ತಿರುವನಂತಪುರ : “ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕರಿಗೆ ಲೈಂಗಿಕ ಸುಖ ಕೊಟ್ಟು ನಟನೆಗೆ ಅವಕಾಶ ಪಡೆಯುವ ಕ್ರಮವೇ ಇಲ್ಲ; ಒಂದೇ ವೇಳೆ ಅಂತಹ ಪರಿಸ್ಥಿತಿ ಇದೆ ಎಂದಾದರೆ ಅದಕ್ಕೆ “ಕೆಟ್ಟ ಹೆಂಗಸರೇ ಕಾರಣ’, ಅವರು ಮಾತ್ರವೇ ನಟನಾ ಅವಕಾಶ ಪಡೆಯಲು ಹಾಸಿಗೆ ಹಂಚಿಕೊಂಡಾರು’ ಎಂದು ಕೇರಳದ ತೃಶ್ಶೂರು ಜಿಲ್ಲೆಯ ಚಾಲಕುಡಿ ಕ್ಷೇತ್ರದ ಪಕ್ಷೇತರ ಸಂಸದ ವರೀದ್ ತೆಕ್ಕತ್ತಲ ಹೇಳಿದ್ದಾರೆ ಮತ್ತು ಆ ಮೂಲಕ ಸಿನೆಮಾ ರಂಗದ ಕುರಿತಾದ ತಮ್ಮ ಅಮಾಯಕತೆಯನ್ನು ಪ್ರದರ್ಶಿಸಿದ್ದಾರೆ.
“ಮಲಯಾಳಂ ಚಿತ್ರರಂಗದಲ್ಲಿ ಬಹಳ ಹಿಂದೆ ಇದ್ದಿರಬಹುದಾದ ಆ ಸ್ಥಿತಿ (ಲೈಂಗಿಕ ಸುಖ ಕೊಟ್ಟು ನಟನಾ ಅವಕಾಶ ಪಡೆಯುವುದು) ಇಂದು ಇಲ್ಲ. ಯಾವುದೇ ಸಿನೆಮಾ ತಾರೆಯ ಬಗ್ಗೆ ಯಾರಾದರೂ ಕೆಟ್ಟದಾಗಿ ಹೇಳಿದರೆ, ನೀವು ಪತ್ರಕರ್ತರೆಲ್ಲರಿಗೂ ಅದು ಕೂಡಲೇ ಗೊತ್ತಾಗಿಬಿಡುತ್ತದೆ; ಆದರೆ ಮಲಯಾಳಂ ಚಿತ್ರರಂಗದಲ್ಲಿ ಅಂಥದ್ದೇನೂ ಇಲ್ಲ; ಒಂದು ವೇಳೆ ಚಿತ್ರರಂಗದಲ್ಲಿ ಕೆಟ್ಟ ಹೆಂಗಸರಿದ್ದರೆ ಅವರು ಮಾತ್ರವೇ ಹಾಸಿಗೆಯನ್ನು ಹಂಚಿಕೊಂಡು ತಾರಾಗಣದಲ್ಲಿ ಅವಕಾಶ ಪಡೆಯುತ್ತಾರೆ’ ಎಂದು ತೆಕ್ಕತ್ತಲ ಹೇಳಿದರು.
ಮಲಯಾಳಂ ಚಿತ್ರರಂಗದಲ್ಲಿ ದೇಹ ಮಾರಿಕೊಂಡು ನಟನಾ ಅವಕಾಶ ಪಡೆಯುವ ಕ್ರಮ ಇದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತೆಕ್ಕತ್ತಲ ಉತ್ತರಿಸುತ್ತಿದ್ದರು.
ತೆಕ್ಕತ್ತಲ ಅವರ ಈ ಅತೀ ಮುಗ್ಧ ಹೇಳಿಕೆಯನ್ನು ಮಲಯಾಳಂ ಚಿತ್ರರಂಗದಲ್ಲಿನ ಮಹಿಳೆಯರು ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವ ಹುಡುಗಿಯರಿಗೆ ಈ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ ಎಂದವರು ಹೇಳಿದ್ದಾರೆ.
ತನ್ನ ಹೇಳಿಕೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತ ತೆಕ್ಕತ್ತಲ ಅವರು, “ಮಾಧ್ಯಮದವರು ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿದ್ದಾರೆ. ನಾನು ಭಾವಿಸಿಕೊಂಡ ರೀತಿಯಲ್ಲಿ ನನ್ನ ಮಾತುಗಳನ್ನು ಅವರು ಸಾದರಪಡಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.