ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ಹೊಳೆಕಟ್ಟು ದಲಿತ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದ 15 ಮನೆಗಳು ನೀರಿಲ್ಲದೆ ಬಳಲಿವೆ. ಪರಿಸರದಲ್ಲಿ ಬಾವಿ ಇದ್ದರೂ ಉಪ್ಪು ನೀರಾಗಿದೆ. ಕೆಲವು ಬಾವಿಗಳಲ್ಲಿ ನೀರು ಆರಿದೆ.
ಮನೆ ಬಳಕೆಗೂ ಸಾಲುತ್ತಿಲ್ಲ
ಪ್ರತಿ ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆ ಇದೆ. ಸರಕಾರಿ ಬಾವಿಯಿಂದ ನೀರು ಪೂರೈಕೆ ಮಾಡುತ್ತಾರೆ. ಆದರೆ ಸಾಕಷ್ಟು ಒತ್ತಡ ಇಲ್ಲದ್ದರಿಂದ ನೀರ ಹರಿವು ಕಡಿಮೆಯಾಗಿ ದಿನ ಬಳಕೆಗೆ ಬೇಕಾಗುವಷ್ಟು ನೀರು ಸಿಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ದಯಾನಂದ ಹೊಳೆಕಟ್ಟು.
ಪ್ರಯೋಜನಕ್ಕಿಲ್ಲದ ಬಾವಿ
ಪ್ರತಿ ವರ್ಷ ಬೇಸಗೆ ಆರಂಭವಾದರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಈ ಭಾಗದಲ್ಲಿ ಮೂರು ಸರಕಾರಿ ಬಾವಿಯಲ್ಲಿ ಸಮೃದ್ಧ ನೀರಿದ್ದರೂ ಉಪ್ಪು ನೀರಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ. ಹೊಳೆಕಟ್ಟಿನ ಉತ್ತರ ಭಾಗದಲ್ಲಿರುವ ಮನೆಗಳಿಗೆ ಪಣ್‌ಹತ್ವಾರ್ ಬೆಟ್ಟು ಸಮೀಪದಿಂದ ನೀರು ಪೂರೈಕೆಯಾಗುತ್ತಿದೆ. ಅದೂ ಕೂಡ ಕಲುಷಿತವಾಗಿದೆ ಎಂದು ಇಲ್ಲಿನವರಾದ ರಮೇಶ್ ಹೊಳೆಕಟ್ಟು ಅವರು ಹೇಳುತ್ತಾರೆ.
ವಾರ್ಡ್‌ನವರ ಬೇಡಿಕೆ
– ಗ್ರಾ.ಪಂ. ತತ್‌ಕ್ಷಣವೇ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಬೇಕು
– ಪೈಪ್‌ಲೈನ್ ನೀರು ದುರಪಯೋಗಪಡಿಸಿ ಕೊಳ್ಳುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು
– ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ವರ್ಷವೂ ಇಲ್ಲಿ ನೀರಿನ ತತ್ವಾರ. ಪರಿಹಾರ ಕಲ್ಪಿಸಿ ಎಂದು ಜನರು ಹೇಳುತ್ತಿದ್ದರೂ ಬೇಸಗೆಯಲ್ಲಿ ಸಮಸ್ಯೆ ಹಾಗೇ ಮುಂದುವರಿದಿದೆ. ಕೊರವಡಿ ಹೊಳೆಕಟ್ಟಿನ ಜನರ ನೀರಿನ ಸಮಸ್ಯೆ ತುರ್ತು ಪರಿಹಾರವಾಗಬೇಕಾದ್ದು ಅತ್ಯಗತ್ಯ.
ಉದಯವಾಣಿ ಆಗ್ರಹ
ನೀರು ಲಭ್ಯತೆ ಸಾಕಷ್ಟಿಲ್ಲದ ಪ್ರದೇಶಗಳಿಗೆ ಕೂಡಲೇ ಟ್ಯಾಂಕರ್ ನೀರು ಹರಿಸಬೇಕು. ನೀರು ಸೋರಿಕೆ, ಕಳ್ಳತನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಎಲ್ಲೆಡೆಗೆ ನೀರು ಹರಿಯಲು ವ್ಯವಸ್ಥೆ ಮಾಡಬೇಕು.
– ಟಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ