Advertisement

ಕೋವಿಡ್ ವೈರಸ್‌ ಎದುರಿಸಿ ಬದುಕುವ ಕಲೆ ರೂಢಿಸಿಕೊಳ್ಳಿ

12:52 PM Jun 08, 2020 | Suhan S |

ಬೆಳಗಾವಿ: ಕೋವಿಡ್ ಬಗ್ಗೆ ಭಯ ಪಡಬೇಡಿ. ಆದರೆ ಇದನ್ನು ಎದುರಿಸಿ ಬದುಕುವ ಕಲೆಯನ್ನು ಕಲಿಯಬೇಕು. ಸ್ವಚ್ಛತೆಯ ಜೀವನ ಕ್ರಮ ಅನುಸರಿಸುವ ಮೂಲಕ ಕೋವಿಡ್ ಎದುರಿಸಬೇಕು ಎಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

Advertisement

ನಗರದ ಗಣೇಶಪುರದ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಸುವಿಚಾರ ಚಿಂತನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ನಾವೆಲ್ಲರೂ ಇಂದು ಮಡಿವಂತರಾಗಬೇಕಾಗಿದೆ. ಮಡಿವಂತಿಕೆಯೆಂದರೆ ಅಸ್ಪೃಶ್ಯತೆ ಎಂದು ಭಾವಿಸಬಾರದು. ಸ್ವತ್ಛತೆಯೇ ಮಡಿವಂತಿಕೆ. ಹೊರಗಿನಿಂದ ಮನೆಗೆ ಬಂದಾಗ, ಮನೆಯ ಒಳಗೆ ಹೋಗುವ ಮುನ್ನ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

ಉತ್ತಮವಾದ ಯೋಚನೆಗಳನ್ನು ಮಾಡಬೇಕು. ಉತ್ತಮವಾದ ಆಹಾರ ಸೇವಿಸಬೇಕು. ಬಿಸಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಕಾಲ ಕಲಿಸುತ್ತಿರುವ ಪಾಠ ಅರ್ಥ ಮಾಡಿಕೊಂಡು ಆಗಿರುವ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಸಮಯದ ಪಾಲನೆ ಮಾಡಬೇಕು ಎಂದರು. ದಂಡು ಮಂಡಳಿ ಸದಸ್ಯ ಚಂದ್ರಶೇಖರಯ್ಯ ಸವಡಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಶ್ರೀ ಮಠದಲ್ಲಿ ಭಕ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಶ್ರೀ ಮಠದ ದಾಸೋಹ ಸೇವೆ ನಿರಂತರವಾಗಿ ನಡೆದಿತ್ತು. ಭಕ್ತರು ಕೋವಿಡ್ ತಡೆಯುವ ಮಾರ್ಗಗಳನ್ನು ಅನುಸರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತಾದಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next