Advertisement

ಆಮಿಷವೊಡ್ಡುವ ಫೈನಾನ್ಸ್‌ ಕಂಪನಿ ಮೇಲೆ “ಐ ವಿವೇಕ’ಕಣ್ಣು

12:09 PM May 04, 2017 | Harsha Rao |

ಬೆಂಗಳೂರು: ಹಣಕ್ಕೆ ಹೆಚ್ಚಿನ ಬಡ್ಡಿ ಹಾಗೂ ಹಣ ದ್ವಿಗುಣಗೊಳಿಸುವ ಆಮಿಷ ಒಡ್ಡುವ ಕಂಪನಿಗಳ ವಿರುದ್ಧ ಸಾರ್ವಜನಿಕರು ದೂರು ದಾಖಲಿಸಲು ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಸರ್ಕಾರ “ಐ ವಿವೇಕ ವೆಬ್‌ಸೈಟ್‌’ ಆರಂಭಿಸಿದೆ. ರಿಸರ್ವ್‌ ಬ್ಯಾಂಕ್‌ ಸಹಯೋಗದಲ್ಲಿ ಈ ವೆಬ್‌ಸೈಟ್‌ ಪ್ರಾರಂಭಿಸಲಾಗಿದ್ದು, ಹೆಚ್ಚಿನ ಬಡ್ಡಿ ಹಾಗೂ ಹಣ
ದ್ವಿಗುಣ ಮಾಡಿಕೊಡುವುದಾಗಿ ಮೋಸ ಮಾಡುವ ಹಣಕಾಸು ಕಂಪನಿಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.

Advertisement

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ವೆಬ್‌ ಸೈಟ್‌ಗೆ ಚಾಲನೆ ನೀಡಿ, ಹಣಕಾಸಿನ ವಂಚನೆ ಮಾಡುವ ಕಂಪನಿಗಳ ವಿರುದ್ದ ಮೋಸ ಹೋದ ಸಾರ್ವಜನಿಕರು ವೆಬ್‌ಸೈಟ್‌ ಮೂಲಕ ದೂರು ನೀಡಬಹುದು ಎಂದು ಹೇಳಿದರು. ದೂರುಗಳ ವಿರುದ್ಧ ರಾಜ್ಯಮಟ್ಟದ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಅಂತಹ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿರುವ ಸಮನ್ವಯ ಸಮಿತಿಯಲ್ಲಿ ಆರ್‌ಬಿಐ, ಸೆಬಿ, ಆರ್‌ಒಸಿ, ಸಹಕಾರ ಸಂಘಗಳ ನಿಬಂಧಕರು, ಐಸಿಎಐ, ಐಆರ್‌ಡಿಎ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಾರೆ. “ಐ ವಿವೇಕ್‌’ನಲ್ಲಿ ಸಾರ್ವಜನಿಕರು ತಮಗಾದ ಹಣಕಾಸು ವಂಚನೆ ಪ್ರಕರಣ ದಾಖಲಿಸಿದರೆ ಸಮನ್ವಯ ಸಮಿತಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

ದೂರುದಾರರ ಮಾಹಿಯನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು. “ರಾಜ್ಯದಲ್ಲಿ ಈಗಾಗಲೇ ಅಗ್ರಿಗೋಲ್ಡ್‌,
ವಿನಿವಿಂಕ್‌, ಗ್ರೀನ್‌ ಬರ್ಡ್‌ ಅನ್ನುವ ಸಂಸ್ಥೆಗಳು ಹಣಕಾಸು ವಂಚನೆ ಮಾಡಿರುವ ಆರೋಪ ಎದುರಿಸುತ್ತಿವೆ. ಗ್ರೀನ್‌ ಬರ್ಡ್‌ ಸಂಸ್ಥೆ ಮೈಸೂರಿನಲ್ಲಿಯೇ ಜನರಿಂದ ಹಣ ಪಡೆದು ವಂಚನೆ ಮಾಡಿತ್ತು. ನಾನು ಮುಖ್ಯಮಂತ್ರಿಯಾದ ಮೇಲೆ
ಮೈಸೂರಿನ ವಂಚನೆಗೊಳಗಾದ ರೈತರು, ಸಾರ್ವಜನಿಕರು ಬಂದು ಅಳಲು ತೋಡಿಕೊಂಡಿದ್ದರು. ನಂತರ ಅವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಯಿತು’ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಮಾತನಾಡಿ, ಹಣ ವಂಚನೆ ಮಾಡುವ ಕಂಪನಿಗಳ ವಿರುದ್ಧ ದೂರ ದಾಖಲಿಸಲು ವೆಬ್‌ಸೈಟ್‌ ಆರಂಭಿಸಿರುವುದು ದೇಶದಲ್ಲಿಯೇ ಇದೆ ಮೊದಲು ಎಂದರು. ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್‌, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು, ಸರ್ಕಾರದ ವಿವಿಧ
ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಇದ್ದರು.

“ಕಂಪ್ಯೂಟರ್‌ ಅರ್ಥಾನೆ ಆಗಲ್ಲ ‘
“ನಾನು ಕಂಪ್ಯೂಟರ್‌ ಕಲಿಬೇಕಿತ್ತು. ಯಾಕೋ ಕಂಪ್ಯೂಟರ್‌ ನನಗೆ ಅರ್ಥಾನೇ ಆಗೊದಿಲ್ಲ. ನಾನು ಕಂಪ್ಯೂಟರ್‌ ಕಲಿಯಲಿಕ್ಕೂ ಹೋಗಲಿಲ್ಲ. ಹಣಕಾಸು ಸಚಿವನಾದ ಮೇಲಾದರೂ ಕಂಪ್ಯೂಟರ್‌ ಕಲಿಯಬೇಕಿತ್ತು. ಈ ಐಎಸ್‌ಎನ್‌ ಪ್ರಸಾದ್‌ (ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ನನಗೆ ಕಂಪ್ಯೂಟರ್‌ ಹೇಳಿ ಕೊಡಲೇ ಇಲ್ಲ’ ಎಂದು ಸಿಎಂ ಸಭೆಯಲ್ಲಿ ತಮಗೆ ಕಂಪ್ಯೂಟರ್‌ ಬಾರದಿರುವ ಕುರಿತು ಮುಕ್ತವಾಗಿ ಹೇಳಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next