Advertisement

ನೇತ್ರದಾನ ಮಾಹಿತಿ ಕಾರ್ಯಾಗಾರ

10:41 AM Nov 25, 2017 | |

ಲೇಡಿಹಿಲ್‌: ಅಂಗಾಂಗ ಜಾಗೃತಿ ಬಗ್ಗೆ ಜಿಲ್ಲೆಯ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ 10 ಸಾವಿರ ನೇತ್ರದಾನಿಗಳನ್ನು ಗುರುತಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್‌ ಸಿಇಒ ಡಾ| ಎಂ. ಆರ್‌. ರವಿ ಅವರು ಹೇಳಿದರು.

Advertisement

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ‘ಪತ್ರಕರ್ತರಿಗೆ ಮಾನಸಿಕ ಒತ್ತಡ ನಿರ್ವಹಣೆ ಮತ್ತು ನೇತ್ರದಾನ’ದ ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ರಾಜ್ಯದ ಇತರೆಡೆಗಳಲ್ಲಿ ಅಂಗಾಂಗ ಜಾಗೃತಿ ಬಗ್ಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ದ.ಕ. ಜಿಲ್ಲೆಯಲ್ಲಿಯೂ ಜನರು ಈ ಬಗ್ಗೆ ಯೋಚಿಸಬೇಕು. ಅಂಗಾಂಗ ದಾನ ಮಾಡುವುದರಿಂದ ಜೀವವೊಂದನ್ನು ಬದುಕಿಸಿದ ತೃಪ್ತಿಯೂ ಸಿಕ್ಕಿದಂತಾಗುತ್ತದೆ ಎಂದರು.

ಒತ್ತಡ ನಿರ್ವಹಣೆ ಒಂದು ವಿಜ್ಞಾನ. ಮನುಷ್ಯನಿಗೆ ನಿತ್ಯ ಕೆಲಸಗಳ ನಡುವೆ ಮನಸ್ಸಿಗೆ ವಿಶ್ರಾಂತಿ ದೊರಕದೇ ಇದ್ದಾಗ ಒತ್ತಡ ಜಾಸ್ತಿಯಾಗುತ್ತದೆ. ಸಮಾಜದ ಬಗ್ಗೆಯೇ ಹೆಚ್ಚು ಯೋಚಿಸುವ ಪತ್ರಕರ್ತರು ತಮ್ಮ ದೇಹ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ, ಮನೋ ವೈದ್ಯ ಡಾ| ಶ್ರೀನಿವಾಸ ಭಟ್‌ ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ಮಾತನಾಡಿದರು. ತನ್ನದೇ ಆದ ಭ್ರಮೆ ಮತ್ತು ಮೆದುಳಿನ ರಾಸಾಯನಿಕ ಬದಲಾವಣೆಗಳಿಂದ ಮಾನಸಿಕ ಕಾಯಿಲೆ ಉಂಟಾಗುತ್ತದೆ. ಆತ್ಮವಿಶ್ವಾಸ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇದ್ದಾಗ ಒತ್ತಡ ನಿರ್ವಹಣೆ ಅಸಾಧ್ಯವಾಗುವುದಿಲ್ಲ ಎಂದರು.

Advertisement

ಪತ್ರಕರ್ತರಾದ ಜೀವನ್‌ ಮತ್ತು ಗಣೇಶ್‌ ಅವರಿಗೆ ನೇತ್ರದಾನದ ಘೋಷಣಾಪತ್ರವನ್ನು ಜಿ. ಪಂ. ಸಿಇಒ ಡಾ| ಎಂ. ಆರ್‌. ರವಿ ಹಸ್ತಾಂತರಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ನಾಯಕ್‌ ಇಂದಾಜೆ, ವೈದ್ಯಾಧಿಕಾರಿ ಡಾ| ರತ್ನಾಕರ್‌, ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಮಾನಸಿಕ ಕಾಯಿಲೆಗೆ ಶೀಘ್ರ ಚಿಕಿತ್ಸೆ ಬೇಕು
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆಯಿಂದ ಮನೋಚೈತನ್ಯ ಯೋಜನೆ ಮೂಲಕ ಚಿಕಿತ್ಸೆ ಲಭ್ಯವಿದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ‘ಮಾನಸಾಧಾರ’ ಪುನರ್ವವಸತಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ ಎಂದರು. ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕುಟುಂಬ ಮತ್ತು ಸಮಾಜ ಬೆಂಬಲ ನೀಡಿ ಅವರನ್ನು ಚೇತರಿಸಿಕೊಳ್ಳುವಲ್ಲಿ ಸಹಕರಿಸಬೇಕು. ಆರೋಗ್ಯದ ಬದಲಾವಣೆಗಳನ್ನು ಗುರುತಿಸಿ ತತ್‌ಕ್ಷಣ ಚಿಕಿತ್ಸೆ ನೀಡಿದಾಗ ಬೇಗ ಗುಣಮುಖರಾಗಲು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next