Advertisement
ಈ ಎಲ್ಲ ಆಚರಣೆಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದವುಗಳಾಗಿವೆ. ಆದರೂ ನಾವೆಲ್ಲರೂ ತಿಳಿಯಬೇಕಾದ ಪ್ರಮುಖ ವಿಚಾರವೇನೆಂದರೆ ಒಳ್ಳೆಯದು ಎಲ್ಲಿಂದ ಬಂದರೂ ಅದನ್ನು ನಾವು ಸ್ವೀಕರಿಸಬೇಕು, ಪಡೆಯಬೇಕು,ಅರಿಯಬೇಕು,ಅರಿತು ನಡೆಯಬೇಕು.ಹಾಗಾಗಿ ನಾವು ಅವುಗಳನ್ನು ಸ್ವೀಕರಿಸಿದ್ದೇವೆ.
Related Articles
Advertisement
ಸ್ನೇಹಕ್ಕೆ ಸ್ನೇಹವೇ ಸಾಟಿ ಸ್ನೇಹವಿಲ್ಲದೆ ಮನುಷ್ಯ ಬದುಕಲಾರ ಏಕೆಂದರೆ ಮಾನವ ಸಂಘಜೀವಿ ತನ್ನ ಭಾವನೆಗಳನ್ನು,ತನ್ನ ತುಡಿತ ಮಿಡಿತಗಳನ್ನು,ನೋವು ನಲಿವುಗಳನ್ನು ಮನೆಯಲ್ಲಿ ಯಾರೊಂದಿಗೂ ಹೇಳಿಕೊಳ್ಳಲಾಗದ ಹಂಚಿಕೊಳ್ಳಲಾಗದ ವಿಷಯಗಳನ್ನು ಮನಬಿಚ್ಚಿ ಮಾತನಾಡಲು ಸಾಧ್ಯವಾಗುವುದು ಗೆಳೆಯರೊಂದಿಗೆ ಮಾತ್ರ.ಆದ್ದರಿಂದ ನಮ್ಮ ಮನಸ್ಸಿನ ಎಲ್ಲ ರೀತಿಯ ಭಾವನೆಗಳಿಗೆ ಸ್ಪಂದಿಸಲು ಸಮಾಧಾನ ಹೇಳಲು, ಸಂತೈಸಲು, ಧೈರ್ಯ ತುಂಬಲು,ಆತ್ಮವಿಶ್ವಾಸ ಮೂಡಿಸಲು ಸೋತಾಗ ಕುಗ್ಗದೆ ಅದನ್ನು ಎದುರಿಸಿ ನಿಲ್ಲಲು ಗೆಳೆತನ ಎಂಬುದು ಇರಬೇಕು ಆತ್ಮೀಯ ಗೆಳೆಯರು ಇದ್ದೇ ಇರಬೇಕು.
ಹಾಗೆಯೇ ನಿಜವಾದ ಗೆಳೆತನದ ಸವಿ ಹೇಗಿರುತ್ತದೆ ಎಂದರೆ ನಮ್ಮ ಆತ್ಮೀಯ ಗೆಳೆಯರಿಗೆ ನಾವು ಏನನ್ನೂ ವಿವರಿಸದೇ ನಮ್ಮ ಬಗ್ಗೆ ಅವನಿಗೆ ಎಲ್ಲವೂ ತಿಳಿದಿರುತ್ತದೆ. ನಾವು ಖುಷಿಯಲ್ಲಿದ್ದೇವೆಯೋ, ದುಃಖದಲ್ಲಿದ್ದೇವೆಯೋ ಅಥವಾ ಇನ್ಯಾವುದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆಯೋ ಎಂಬುದನ್ನು ನಮ್ಮ ಮನಸ್ಸಿನ ಅಂತರಾಳವನ್ನು ಅಳೆಯಬಲ್ಲವನು ಅವನಾಗಿರುತ್ತಾನೆ. ಹಾಗೆಯೇ ಆ ನೋವುಗಳಿಗೆ ಸೂಕ್ತ ಪರಿಹಾರವನ್ನು ನೀಡುವ ನೋವಿನಿಂದ ಹೊರತಂದು ಸಂತೋಷದ ಹೊನಲಲ್ಲಿ ತೇಲಿಸುವ ಮಾರ್ಗದರ್ಶಕನೂ ಆಗಿರುತ್ತಾನೆ.
ಇಂತಹ ಸ್ನೇಹದಲ್ಲಿ ಯಾವುದೇ ಸಂದೇಹಗಳು,ಅಪನಂಬಿಕೆಗಳು ಇರುವುದಿಲ್ಲ. ದೇಹವೆರಡು ಭಾವವೊಂದು ಎಂಬಂತೆ ಇರುತ್ತಾರೆ. ಇಲ್ಲಿ ಮನಸ್ಸಿನ ಭಾವನೆಗಳಿಗೆ ಬೆಲೆ ಇರುತ್ತದೆ ಹೊರತು ಯಾವುದೇ ಜಾತಿ- ಮತ, ಮೇಲು – ಕೀಳು, ಬಡವ – ಬಲ್ಲಿದ ಎಂಬ ಬೇಧಭಾವಗಳು ಇರುವುದಿಲ್ಲ.ಆದರೂ ಸ್ನೇಹಿತರನ್ನು ಆಯ್ಕೆ ಮಾಡುವಾಗ ಆದಷ್ಟು ಜಾಗರೂಕರಾಗಿರಬೇಕು.
ನಮ್ಮ ಮನಸ್ಥಿತಿಗೆ ಹೊಂದುವವರು ನಮ್ಮ ಭಾವನೆಗಳಿಗೆ ಸ್ಪಂದಿಸುವವರು ಹಾಗೂ ಬೆಲೆಕೊಡುವವರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು.ಸ್ನೇಹದ ಹೆಸರಲ್ಲಿ ಮೋಸ ಮಾಡುವ ತಪ್ಪುದಾರಿಗೆ ಎಳೆಯುವ ಜಾಲವೇ ಇರುತ್ತದೆ ಅಂತಹ ಮೋಸಗಳಿಗೆ ಬಲಿಯಾಗುವ ಬಲಿಪಶುಗಳಾಗಬಾರದು ಆಲೋಚಿಸಿ ಉತ್ತಮರ ಸಂಗವನ್ನು ಮಾಡಬೇಕು.
ಉತ್ತಮರ ಸಂಗವದು ಹೆಜ್ಜೆàನು ಸವಿದಂತೆ ಎಂಬ ಮಾತಿನಂತೆ ಉತ್ತಮರ ನಡೆ, ನುಡಿ, ಆಲೋಚನೆ, ಬದುಕಿನ ರೀತಿ ನೀತಿಗಳು, ಹವ್ಯಾಸಗಳು,ಅಭ್ಯಾಸಗಳು, ಅವರು ಬದುಕಿನ ಮೇಲೆ ಇರಿಸಿಕೊಂಡ ಕನಸು, ಗುರಿಗಳು ಎಲ್ಲವೂ ಉತ್ತಮತೆಯಿಂದಲೇ ಕೂಡಿರುತ್ತವೆ. ಅಂತವರ ಸಹವಾಸದಿಂದ ನಮ್ಮಲ್ಲಿಯೂ ಮತ್ತಷ್ಟು, ಮಗದಷ್ಟು ಉತ್ತಮ ಬದಲಾವಣೆಗಳನ್ನು ಸುಧಾರಣೆಗಳನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ.ಪೋಷಕರು ತಮ್ಮ ಮಕ್ಕಳ ಮೇಲೆ ನಂಬಿಕೆ ಇರಿಸಿ ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಾರೆ. ಆದರೆ ಕೆಲವು ಮಕ್ಕಳು ಅವರ ನಂಬಿಕೆಗೆ ದ್ರೋಹವೆಸಗಿ ಕೆಟ್ಟ ಸ್ನೇಹಿತರ ಸಹವಾಸ ಮಾಡಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುವುದರೊಂದಿಗೆ ಅಪ್ಪ ಅಮ್ಮಂದಿರಿಗೂ ನೋವನ್ನು ನೀಡುತ್ತಾರೆ.
ಗೆಳೆತನ ಮಾಡುವ ಮೊದಲು ಯಾರಿಗೂ ಅವರು ಎಂತಹ ಗುಣಸ್ವಭಾವದವರೆಂಬುದು ತಿಳಿದಿರುವುದಿಲ್ಲ ಆದರೆ ದಿನಗಳು ಕಳೆದಂತೆ ಅವರ ನಡೆ ನುಡಿ, ಹಾವಭಾವಗಳಿಂದ ಅವರು ಎಂತಹವರು ಎಂಬುದು ತಿಳಿಯುತ್ತದೆ. ಎಲ್ಲವನ್ನೂ ತಿಳಿದ ಅನಂತರ ಅವರಿಂದ ದೂರ ಇರುವುದೇ ಒಳಿತು. ಆದ್ದರಿಂದ ನಮಗೆಲ್ಲರಿಗೂ ಗೆಳೆತನವೆಂಬುದು ಬೇಕು ಗೆಳೆಯರೂ ಇರಬೇಕು ಆದರೆ ಗೆಳೆತನದಿಂದ ಗೆಳೆಯರಿಂದ ನಮ್ಮಲ್ಲಿ ಉತ್ತಮ ವಿಚಾರಗಳು ಅಭಿವೃದ್ಧಿ ಹೊಂದುವಂತೆ ಇರಬೇಕು.ಅಂತಹ ಸ್ನೇಹವನ್ನು ನಾವೂ ನಮ್ಮ ಗೆಳೆಯರಿಗೆ ಹಂಚೋಣ ಹಾಗೆಯೇ ನಾವೂ ಸಹ ಅದನ್ನೇ ಬಯಸುತ ಸ್ನೇಹ ಮಾಡೋಣ.
ನಮ್ಮ ಸ್ನೇಹ ಚಿರವಾಗಿರಲಿ,ನಮ್ಮ ಸ್ನೇಹ ಅಮರವಾಗಿರಲಿ ನಮ್ಮ ಸ್ನೇಹ ಸರಳ ಸಿರಿವಂತಿಕೆಯಿಂದ ಕೂಡಿರಲಿ. ಎಲ್ಲರಿಗೂ ವಿಶ್ವ ಸ್ನೇಹಿತರ ದಿನದ ಶುಭಾಶಯಗಳು.
-ಭಾಗ್ಯ ಜೆ. ಬೋಗಾದಿ
ಮೈಸೂರು