ಕೊಲ್ಕೊತ್ತಾ ಬಂಗಾಲ ಕೊಲ್ಲಿಯ ಆಳದಲ್ಲಿ ಹುಟ್ಟಿಕೊಂಡಿರುವ ಅಂಫಾನ್ ಚಂಡಮಾರುತ ಇಂದು ಸಾಯಂಕಾಲ ಪಶ್ಚಿಮ ಬಂಗಾಲ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ.
ಪರಿಣಾಮವಾಗಿ ಕೊಲ್ಕೊತ್ತಾ, 24 ಪರಗಣ ಜಿಲ್ಲೆ, ಸುಂದರ್ ಬನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ.
ಸೂಪರ್ ಚಂಡಮಾರುತದ ಪರಿಣಾಮವಾಗಿ ಗಂಟೆಗೆ 110-120 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಇದೆ ಪರಿಣಾಮವಾಗಿ ಹಲವಾರು ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಅಂಫಾನ್ ಆರ್ಭಟಕ್ಕೆ ಎರಡು ಜೀವ ಹಾನಿ ಸಂಭವಿಸಿರುವ ಮಾಹಿತಿಯೂ ಲಭ್ಯವಾಗಿದೆ.
ಸುಮಾರು 120 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಚಂಡಮಾರುತ ಒಟ್ಟುಗೂಡಿಸಿರುವ ಮೋಡಗಳು ಹರಡಿಕೊಂಡಿದ್ದು ಅಂಫಾನ್ ಅಪ್ಪಳಿಸುವ ವ್ಯಾಪ್ತಿ ಸುಮಾರು 40 ಕಿಲೋಮೀಟರ್ ನಲ್ಲಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕರಾಗಿರುವ ಮೃತ್ಯುಂಜಯ ಮಹಾಪಾತ್ರ ಅವರು ಹೇಳಿದ್ದಾರೆ.
Related Articles
ಅಂಫಾನ್ ಆರ್ಭಟಕ್ಕೆ ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯಲ್ಲಿ 5,500 ಮನೆಗಳು ಹಾನಿಗೊಂಡಿವೆ. ಇಬ್ಬರು ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಂಡಮಾರುತದ ಪರಿಣಾಮದಿಂದ ಒಡಿಸ್ಸಾ ಹಾಗೂ ಪಶ್ಚಿಮಬಂಗಾಲ ರಾಜ್ಯಗಳ ಕರಾವಳಿ ತೀರಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದೆ. ಇದು ಬಂಗಾಲ ಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಎರಡನೇ ಸೂಪರ್ ಚಂಡಮಾರುತವಾಗಿದೆ.
Live Points:
– ಅಂಫಾನ್ ಚಂಡಮಾರುತ ಬೀಸಿದ ಪರಿಣಾಮ ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆಯನ್ನು NDRF ತಂಡ ಇದೀಗ ಮಾಡುತ್ತಿದೆ.
– ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಯ ಉತ್ತರ ಭಾಗದಲ್ಲಿ ಭಾರೀ ಗಾಳಿ ಮಳೆ.
– ಕಳೆದ 20 ವರ್ಷಗಳಲ್ಲಿ ಬಂಗಾಲ ಕೊಲ್ಲಿ ಭಾಗದಲ್ಲಿ ಎದ್ದಿರುವ ಚಂಡಮಾರುತಗಳಲ್ಲೇ ಅತೀ ಭೀಕರ ಎಂದೇ ಕರೆಯಲಾಗುತ್ತಿರುವ ಅಂಫಾನ್ ಇದೀಗ ಪಶ್ಚಿಮ ಬಂಗಾಲದಲ್ಲಿ ಇಬ್ಬರನ್ನು ಬಲಿಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ದಿಘಾ ಮತ್ತು ಹತಿಯಾ ದ್ವೀಪ ಪ್ರದೇಶದ ಮೂಲಕ ಪಶ್ಚಿಮ ಬಂಗಾಲ – ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿದ ಅಂಫಾನ್ ಚಂಡಮಾರುತ ಇದೀಗ ಗಂಟೆಗೆ 155- 165 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ ಪಶ್ಚಿಮ ಬಂಗಾಲದ ಸುಂದರ್ ಬನ್ ಪ್ರದೇಶದತ್ತ ಸಾಗುತ್ತಿದೆ.
– ಅಂಫಾನ್ ಚಂಡಮಾರುತದಿಂದಾಗಿ ಕೊಲ್ಕೊತ್ತಾದಲ್ಲಿ ಗಂಟೆಗೆ 90-100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
– ಭಾರೀ ಗಾಳಿ ಬೀಸುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಹೌರಾ ಸೇತುವೆ ಹಾಗೂ ವಿದ್ಯಾಸಾಗರ್ ಸೇತು ಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
– ಕೊಲ್ಕೊತ್ತಾ ತಲುಪಿದ ಅಂಫಾನ್. ಭಾರೀ ಗಾಳಿಗೆ ಹಲವು ಮರಗಳು ಧರೆಗೆ
– ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬಂಗಾಲದಲ್ಲಿ ಅರಿವು ಮೂಡಿಸುತ್ತಿರುವ NDRF ತಂಡ