Advertisement

ನೇತ್ರದಾನ ಬಹಳ ಸುಲಭ; ಬರೇ ಇಪ್ಪತ್ತು ನಿಮಿಷ ಸಾಕು…

02:39 PM Nov 30, 2021 | Team Udayavani |

ರಾಜ್ಯದ ಜನರ ಪಾಲಿಗೆ ಅಮೂಲ್ಯ ರತ್ನವಾಗಿದ್ದ ಪುನೀತ್‌ ರಾಜಕುಮಾರ್‌ ಇನ್ನಿಲ್ಲವಾಗಿ ಒಂದು ತಿಂಗಳಾಯಿತು. ಈ ಒಂದು ತಿಂಗಳಿನಲ್ಲಿ ಆಗಿರುವ ಬದಲಾವಣೆಗಳು ಹಲವಾರು. ಪುನೀತ್‌ ಅವರ ದಾನ ಧರ್ಮವನ್ನೇ ಮಾದರಿಯನ್ನಾಗಿಸಿಕೊಂಡ ರಾಜ್ಯದ ಸಾವಿರಾರು ಮಂದಿ ಅದನ್ನು ಮುಂದುವರಿಸಲು ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲ, ಪುನೀತ್‌ ಅವರಂತೆಯೇ ನೇತ್ರದಾನ ಮಾಡಲೂ ಸಾವಿರಾರು ಮಂದಿ ಪ್ರತಿಜ್ಞೆ ಮಾಡಿದ್ದಾರೆ. ಒಂದು ವರ್ಷದಲ್ಲಿ ಆಗುತ್ತಿದ್ದ ನೇತ್ರದಾನ ಕೇವಲ ಒಂದೇ ತಿಂಗಳಿನಲ್ಲಿ ಆಗಿದೆ ಎಂಬುದು ವಿಶೇಷ.

Advertisement

ನೇತ್ರದಾನ ಹೇಗೆ?
ಪುನೀತ್‌ ಅವರ ಸಾವಿನ ಬಳಿಕ ನೇತ್ರದಾನದಲ್ಲಿ ಹೆಚ್ಚಳವಾಗಿರುವುದು ಒಂದು ಕಡೆಯಾದರೆ, ಎಷ್ಟೋ ಮಂದಿಗೆ ನೇತ್ರದಾನ ಹೇಗೆ ಮಾಡ
ಬೇಕೆಂಬುದೂ ಅರಿವಿಲ್ಲ. ವಿಶೇಷವೆಂದರೆ ನೇತ್ರದಾನ ಮತ್ತು ನೇತ್ರದಾನ ನೋಂದಣಿ ಪ್ರಕ್ರಿಯೆ ತೀರಾ ಸುಲಭವಿದೆ. ಆದರೆ ಅರಿವಿನ ಕೊರತೆಯಿಂದಾಗಿ ನೇತ್ರದಾನವಾಗುತ್ತಿರಲಿಲ್ಲ.

ರಾಜ್ಯ ಸರಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣ ಸಂಸ್ಥೆಯಾಗಿರುವ ಜೀವಸಾರ್ಥಕತೆಯು ಅಂಗಾಂಗ ದಾನಕ್ಕೆ ನೋಂದಣಿ ಸುಲಭ ಮಾಡಿದೆ. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಅಥವಾ ಲಿಂಕ್‌ ಬಳಸಿ ವೆಬ್‌ಸೈಟ್‌ ಭೇಟಿ ನೀಡಿ, ಸಾಮಾನ್ಯ ಮಾಹಿತಿ ನೀಡಿ, ಕುಟುಂಬಸ್ಥರ ದೂರವಾಣಿ ಸಂಖ್ಯೆ ನೀಡಿ 2-3 ನಿಮಿಷದಲ್ಲಿ ನೋಂದಣಿ ಮಾಡಬಹುದು. ಅಲ್ಲದೆ, ಭಾವಚಿತ್ರ ಒಳಗೊಂಡ ನೋಂದಣಿ ಪ್ರಮಾಣ ಪತ್ರವು ಲಭ್ಯವಾಗಲಿದೆ. ಮೃತರ ವಾರಸುದಾರರು ಸ್ಥಳದಲ್ಲಿಯೇ ತೀರ್ಮಾನಿಸಿ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ನೇತ್ರದಾನ ನೀಡಬಹುದಾಗಿದೆ.

ಆನ್‌ಲೈನ್‌, ಸಭೆ, ಅಭಿಯಾನಗಳಲ್ಲಿ ನೋಂದಣಿ ಮಾಡಿಸಿದವರು ಅಥವಾ ಅವರ ಕುಟುಂಬದವರು ಮರೆತಿರುತ್ತಾರೆ. ಮರಣಾನಂತರ ಸಂಪರ್ಕ ಸಾಧ್ಯವಾಗುವುದಿಲ್ಲ. ಆಗ ನೇತ್ರದಾನ ಕೇವಲ ಕಾಗದಕ್ಕೆ ಸೀಮಿತವಾಗುತ್ತದೆ. ಹೀಗಾಗಿ ನೋಂದಣಿಯಾದವರು ಕಡ್ಡಾಯವಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಅಗತ್ಯ ಕ್ರಮಕ್ಕೆ ಸೂಚಿಸಬೇಕು.

ಜಿಲ್ಲೆಗಳಲ್ಲಿ ಕಾರ್ಯಾಚರಣೆ ಹೇಗೆ?
ಪ್ರತಿ ಜಿಲ್ಲಾ ಸ್ಪತ್ರೆಗಳಲ್ಲಿರುವ 2-3 ಪ್ಯಾರಾಮೆಡಿಕಲ್‌ ಸಿಬಂದಿಗೆ ನೇತ್ರ ಸಂಗ್ರಹದ ತರಬೇತಿ ನೀಡಲಾಗಿದೆ. ಇವರ ಸಹಾಯಕ್ಕೆ ಜಿಲ್ಲಾ ನೇತ್ರಾಧಿಕಾರಿಗಳು ಇರುತ್ತಾರೆ. ಸಿಬಂದಿಗೆ ಸಂಗ್ರಹ ಸಲಕರಣೆಗಳನ್ನು ಒಳಗೊಂಡ ಕಿಟ್‌ ನೀಡಲಾಗಿರುತ್ತದೆ. ದಾನಿಗಳ ಕಡೆಯವರಿಂದ ಕರೆ ಬಂದರೆ ಕೂಡಲೇ ಸ್ಥಳಕ್ಕೆ ತೆರಳಿ ಕಣ್ಣಿನ ಐ ಬಾಲ್ ತೆಗೆದು, ಅಲ್ಲಿಗೆ ಕೃತಕ ಕಣ್ಣುಗಳನ್ನು ಹಾಕಲಾಗುತ್ತದೆ. ಬಳಿಕ ಸಂಗ್ರಹಿಸಿದ ಕಣ್ಣನ್ನು ಸಮೀಪದ ಖಾಸಗಿ ಅಥವಾ ಸರಕಾರಿ ನೇತ್ರಬ್ಯಾಂಕ್‌ಗೆ ತಲುಪಿಸಲಾಗುತ್ತದೆ. ಸ್ಥಳಾಂತರ ಅವಧಿಯಲ್ಲಿ ಸಂಗ್ರಹಿಸಿದ ಕಣ್ಣಿಗೆ ಸೊಲ್ಯೂಶನ್‌ (ದ್ರಾವಣ) ಸಿಂಪಡಿಸುವುದರಿಂದ ಕನಿಷ್ಠ 12 ಗಂಟೆಯವರೆಗೂ ಕಣ್ಣನ್ನು ರಕ್ಷಿಸಬಹುದು. ಬ್ಯಾಂಕ್‌ನಲ್ಲಿ ಸಂಗ್ರಹಿಸುವ ಕಣ್ಣುಗಳನ್ನು ಸಂಶೋಧನೆ, ಕಾರ್ನಿಯಾ ಕಸಿಗೆ ಬಳಸಿಕೊಳ್ಳಲಾಗುತ್ತದೆ . ಇನ್ನು ಖಾಸಗಿ/ ಸರಕಾರೇತರ ನೇತ್ರ ಸಂಸ್ಥೆಗಳು ತಮ್ಮ ಸಿಬಂದಿ ಕಳುಹಿಸಿ ನೇತ್ರಸಂಗ್ರಹ ಮಾಡಿಕೊಳ್ಳುತ್ತಾರೆ. ದಾನಮಾಡಿದ 4 ದಿನಗಳಲ್ಲಿ ಕಾರ್ನಿಯಾ ಕಸಿಯನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ.

Advertisement

ಇದನ್ನೂ ಓದಿ:ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

ಪುನೀತ್‌ ರಾಜ್‌ಕುಮಾರ್‌ ಮಾದರಿ
ನೇತ್ರದಾನ ವಿಚಾರದಲ್ಲಿ ಪುನೀತ್‌ ಅಭಿಮಾನಿಗಳು ನಿಜವಾಗಿಯೂ ದೇವರ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಕೊರೊನಾ ಪೂರ್ವದಲ್ಲಿ ವರ್ಷಕ್ಕೆ 5 ಸಾವಿರ ಮಂದಿ ನೇತ್ರದಾನಕ್ಕಾಗಿ ನೋಂದಣಿ ಮಾಡಿಸುತ್ತಿದ್ದರು. ಆದರೆ ಕೊರೊನಾ ಬಂದ ಮೇಲೆ ಇದು ತೀರಾ ಎನ್ನುವಷ್ಟರ ಮಟ್ಟಿಗೆ ಕುಸಿತ ಕಂಡಿತು. ಜತೆಗೆ ಕೊರೊನೇತರ ಸಾವುಗಳ ಸಂದರ್ಭದಲ್ಲಿ ಮಾತ್ರ ನೇತ್ರಗಳನ್ನು ಪಡೆಯಬಹುದು ಎಂದು ಸರಕಾರವೂ ಮಾರ್ಗಸೂಚಿ ನೀಡಿತ್ತು. ಹೀಗಾಗಿ ನೇತ್ರ ಸಂಗ್ರಹದಲ್ಲೂ ಗಣನೀಯ ಇಳಿಕೆಯಾಯಿತು. ಅಂದರೆ ಸುಮಾರು ಶೇ.70ರಷ್ಟು ಕಡಿಮೆಯಾಗಿತ್ತು.  ಆದರೆ ಪುನೀತ್‌ ಅಭಿಮಾನಿಗಳು  ಒಂದು ತಿಂಗಳಿನ‌ಲ್ಲಿ ಈ ನೇತ್ರದಾನಕ್ಕಿದ್ದ ಕೊರಗನ್ನು ನೀಗಿಸಿದ್ದಾರೆ. ಇದೊಂದು ತಿಂಗಳೇ 8,100 ಮಂದಿ ನೇತ್ರದಾನಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನೋಂದಣಿ ಮಾಡಿಸದವರೂ ಸಾವನ್ನಪ್ಪಿದ ಮೇಲೆ ಅವರ ಕುಟುಂಬಸ್ಥರು ತಾವೇ ಮುಂದೆ ಬಂದು ನೇತ್ರದಾನ ಮಾಡುತ್ತಿದ್ದಾರೆ.  ಸದ್ಯ ರಾಜ್ಯಾದ್ಯಂತ ನೇತ್ರ ಸೇವಾ ಸಂಸ್ಥೆ, ಕಣ್ಣಿನ ಆಸ್ಪತ್ರೆ, ಜೀವಸಾರ್ಥಕತೆ ಸಂಸ್ಥೆಯಲ್ಲಿ ನೇತ್ರದಾನ ನೋಂದಣಿಯು ಈವರೆಗಿನ ದಾಖಲೆಗಳನ್ನು ಮೀರಿ ನಡೆಯುತ್ತಿದೆ.

ಪುನೀತ್‌ ಕಣ್ಣುಗಳಿಂದ 10 ಮಂದಿಗೆ ದೃಷ್ಟಿ
ಪುನೀತ್‌ ರಾಜಕುಮಾರ್‌ ಅವರ ಕಣ್ಣುಗಳಿಂದ 10 ಮಂದಿಗೆ ದೃಷ್ಟಿ ಬಂದಿದೆ. ಸದ್ಯ ಹೊಸ ಮಾದರಿಯ ಚಿಕಿತ್ಸಾ ಮಾದರಿ ಬಳಕೆ ಮಾಡಲಾಗುತ್ತಿದ್ದು, ಒಬ್ಬರ ಕಣ್ಣುಗಳಿಂದ ಹೆಚ್ಚಿನ ಮಂದಿಗೆ ದೃಷ್ಟಿ ನೀಡಬಹುದು ಎಂದು ಬೆಂಗಳೂರಿನ ನಾರಾಯಣ ನೇತ್ರಾಲಯ ವೈದ್ಯ ಭುಜಂಗ ಶೆಟ್ಟಿ ಅವರು ಹೇಳಿದ್ದಾರೆ.   ಕಾರ್ನಿಯಾಗಳಿಂದ ನಾಲ್ಕು ಕಾರ್ನಿಯಲ್‌ ಅಂಧ ರೋಗಿಗಳಿಗೆ ಕಣ್ಣು ಬರುವಂತೆ ಮಾಡಲಾಗಿದೆ. ಅಂದರೆ, ಒಂದೊಂದು ಕಣ್ಣನ್ನು ಇಬ್ಬರು ರೋಗಿಗಳಂತೆ ನಾಲ್ವರು ಅಂಧರಿಗೆ ದೃಷ್ಟಿ ಸಿಕ್ಕಿದೆ. ಇಲ್ಲಿ ಕಾರ್ನಿಯಾದ ಸೂಪಿರಿಯರ್‌ ಮತ್ತು ಡೀಪರ್‌ ಲೇಯರ್ಸ್‌ ಅನ್ನು ಭಾಗ ಮಾಡಿ ದೃಷ್ಟಿ ಬರುವಂತೆ ಮಾಡಲಾಗಿದೆ. ಉಳಿದಂತೆ ಕಣ್ಣಿನ ಲಿಂಬಲ್‌ ರಿಮ್‌(ಕಣ್ಣಿನ ಒಳಗಿನ ಬಿಳಿಭಾಗ) ಅನ್ನು ಪ್ರಯೋಗಾಲಯದಲ್ಲಿ ಇಂಡ್ಯೂಸ್ಡ್ ಪುರಿಪೋಟೆಂಟ್‌ ಸ್ಟೆಮ್‌ ಸೆಲ್‌ಗಳಾಗಿ ಪರಿವರ್ತಿಸಿ ಇದನ್ನು ಲಿಂಬಲ್‌ ಸ್ಟೆಮ್‌ ಸೆಲ್‌ ಕೊರತೆ, ಪಟಾಕಿ ಸಿಡಿತ, ರಾಸಾಯನಿಕ ಮತ್ತು ಆ್ಯಸಿಡ್‌ನಿಂದಾಗಿ ದೃಷ್ಟಿ ಕಳೆದುಕೊಂಡ ಕೆಲವರಿಗೆ ಬೆಳಕು ನೀಡಬಹುದಾಗಿದೆ ಎಂದು ಭುಜಂಗ ಶೆಟ್ಟಿ ಹೇಳಿದರು.

ಬರೇ ಇಪ್ಪತ್ತು ನಿಮಿಷ ಸಾಕು…

-ನೇತ್ರದಾನ ಮತ್ತು ಅದರ ಸಂಗ್ರಹಣೆ ಮರಣಾನಂತರದ ಪ್ರಕ್ರಿಯೆ.
-ನೇತ್ರ ಸಂಗ್ರಹಕ್ಕೆ ಬೇಕಾಗುವ ಸಮಯ ಕೇವಲ 20 ನಿಮಿಷ.
-ಗುಡ್ಡೆಯಲ್ಲ, ಕಾರ್ನಿಯ ಪದರವನ್ನು ಮಾತ್ರ ಪಡೆಯಲಾಗುತ್ತದೆ. ನೇತ್ರದಾನದ ಅನಂತರ ಮುಖ ವಿರೂಪಗೊಳ್ಳುವುದಿಲ್ಲ.
-ಮರಣ ಸಂಭವಿಸಿದ 6 ಗಂಟೆಯೊಳಗೆ ದಾನಿಯಿಂದ ನೇತ್ರಗಳನ್ನು ಪಡೆಯಬೇಕು
-ಮಧುಮೇಹ, ಬಿಪಿ, ದೃಷ್ಟಿದೋಷ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿದ್ದವರೂ ನೇತ್ರದಾನ ಮಾಡಬಹುದು.
-ಮೂರು ತಿಂಗಳ ಶಿಶುವಿನಿಂದ ಹಿಡಿದು ವೃದ್ಧರವರೆಗೂ ನೇತ್ರದಾನ ಮಾಡಬಹುದು
-ದಿನದ 24 ಗಂಟೆಯೂ ನೇತ್ರದಾನವನ್ನು ಪಡೆಯಲಾಗುತ್ತದೆ.
-ದಾನಿಯ ಹೆಸರು, ವಿವರ ಗೌಪ್ಯವಾಗಿಡಲಾಗುತ್ತದೆ. ನಿರ್ದಿಷ್ಟ ವ್ಯಕ್ತಿಗೆಂದು ದಾನಕ್ಕೆ ಅವಕಾಶವಿಲ್ಲ.

ಯಾರು ದಾನ ಮಾಡಲು ಸಾಧ್ಯವಿಲ್ಲ
ಏಡ್ಸ್‌, ಹೆಪಟೈಟಿಸ್‌ ಬಿ ಮತ್ತು ಸಿ, ರೇಬೀಸ್‌, ಸೆಪ್ಟಿಸೆಮಿಯಾ, ತೀವ್ರವಾದ ರಕ್ತಕ್ಯಾನ್ಸರ್‌, ಧನುರ್ವಾಯು, ಕಾಲರಾ ಮತ್ತು ಸಾಂಕ್ರಾಮಿಕ ರೋಗಗಳಾದ ಮೆನಿಂಜೈಟಿಸ್‌ ಮತ್ತು ಎನ್ಸೆಫಾಲಿಟಿಸ್‌ ಇರುವವರು ಕಣ್ಣುಗಳನ್ನು ದಾನಮಾಡಲು ಸಾಧ್ಯವಿಲ್ಲ.

ದಾನಿಯ ಸಾವು ಸಂಭವಿಸಿದ ಬಳಿಕ ಏನು ಮಾಡಬೇಕು?
ದಾನಿಯು ಸಾವಿಗೀಡಾಗುತ್ತಿದ್ದಂತೆ ಅವರ ಕಣ್ಣುಗಳನ್ನು ಮುಚ್ಚಬೇಕು.
-ದಾನಿಯ ಶಿರಭಾಗ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು.
-ಸಾಧ್ಯವಾದರೆ ಪ್ಲಾಸ್ಟಿಕ್‌ನಲ್ಲಿ ಮಂಜುಗಡ್ಡೆ ಹಾಕಿ ಅದನ್ನು ಹಣೆಯ ಮೇಲೆ ಇಡಬೇಕು.
-ತತ್‌ಕ್ಷಣವೇ ಹತ್ತಿರದ ಸರಕಾರಿ ಅಥವಾ ಖಾಸಗಿ ಐ ಬ್ಯಾಂಕ್‌ಗಳಿಗೆ ಅಥವಾ ಆರೋಗ್ಯ ಸಹಾಯವಾಣಿ 104ಕ್ಕೆ  ಕರೆ ಮಾಡಬಹುದು.

ನೇತ್ರದಾನ ವಾಗ್ಧಾನ ಮಾಡಿ ಫೋಟೋ ಕಳಿಸಿ
ನೇತ್ರದಾನವು ಜೀವನ ದಾನದ “ಬೆಳಕಿನ ಚಳವಳಿ. ನೀವೂ ಮಾಡಿ, ನಿಮ್ಮವರಿಗೂ ಮಾಡಲು ಹೇಳಿ. ಇನ್ನೊಬ್ಬರಿಗೆ ಬೆಳಕಾಗಿ. ನಿಮ್ಮೂರಲ್ಲೇ “ನೇತ್ರದಾನ ವಾಗ್ಧಾನ’ ಮಾಡಿ ನೋಂದಣಿ ಪ್ರಮಾಣ ಪತ್ರದ ಜತೆ ಭಾವಚಿತ್ರ, ಊರು-ಸಂಪರ್ಕ ವಿವರ ನಮಗೆ ಕಳುಹಿಸಿ. ಆಯ್ದವುಗಳನ್ನು ಪ್ರಕಟಿಸುತ್ತೇವೆ.- 9148594259

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next