕ್ಷಕ ಬಸವರಾಜ, ಎಸೆಸೆಲ್ಸಿ ನೋಡಲ್ ಅಧಿಕಾರಿ ಗೂಳಪ್ಪ ಇದ್ದರು. ಸಂಪನ್ಮೂಲ ವ್ಯಕ್ತಿಗಳಾದ ಪುರುಷೋತ್ತಮ ಆಂಗ್ಲ-ಗಣಿತ ವಿಷಯವನ್ನು ಬೋಧಿಸಿದರು. ಹರಿಪ್ರಸಾದ್ ಕನ್ನಡ, ದೇವರಾಜ್ ವಿಜ್ಞಾನ ವಿಷಯಗಳನ್ನು ಬೋಧಿಸಿದರು.
ನಗರದ ಎಲ್ಲ ಪ್ರೌಢಶಾಲೆಯಿಂದ ಹತ್ತನೇ ತರಗತಿಯ 800 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಗುರು ಮೆಹತಾಬ್ ಪ್ರಾಸ್ತಾವಿಕ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಎ.ಎರ್ರಿಸ್ವಾಮಿ ಸ್ವಾಗತಿಸಿದರು. ಜಾನಪದ ಕಲಾವಿದ ಜಡೇಶ್ ಎಮ್ಮಿಗನೂರು, ಎಚ್.ಸುಂಕಪ್ಪ ಶಿಕ್ಷಣ ಗೀತೆಗಳನ್ನು ಹಾಡಿದರು. ಕನ್ನಡಪರ ಸಂಘಟನೆಯ ಚಂದ್ರಶೇಖರ ಆಚಾರ್ ನಿರೂಪಿಸಿದರು.