ಇಂದಿನ ಕಾಲದಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದ ಕಣ್ಣುಗಳ ಆರೋಗ್ಯ ಹಾಳಾಗುತ್ತಿರುವುದು ಯಾರೂ ಗಮನಿಸುವುದಿಲ್ಲ. ಕೆಲಸದ ಕಾರಣದಿಂದ ಹೆಚ್ಚಿನ ಜನರು ಮೊಬೈಲ್, ಲ್ಯಾಪ್ ಟಾಪ್ ನೋಡುವುದು ಹೆಚ್ಚಾಗಿದೆ. ಇಂದು ಹೆಚ್ಚಿನವರಿಗೆ ರಾತ್ರಿ ನಿದ್ದೆಗೆಟ್ಟು ಸುಮಾರು ಹೊತ್ತು ಮೊಬೈಲ್ ಬಳಸುವುದು ಹವ್ಯಾಸವಾಗಿದೆ. ಇದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಟಿವಿ ಅಥವಾ ಮೊಬೈಲ್ ಹತ್ತಿರದಿಂದ ನೋಡುವುದು, ಕತ್ತಲಲ್ಲಿ ಮೊಬೈಲ್ ನಲ್ಲಿ ಸಿನೆಮಾ ವೀಕ್ಷಿಸುವುದು, ಗೇಮ್ಸ್ ಆಡುವುದು, ಅತಿಯಾದ ಅಂತರ್ಜಾಲ ಬಳಕೆಯಿಂದ ಕಣ್ಣಿನ ನರಮಂಡಲದ ಮೇಲೆ ದುಷ್ಟರಿಣಾಮ ಬೀರುತ್ತದೆ. ಕಣ್ಣಿನ ಇತರ ಸಮಸ್ಯೆಗಳೆಂದರೆ ಕಣ್ಣು ನೋವು, ಕಣ್ಣು ಊತ, ಕಣ್ಣಿಗೆ ಆಯಾಸವಾಗುವುದು, ಕಣ್ಣು ತುರಿಕೆ, ಕಣ್ಣಿನ ಸೋಂಕು, ಕೆಂಗಣ್ಣು, ಕಣ್ಣುರಿ ಬರುವುದು ಇತ್ಯಾದಿ.
ಪ್ರತಿ ನಿತ್ಯ ನಾವು ಸೇವಿಸುವ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಉಳಿದಂತೆ ಬೀನ್ಸ್, ಬಟಾಣಿ, ಬೇಳೆ, ಕಡಲೆಕಾಯಿ, ಬೆಳ್ಳುಳ್ಳಿ, ಎಳ್ಳು, ಸೋಯಾಬೀನ್, ಅಗಸೆಬೀಜ, ಬಾದಾಮಿ, ಗೋಧಿ, ಮೀನು, ಮೊಟ್ಟೆಯ ಹಳದಿ ಲೋಳೆ ಸೇವಿಸುವುದು ಉತ್ತಮ.
ಬಾದಾಮಿ:
ಬಾದಾಮಿಯಲ್ಲಿ ವಿವಿಧ ರೀತಿಯ ಪೋಷಕಾಂಶಗಳಿದ್ದು, ಇದು ಕಣ್ಣುಗಳ ರಕ್ಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಇ, ವಿಟಮಿನ್ ಎ ಕಣ್ಣಿನ ಅಂಗಾಂಶಗಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಇ ಅಂಶವು ಕಣ್ಣಿನ ಪೊರೆ ಮತ್ತು ವಯಸ್ಸಾಗುವ ವೇಳೆ ಕಂಡುಬರುವ ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಕಾಪಾಡುತ್ತದೆ. ವಿಟಮಿನ್ ಇ ಸೇವನೆ ಮಾಡಿದರೆ ಅದು ಕಣ್ಣಿನ ರಕ್ಷಣೆ ಮಾಡುವಲ್ಲಿ ತುಂಬಾ ಸಹಕಾರಿ ಆಗಿದೆ. ವಿಟಮಿನ್ ಇ ಅಂಶವು ನೆಲಗಡಲೆ, ಹಝೆಲ್ ನಟ್, ಸೂರ್ಯಕಾಂತಿ ಬೀಜ ಇತ್ಯಾದಿಗಳಲ್ಲಿ ಇದೆ. ಬಾದಾಮಿಯಲ್ಲಿ ಬೆಳಗ್ಗೆ ಉಪಾಹಾರಕ್ಕೆ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.
ಹಾಲು-ಮೊಸರು:
ಹಾಲು ಮತ್ತು ಮೊಸರು ಕಣ್ಣಿಗೆ ತುಂಬಾ ಆರೋಗ್ಯಕರ ಆಹಾರಗಳಲ್ಲಿ ಒಂದು. ಹಾಲಿನ ಉತ್ಪನ್ನಗಳು ಅದರಲ್ಲೂ ದನದ ಹಾಲಿನಿಂದ ತಯಾರಿಸಿದ ಹಾಲಿನ ಉತ್ಪನ್ನಗಳು ತುಂಬಾ ಆರೋಗ್ಯಕರ. ಹಾಲಿನ ಉತ್ಪನ್ನಗಳನ್ನು ಚಾ, ಕಾಫಿ, ಹಾಲು, ಮೊಸರು, ಚೀಸ್ ಮೂಲಕ ಕೂಡಾ ಸೇವನೆ ಮಾಡಬಹುದು.
ಮೊಟ್ಟೆ:
ಮೊಟ್ಟೆಯಲ್ಲಿ ವಿಟಮಿನ್ ಎ ಅಂಶವಿದ್ದು, ಇದು ಕಣ್ಣಿನ ಹೊರ ಪದರವಾಗಿರುವಂತಹ ಕಾರ್ನಿಯಾವನ್ನು ರಕ್ಷಣೆ ಮಾಡುತ್ತದೆ. ಮೊಟ್ಟೆಯನ್ನು ಉಪಾಹಾರ, ಊಟ ಮತ್ತು ರಾತ್ರಿ ಊಟಕ್ಕೆ ಬಳಕೆ ಮಾಡಿದರೆ ಒಳ್ಳೆಯದು.
ಸಾಲ್ಮನ್ ಮೀನು:
ಸಾಲ್ಮನ್ ಮೀನು ಕಣ್ಣಿನ ಆರೋಗ್ಯಕ್ಕೆ ಉತ್ತಮ ಆಹಾರ. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕಣ್ಣಿನ ರಕ್ಷಣೆ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲವು ಕಣ್ಣು ಒಣಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಮೀನಿನ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಆಗಿ ಪರಿಣಮಿಸುತ್ತದೆ.
ಕ್ಯಾರೆಟ್:
ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಂಶವಿದ್ದು, ಇದು ಕಣ್ಣಿನ ಮೇಲ್ಮೈಯನ್ನು ರಕ್ಷಣೆ ಮಾಡುವುದು ಹಾಗೂ ಕಣ್ಣಿಗೆ ಕಾಡುವ ಸೋಂಕು ಮತ್ತು ಇನ್ನಿತರ ಸಮಸ್ಯೆಗಳನ್ನು ದೂರ ಮಾಡುವುದು. ಕ್ಯಾರೇಟ್ ನ್ನು ಸಲಾಡ್ ಅಥವಾ ಬೇರೆ ರೂಪದಲ್ಲಿಯೂ ಕೂಡಾ ಸೇವನೆ ಮಾಡಬಹುದು.
ಸಿಟ್ರಸ್ ಹಣ್ಣ- ಬೆರಿ
ಸಿಟ್ರಸ್ ಹಣ್ಣುಗಳು ಮತ್ತು ಬೆರಿಗಳು ವಿಟಮಿನ್ ಸಿ ಯ ಸಮೃದ್ಧ ಮೂಲಗಳು. ಕಣ್ಣುಗಳನ್ನು ಆರೋಗ್ಯವಾಗಿಡಲು ಕಿತ್ತಳೆ, ದ್ರಾಕ್ಷಿ, ನಿಂಬೆಹಣ್ಣುಗಳನ್ನು ಸೇವನೆ ಮಾಡುವುದು ಮುಖ್ಯ. ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಆಹಾರ ಮಾತ್ರವಲ್ಲದೇ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಈ ಕೆಲವೊಂದು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಕಣ್ಣಿನ ಆರೋಗ್ಯ ಸುಧಾರಿಸಬಹುದು.
ಬೆಳಿಗ್ಗೆ ಹಾಗೂ ಸಂಜೆ ಸಮಯ ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಒದಗಿಸುತ್ತದೆ. ಅದರ ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಈ ಕಿರಣಗಳು ಕಣ್ಣಿನ ಮೇಲೆ ಬೀಳುವುದರಿಂದ ಸ್ನಾಯುಗಳು ಬಲಗೊಂಡು, ದೃಷ್ಟಿ ಉತ್ತಮಗೊಳ್ಳುತ್ತದೆ.
ಹುಬ್ಬಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಅದರ ಜೊತೆಗೆ ಕಣ್ಣಿಗೂ ತಂಪು ಅನುಭವ ನೀಡುತ್ತದೆ. ಕಣ್ಣನ್ನು ಆಗಾಗ ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಿರಬೇಕು.
ಎರಡೂ ಅಂಗೈಗಳನ್ನು ಒಂದಕ್ಕೊಂದು ಉಜ್ಜಿ ಅದರಿಂದ ಬರುವ ಶಾಖವನ್ನು ಕಣ್ಣುಗಳ ಮೇಲಿಡಬೇಕು. ಹೀಗೆ ಮಾಡಿದರೆ ಕಣ್ಣುಗಳ ಆಯಾಸವನ್ನು ಕಡಿಮೆ ಮಾಡಿ, ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ದಿನನಿತ್ಯ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವುದು ಕಣ್ಣಿಗೆ ಆಯಾಸವಾಗುತ್ತದೆ. ಆದ್ದರಿಂದ ಕಣ್ಣುಗಳನ್ನು ಆಗಾಗ ಕೆಲವು ಸೆಕೆಂಡ್‌ಗಳ ಕಾಲ ನಿರಂತರವಾಗಿ ಮಿಟುಕಿಸುತ್ತಿರಬೇಕು. ಇದು ಆಯಾಸ ತೊಲಗಿಸಲು ನೆರವಾಗುತ್ತದೆ. ಸಮಯ ಸಿಕ್ಕಾಗಲೆಲ್ಲಾ ಕಣ್ಣಿನ ಗುಡ್ಡೆಯನ್ನು ಮೇಲಿಂದ, ಕೆಳಕ್ಕೆ, ಎಡದಿಂದ-ಬಲಕ್ಕೆ ಚಲಿಸುತ್ತಿರಬೇಕು.
ಲೋಳೆಸರ, ಮತ್ತಿಸೊಪ್ಪು ಅಥವಾ ದಾಸವಾಳದ ಸೊಪ್ಪಿನ ರಸವನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕಣ್ಣಿಗೆ ಕಾಡಿಗೆ ಹಚ್ಚವವರು ಆದಷ್ಟು ಮನೆಯಲ್ಲಿಯೇ ತಯಾರಿಸಲು ಪ್ರಯತ್ನಿಸಿ. ಕಾಡಿಗೆ ತಯಾರಿಸುವಾಗ ರಾಸಾಯನಿಕ ವಸ್ತುಗಳು ಬಳಸುವುದರಿಂದ ಕೆಲವರಲ್ಲಿ ತುರಿಕೆಯಂಥ ಸಮಸ್ಯೆ ಕಾಡುತ್ತದೆ.
ಕೆಲ ಯೋಗಾಸನ ಅಭ್ಯಾಸ ಮಾಡುವುದರಿಂದಲೂ ಕಣ್ಣಿನಲ್ಲಿರುವ ನರಗಳು ಬಲಗೊಳ್ಳುತ್ತವೆ. ಪಾದ ಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ಶಶಾಂಕಾಸನ, ಉಷ್ಟ್ರಾಸನ, ಸರ್ವಾಂಗಾಸನ, ಶವಾಸನ ಮತ್ತು ಮುದ್ರೆಗಳಿಂದಲೂ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಇಂದಿನ ಮೊಬೈಲ್, ಕಂಪ್ಯೂಟರ್ ಹಾಗೂ ಇತರ ಗ್ಯಾಜೆಟ್ ಬಳಕೆಯಿಂದ ಕಣ್ಣುಗಳ ಆರೋಗ್ಯ ಹಾಳಾಗುವುದು ಬೇಗ. ಆದ ಕಾರಣ ವರ್ಷಕ್ಕೊಮ್ಮೆಯಾದರೂ ನೇತ್ರತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು.
Advertisement
-ಕಾವ್ಯಶ್ರೀ