ಮಂಗಳೂರು: ಐ ವಾಚ್ ಗಿಫ್ಟ್ ನೀಡುವುದಾಗಿ ಹೇಳಿ 1.10 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ Knyamed ಕಂಪೆನಿಯಿಂದ ತಾನು ಕರೆ ಮಾಡುತ್ತಿದ್ದು, ನಮ್ಮ ಕಂಪೆನಿಯಿಂದ ನೀವು ಈ ಹಿಂದೆ ಬಟ್ಟೆ ಖರೀದಿಸಿದ್ದು, ನಿಮ್ಮ ಹೆಸರಿಗೆ ಆಫರ್ ಇದೆ. 5 ಸಾವಿರ ರೂ. ಬಟ್ಟೆ ಖರೀದಿಸಿದ್ದಲ್ಲಿ ಐ ವಾಚ್ ಗಿಫ್ಟ್ ನೀಡುವುದಾಗಿ ತಿಳಿಸಿದ್ದ. ಅದಕ್ಕಾಗಿ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ತಿಳಿಸಿದ್ದ. ಅದರಂತೆ ಗೂಗಲ್ ಪೇ ಮೂಲಕ 5,096 ರೂ. ಪಾವತಿಸಿದ್ದರು.
ಮಧ್ಯಾಹ್ನ ಇನ್ನೊಬ್ಬ ಕರೆ ಮಾಡಿ ಆರ್ಡರ್ ಕನ್ಫರ್ಮ್ ಮಾಡಲು ಐ ವಾಚ್ ಬಿಲ್ ವಾಟ್ಸಪ್‌ನಲ್ಲಿ ಕಳುಹಿಸಿ, ಗಿಫ್ಟ್ ಪಡೆಯಲು ಕೋಡ್ ನೀಡಿ 54,932 ರೂ. ಪಾವತಿಸುವಂತೆ ಹಾಗೂ ಅದು ರಿಫಂಡ್ ಆಗುವುದಾಗಿ ತಿಳಿಸಿದ್ದ. ಅದರಂತೆ ಹಣವನ್ನು ಪಾವತಿಸಿದ್ದರು.
ಸಂಜೆ ಮತ್ತೆ ಆರೋಪಿ ಕರೆ ಮಾಡಿ ನೀವು ತಪ್ಪಾದ ಕೋಡ್ ನಮೂದಿಸಿದ್ದು, ಮತ್ತೂಮ್ಮೆ ಪಾವತಿ ಮಾಡಿ. ಆಗ ಎಲ್ಲ ಹಣ ರಿಫಂಡ್ ಆಗುತ್ತದೆ ಎಂದಿದ್ದ. ದೂರುದಾರರು ಮತ್ತೆ 50 ಸಾವಿರ ರೂ. ಹಣ ಪಾವತಿ ಮಾಡಿದ್ದರು. ಪಾವತಿ ಮಾಡಿದ ಹಣವನ್ನು ವಾಪಸು ಕೇಳಲು ಕರೆ ಮಾಡಿದಾಗ ಆರೋಪಿ ಕರೆ ಸ್ವೀಕರಿಸಿಲ್ಲ. ಈ ವೇಳೆ ಅವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ತನಗೆ 1,10,028 ರೂ. ವಂಚನೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ತಿಳಿಸಿದ್ದಾರೆ.