ಕಾಡಿಗೆ, ಐ ಲೈನರ್, ಮಸ್ಕರಾ, ಐ ಶ್ಯಾಡೋ… ಇವು ಎಲ್ಲರ ಮೇಕಪ್ ಕಿಟ್‌ನಲ್ಲೂ ಇದ್ದೇ ಇರುತ್ತದೆ. ನಾನು ಮೇಕಪ್ಪೇ ಮಾಡಲ್ಲ ಅನ್ನುವವರೂ, ಕಣ್ಣನ್ನು ಖಾಲಿ ಬಿಡುವುದಿಲ್ಲ. ಕನ್ನಡಿ ಮುಂದೆ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತು, ರೆಪ್ಪೆಗಳ ಮೇಲೆ ರೇಖೆ ಮೂಡಿಸಿಕೊಳ್ಳುತ್ತಾರೆ. ಕಣ್ಣಿನ ಮೇಕಪ್‌ಗ್ಷ್ಟೇ ಅಲ್ಲ, ಆರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ಬೇಕು. ಕಣ್ಣು ಅತಿ ಸೂಕ್ಷ್ಮ ಅಂಗವಾಗಿರುವುದರಿಂದ, ಮೇಕಪ್ ವಸ್ತುಗಳೇ ಕೆಲವೊಮ್ಮೆ ಮಾರಕವಾಗಬಹುದು. ಹಾಗಾಗಿ ಈ ಕೆಲವು ವಿಷಯಗಳ ಬಗ್ಗೆ ಎಚ್ಚರ ವಹಿಸಿ..
1. ಕಣ್ಣಿಗೆ ಮೇಕಪ್ ಮಾಡುವ ಮೊದಲು ಕೈಯನ್ನು ಸ್ವತ್ಛವಾಗಿ ತೊಳೆದುಕೊಳ್ಳಿ.
2. ಹಾಸ್ಟೆಲ್‌ನಲ್ಲಿ, ಪಿಜಿಯಲ್ಲಿ ಇರುವ ಹುಡುಗಿಯರು ಮೇಕಪ್ ವಸ್ತುಗಳನ್ನು, ಡ್ರೆಸ್‌ಗಳನ್ನು ಗೆಳತಿಯರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ಕಣ್ಣಿನ ಮೇಕಪ್ ವಸ್ತುಗಳನ್ನು ಹಂಚಿಕೊಳ್ಳುವುದು ಬ್ಯಾಕ್ಟೀರಿಯಾಗಳನ್ನು ಹಂಚಿಕೊಂಡಷ್ಟೇ ಅಪಾಯಕಾರಿ.
3. ಕಣ್ಣಿಗೆ ಸೋಂಕು ತಾಕಿದ್ದರೆ, ಕಣ್ಣು ಪದೇಪದೆ ಕೆಂಪಾಗುತ್ತಿದ್ದರೆ ಮೇಕಪ್ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ. ಹಳೆಯ ಕಾಡಿಗೆ, ಐ ಲೈನರ್, ಮಸ್ಕರಾಗಳನ್ನು ಬದಲಿಸಿ.
4. ಐ ಮೇಕಪ್ ಡಬ್ಬಿಯನ್ನು ಬಾಯಿ ತೆರೆದಿಡಬಾರದು. ಅದು ಕಣ್ಣಿನ ಅಲರ್ಜಿ ಉಂಟು ಮಾಡುತ್ತದೆ.
5. ಯಾವುದೇ ಮೇಕಪ್ ವಸ್ತುವನ್ನು ಒಂದು ವರ್ಷಕ್ಕಿಂತ ಹೆಚ್ಚು ಬಳಸುವುದು ಚರ್ಮ ಹಾಗೂ ಕಣ್ಣಿಗೆ ಒಳ್ಳೆಯದಲ್ಲ.
– ಹರ್ಷಿತಾ ಕುಲಾಲ್ ಕಾವು