ನನ್ನೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿದವನು ನೀನು. ನನ್ನೆದೆಯಲ್ಲಿ ಕನಸುಗಳ ಕಾಮನಬಿಲ್ಲು ಬಿತ್ತಿದವನೂ ನೀನು. ಲವ್ ಈಸ್ ಲೈಫ್ ಎನ್ನುತ್ತಾ ಕೈ ಕೈ ಹಿಡಿದುಕೊಂಡು ಅಡ್ಡಾಡಿದವನೂ ನೀನು. ಅಂಥ ನೀನೇ ಮಾತಿಗೆ ಸಿಗದೆ ನಡೆದು ಹೋಗ್ತಿದೀಯ!
ಮನಸ್ಸೇಕೋ ನಿನ್ನದೇ ತನ್ಮಯತೆಯಲ್ಲಿ ತೇಲಾಡುತ್ತಿದೆ. ನಿನ್ನ ಅಭಿಲಾಷೆಯ ಆಮಂತ್ರಣಕ್ಕಾಗಿ ಎದುರು ನೋಡುತ್ತಿದೆ. ನಿನ್ನ ಮುಗಿಯದ ಮೌನ, ಯಾವಾಗ ಮಾತಾಗಿ- ಮುತ್ತಾಗಿ ಹೊರ ಬೀಳುತ್ತದೆಯೋ ಗೊತ್ತಿಲ್ಲ. ಆದರೆ, ನನ್ನ ಸಹನಾಶೀಲ ಮನಸ್ಸು ಮಾತ್ರ ಆ ಕ್ಷಣಕ್ಕಾಗಿಯೇ ಕಾಯುತ್ತಿದೆ.
ಅದೆಷ್ಟೋ ಆಸೆಗಳ ಮಹಲನ್ನು ಕಟ್ಟಿಕೊಂಡು, ನಿನ್ನಾಗಮನವನ್ನು ಬಯಸುತ್ತಿದ್ದೇನೆ. ಒಮ್ಮೆಯಾದರೂ ಈ ನೊಂದ ಹೃದಯದೆದುರಿಗೆ ಬಂದು ನಿಲ್ಲಬಾರದೇ? ಎಷ್ಟು ಬಾರಿ ನಿನ್ನನ್ನು ಕಣ್ಣಲ್ಲಿ- ಕಣ್ಣಿಟ್ಟು ನೋಡಿದರೂ ನನಗೆ ಸಂತೃಪ್ತಿ ಸಿಗದು. ಯಾವ ಮುಹೂರ್ತದಲ್ಲಿ ನೀನು ನನ್ನ ಕಣ್ಣಿಗೆ ಬಿದ್ದೆಯೋ, ಅಂದಿನಿಂದ ಕಂಗಳೂ ನಿನ್ನನ್ನೇ ಕೂಗಿ ಕರೆಯುತ್ತಿವೆ. ಕೂಗು ಕೇಳಿಸುತ್ತಲೇ ಇಲ್ಲವೇ? ಹಾಗಿದ್ದ ಮೇಲೆ ಅಂದೇಕೆ ಬಂದು ಬಣ್ಣ- ಬಣ್ಣದ ಮಾತುಗಳನ್ನಾಡಿ ನನ್ನಲ್ಲಿ ಪ್ರೀತಿಯ ಅಲೆಗಳನ್ನೆಬ್ಬಿಸಿ ಮನದಲ್ಲೇ ಸುಪ್ತವಾಗಿರುವ ಕನಸುಗಳಿಗೇಕೆ ರೆಕ್ಕೆ ಬರುವಂತೆ ಮಾಡಿದೆ. ನಿನ್ನನ್ನು ನಾನು ಅದೆಷ್ಟು ನಂಬಿದ್ದೆ ಗೊತ್ತಾ? ಕೊನೆಗೂ ನಿನ್ನ ನೀಚ ನರಿ ಬುದ್ಧಿ ತೋರಿಸಿಯೇ ಬಿಟ್ಟೆಯಲ್ಲ. ಶಭಾಷ್ ಕಣೋ!
ಇರಲಿ ಬಿಡು. ಪ್ರಪಂಚ ವಿಶಾಲವಾಗಿದೆ. ಹೇಗೋ ನನ್ನನ್ನು ನಾನು ಸಂಭಾಳಿಸಿಕೊಂಡು ಬದುಕುತ್ತೇನೆ. ಆದರೆ, ದಯವಿಟ್ಟು ಮತ್ತೆ ಮೊದಲಿನಂತೆಯೇ ಬಂದು ಮನ ಕಲಕದಿರು. ಮೊದಲೇ ಚೂರಾದ ಹೃದಯವಿದು. ಚೂರೇ-ಚೂರು ನೋವಾದರೂ ಸಹಿಸಲಾರದು. ನಿನ್ನನ್ನು ಸಂಪೂರ್ಣ ಮರೆಯುತ್ತಿದ್ದೇನೆ. ನಿನ್ನ ಚಹರೆಯ ನೆನಪೂ ಬರದಂತೆ! ಕೊನೆಯದಾಗಿ ಒಂದು ಮಾತು ಹೇಳುತ್ತೇನೆ ಕೇಳು: ನಿನಗೇನಾದರೂ ಮಾನವೀಯತೆಯೆನ್ನುವುದಿದ್ದರೆ ನನ್ನೊಡನೆ ಆಟವಾಡಿದಂತೇ ಮತ್ಯಾರ ಜೊತೆಯೂ ಆಟದ ಅಂಕಣಕ್ಕಿಳಿಯದಿರು. ಹೃದಯಕ್ಕೆ ಮಾಯದ ದುಃಖವಾಗುತ್ತದೆ. ನಿಜ, ಅರಿಯದ ಮನಸ್ಸು ಏನೇನೋ ತಪ್ಪು ಮಾಡುತ್ತದೆ. ಅದು ತಪ್ಪು ಎಂದೂ ಗೊತ್ತಾದ ಮೇಲೂ ಮತ್ತದೇ ತಪ್ಪು ಮಾಡಲು ಹೋಗಿ ತಪ್ಪಿತಸ್ಥನಾಗದಿರು.
ಒಂದನ್ನಂತೂ ಮರೆಯದಿರು, ಜಗತ್ತಿನಲ್ಲಿ ಉಸಿರಾಡುತ್ತಿರುವ ಪ್ರತಿಯೊಂದು ಜೀವಿಗೂ ಒಂದು ಮನಸ್ಸಿದೆ. ಪಾಪ! ಸ್ವಲ್ಪ ನೋವಾದರೂ ನೊಂದುಕೊಳ್ಳುತ್ತದೆ. ಹೀಗೆಲ್ಲಾ ಹೇಳಲು ಕಾರಣವೇನು ಗೊತ್ತಾ? ನನಗೆಲ್ಲಾ ಗೊತ್ತಿದೆ, ನೀನು ಅದ್ಯಾರೋ ಒಬ್ಬಳೊಡನೆ ತಿರುಗಾಡುತ್ತಿದ್ದುದು, ಅವಳೊಡನೆ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದುದು ಎಲ್ಲವೂ ತುಸು ಚೆನ್ನಾಗಿಯೇ ಗೊತ್ತು. ಇದನ್ನೆಲ್ಲಾ ತಪ್ಪು ಎಂದು ಹೇಳುತ್ತಿಲ್ಲ. ಹಾಗೆ ಹೇಳುವ ಅಧಿಕಾರವೂ ನನಗಿಲ್ಲ. ಆದರೆ ನನ್ನ ಬಿಟ್ಟು ಹೋದಂತೆ, ಅವಳನ್ನು ಮಾತ್ರ ಬಿಟ್ಟು ಹೋಗದಿರು. ಯಾಕೆಂದರೆ, ಯಾರಾದರೂ ಬಂದು ಕೈ ಹಿಡಿದಾಗ ಪ್ರಪಂಚವೇ ನಮ್ಮದೆನಿಸುತ್ತದೆ. ಅದೇ ಕೈ ಬಿಟ್ಟುಹೋದಾಗ ನಾವು ನಂಬಿದ ಪ್ರಪಂಚ ನಮ್ಮ ತಲೆಯ ಮೇಲೇ ಬಿದ್ದಂತೆನಿಸುತ್ತದೆ. ನಾನು ಇಷ್ಟೆಲ್ಲಾ ಹೇಳಿದ್ದನ್ನು ಓದಿಕೊಂಡ ನಂತರವಾದ್ರೂ ಪ್ಲೀಸ್ ಬದಲಾಗು…
ಜಯಶ್ರೀ ಎಸ್.ಕಾನಸೂರ್