ಬೆಂಗಳೂರು: ‘ಆಡಿಯೋ-ವಿಡಿಯೋ’ ಕುರಿತ ರಾಜಕೀಯ ವಿದ್ಯಮಾನಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,’ಇದೆಲ್ಲವೂ ಅಸಹ್ಯ ರಾಜಕಾರಣದ ಪರಮಾವಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರು ಆಡಿಯೋ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಸಿಡುಕಿನಿಂದಲೇ ಉತ್ತರಿಸಿದ ದೇವೇಗೌಡರು, ‘ಯಾರ್ಯಾರೋ ಮಾಡುವ ಆಡಿಯೋಗೂ ನನಗೂ ಏನೂ ಸಂಬಂಧ. ನಾನ್ಯಾಕೆ ಪ್ರತಿಕ್ರಿಯಿಸಲಿ. ಮಾಜಿ ಪ್ರಧಾನಿಯಾಗಿ ನನಗೆ ಮಾಡಬೇಕಾದ ಕೆಲಸ ಬೇರೆಯೇ ಇದೆ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿ ನಾಯಕರು ಹೇಗೆ ವರ್ತಿಸುತ್ತಿದ್ದಾರೆ. ನೂರಾರು ಕೋಟಿ ರೂ. ಆಮಿಷ ಹೇಗೆ ಒಡ್ಡಿದ್ದಾರೆ. ಇದರ ಹಿಂದೆಲ್ಲಾ ಯಾವ್ಯಾವ ನಾಯಕರು ಇದ್ದಾರೆ. ಇವೆಲ್ಲವೂ ಗೊತ್ತಿರುವ ವಿಚಾರ ಎಂದು ದೇವೇಗೌಡರು ಹೇಳಿದರು.
ದೆಹಲಿಯಲ್ಲೇ ಉತ್ತರಿಸುವೆ
ಪ್ರಧಾನಿ ಮೋದಿಯವರು ನನ್ನನ್ನು ‘ಸೋಕಾಲ್ಡ್ ಸನ್ ಆಫ್ ಸಾಯಿಲ್’ ಎಂದು ವ್ಯಂಗ್ಯವಾಡಿದ್ದಾರೆ. ರೈತರಿಗೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವನ್ನು ನಾನು ದೆಹಲಿಯಲ್ಲೇ ಕೊಡುತ್ತೇನೆ ಎಂದು ಹೇಳಿದ ದೇವೇಗೌಡರು, ನನ್ನ ರಾಜಕೀಯ ಜೀವನದ 54 ವರ್ಷದಲ್ಲಿ ರೈತರಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಸಂಸತ್ತಿನಲ್ಲಿ ಹೇಳಲು ಸಿದ್ಧ. ನರೇಂದ್ರ ಮೋದಿ ಪ್ರಧಾನಿ ಯಾಗಿ 5 ವರ್ಷ ಏನು ಮಾಡಿದ್ದಾರೆ ಎಂದು ಚರ್ಚಿಸಲಿ. ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂಬ ಮಾತುಗಳು ಯಾರಿಗೂ ಭೂಷಣವಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.