Advertisement

ನಗರದಲ್ಲಿ ಮತ್ತೂಂದು ನಕಲಿ ಚೈನ್‌ ಲಿಂಕ್‌ ಸ್ಕೀಂ ಬೆಳಕಿಗೆ :ಕೇರಳ ಮೂಲದ ಮಾಜಿ ಸೈನಿಕನ ಬಂಧನ

07:43 PM Jun 05, 2021 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೂಂದು ನಕಲಿ ಚೈನ್‌ ಲಿಂಕ್‌ ಸ್ಕೀಂ ಬೆಳಕಿಗೆ ಬಂದಿದೆ. ಮನೆಯಲ್ಲೇ ಕುಳಿತು ಆನ್‌ ಲೈನ್‌ ಜಾಹೀರಾತುಗಳನ್ನು ವೀಕ್ಷಿಸಿದರೆ ಹಣ ಕೊಡುವುದಾಗಿ ನಕಲಿ ಸ್ಕೀಂ ಆರಂಭಿಸಿ ಸಾರ್ವಜನಿಕರಿಂದ ಸಾವಿರಾರು ರೂ. ಸಂಗ್ರಹಿಸಿದ್ದ ಕೇರಳ ಮೂಲದ ಮಾಜಿ ಸೈನಿಕ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಕೇರಳದ ಕೆ.ವಿ.ಜಾನಿ (51) ಬಂಧಿತ. ಈತನ ಖಾತೆಯಲ್ಲಿ 3.70 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ಸೇನೆಯಿಂದ ನಿವೃತ್ತಿ ಪಡೆದಿದ್ದ ಆರೋಪಿ ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸಣ್ಣ-ಪುಟ್ಟ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ. ನಾಲ್ಕು ತಿಂಗಳ ಹಿಂದೆ ಬಸವೇಶ್ವರನಗರದ ಕೆಎಚ್‌ಬಿ ಕಾಲೋನಿಯ ಶ್ರೀಸಾಯಿ ವೈಭವ್‌ ಕಾಂಪ್ಲೆಕ್ಸ್‌ ನ 1ನೇ ಮಹಡಿಯಲ್ಲಿ ಮೇ. ಜೆಎಎ ಲೈಪ್‌ ಸ್ಟೈಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿ ಸ್ಥಾಪಿಸಿದ್ದಾನೆ. ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಂಪೆನಿ ಕುರಿತು ಪ್ರಚಾರ ಮಾಡಿ ಆಕರ್ಷಕ ಸ್ಕೀಂಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ :ಸಮಸ್ಯೆ ಇತ್ಯರ್ಥಕ್ಕೆ ಮೋದಿ-ಜಿನ್‌ಪಿಂಗ್‌ ಸಮರ್ಥ : ರಷ್ಯಾ ಅಧ್ಯಕ್ಷ ಪುಟಿನ್‌ ಅಭಿಮತ

ಜಾಹೀರಾತು ಹೆಸರಿನಲ್ಲಿ ವಂಚನೆ
ಕಂಪನಿಯ ನಿರ್ದೇಶಕನಾಗಿರುವ ಆರೋಪಿ ಇದೇ ಜೂನ್‌ ನಲ್ಲಿ ಜಾಹಿರಾತು ಪ್ರಾಜೆಕ್ಟ್ ಅನ್ನು ಬಿಡುಗಡೆಗೆ ಸಿದ್ದತೆ ನಡೆಸಿದ್ದ. ಈ ಸಂಬಂಧ ಅಮೆರಿಕಾ ಸೇರಿ ದೇಶ-ವಿದೇಶದ ಹಲವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಕಂಪೆನಿಯ www.jaalifestyle.com ವೆಬ್‌ ಸೈಟ್‌ ಮೂಲಕ ಸಾರ್ವಜನಿಕರಿಗೆ ಆಕರ್ಷಕ ಸ್ಕೀಂ ಬಿಡುಗಡೆ ಮಾಡಿದ್ದ. ಈ ವೆಬ್‌ ಸೈಟ್‌ ಮೂಲಕ 1109 ರೂ. ಪಾವತಿಸಿದವರಿಗೆ ಕಂಪನಿಯ ಸದಸ್ಯತ್ವ ನೀಡುತ್ತಿದ್ದ. ಜಾಹಿರಾತು ಪ್ರಾಜೆಕ್ಟ್ ಆರಂಭವಾದ ಬಳಿಕ ಪ್ರತಿದಿನ 60 ಜಾಹಿರಾತುಗಳನ್ನು ವೀಕ್ಷಿಸಿದರೆ ಪ್ರತಿ ಜಾಹಿರಾತಿಗೆ ನಾಲ್ಕು ರೂ.ಗಳಂತೆ ದಿನಕ್ಕೆ 240 ರೂ., ತಿಂಗಳಿಗೆ 7,200 ರೂ. ವರ್ಷಕ್ಕೆ 86.400 ರೂ. ಸಂಪಾದನೆ ಮಾಡಬಹುದು. ಬಳಿಕ ಈ ಪ್ರಾಜೆಕ್ಟ್ಗೆ ಬೇರೆ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿ, ಅವರಿಂದ ಕಂಪನಿಗೆ 1,109 ರೂ. ಕೊಡಿಸಿ ಚೈನ್‌ ಲಿಂಕ್‌ ಮಾದರಿಯಲ್ಲಿ ಕೆಲಸ ಮಾಡಿದರೆ ಇಷ್ಟು ಮಂದಿ ಸೇರ್ಪಡೆಗೆ ಇಷ್ಟು ಹಣ ಎಂದು ನಿಗದಿ ಮಾಡಲಾಗುತ್ತದೆ. ಅಲ್ಲದೆ, ಒಂದೆರಡು ತಿಂಗಳಲ್ಲಿ ವಿಶ್ವಾದ್ಯಂತ 30 ಲಕ್ಷ ಮಂದಿ ಸೇರ್ಪಡೆಗೊಂಡ ಬಳಿಕ ಜಾಹಿರಾತು ಬಿಡುಗಡೆ ಮಾಡಲಾಗುತ್ತದೆ. ಅದನ್ನು ವೀಕ್ಷಿಸಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿದ್ದ ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

Advertisement

ಜೂಮ್‌ ಆ್ಯಪ್‌ ಮೂಲಕ ಮೀಟಿಂಗ್‌
ಚೈನ್‌ ಲಿಂಕ್‌ ಮಾದರಿಯಲ್ಲಿ 10 ಮಂದಿ ಸೇರಿಸಿದರೆ 4,400 ರೂ., 100 ಮಂದಿಗೆ 17,600 ರೂ. 1000 ಮಂದಿಗೆ 1,76,000 ರೂ. 10,000 ಮಂದಿಗೆ 17,60,000 ರೂ., ಒಂದು ಲಕ್ಷ ಮಂದಿಗೆ 1,76,00,000 ರೂ. ಹತ್ತು ಲಕ್ಷ ಮಂದಿಗೆ 26,40,00,000 ರೂ. ಒಂದು ಕೋಟಿ ಮಂದಿಗೆ 352,00,00,000 ರೂ. ಕೊಡುವುದಾಗಿ ಆಸೆ ಹುಟ್ಟಿಸಿದ್ದಾನೆ . ಅಲ್ಲದೆ, ದೇಶದಾದ್ಯಂತ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಜೂಮ್‌ ಆ್ಯಪ್‌ ಮೂಲಕ ಸಾರ್ವಜನಿಕರ ಜತೆ ಮೀಟಿಂಗ್‌ಗಳನ್ನು ಮಾಡಿ ಜನರಿಗೆ ಪ್ರೇರೇಪಿಸುತ್ತ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ನಾಲ್ಕು ಲಕ್ಷ ಮಂದಿಗೆ ವಂಚನೆ
ಆರೋಪಿ ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ಮಂದಿಯಿಂದ ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಈತನ ಖಾತೆಯಲ್ಲಿದ್ದ 3.7 ಕೋಟಿ ರೂ. ಜಪ್ತಿ ಮಾಡಲಾಗಿದೆ. ನಗರದಲ್ಲಿ ಸುಮಾರು 15-20 ಸಾವಿರ ಮಂದಿ ಹಣ ಹೂಡಿಕೆ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ವಾಟ್ಸ್‌ ಆ್ಯಪ್‌, ವೆಬ್‌ ಸೈಟ್‌ ಮಾತ್ರವಲ್ಲದೆ, ಯುಟ್ಯೂಬ್‌ ಮೂಲಕ ಕೂಡ ಸಾರ್ವಜನಿಕರನ್ನು ಸೆಳೆಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಹೂಡಿಕೆದಾರರು ದೂರು ನೀಡಿ-ಸಂದೀಪ್‌ ಪಾಟೀಲ್‌
ವಂಚನೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಆರೋಪಿ ವೆಬ್‌ ಸೈಟ್‌ ಆರಂಭಿಸಿ ಆಕರ್ಷಿಕ ಸ್ಕೀಂಗಳನ್ನು ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ. ಜಾಹಿರಾತು ವೀಕ್ಷಿಸಿದರೆ ಹಣ ನೀಡುವುದಾಗಿ ಹಣ ಸಂಗ್ರಹಿಸಿದ್ದಾನೆ. ಈ ರೀತಿಯ ಆಮಿಷಕ್ಕೊಳಗಾಗಿ ಆರೋಪಿಯ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದವರೂ ಸಿಸಿಬಿಗೆ ದೂರು ನೀಡಬಹುದು. ಸದ್ಯ ಆರೋಪಿಯ ವಿರುದ್ಧ ಸುಮೋಟೋ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next