Advertisement

ಗದ್ದೆಗಿಳಿದು ನಾಟಿ ಮಾಡಿ, ಓ.. ಬೇಲೆ ಹಾಡಿದ ಶಾಲಾ ಮಕ್ಕಳು

12:46 PM Jul 04, 2018 | |

ಆಲಂಕಾರು : ಮಕ್ಕಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆಯ ಜತೆಗೆ ಪಾಡªನ ಹಾಡುಗಳಿಗೆ ಹೆಜ್ಜೆ ಹಾಕುವ ಅವಕಾಶ. ಹಿರಿಯರು ಹಾಗೂ ಶಾಲಾ ಅಧ್ಯಾಪಕ ವೃಂದದಿಂದ ನೇಜಿ ನಾಟಿ ಕುರಿತಾಗಿ ಸಮಗ್ರ ಮಾಹಿತಿ. ಬೇಸಾಯ ಗದ್ದೆಯಲ್ಲಿ ಮಕ್ಕಳು ಕೆಲವು ಗಂಟೆಗಳ ಕಾಲ ಮಣ್ಣಿನ ಮಕ್ಕಳಾದರು. ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗ್ರಾಮದ ನಡು ಮನೆ ನಾರಾಯಣ ಪೂಜಾರಿ ಅವರ ನೂತನ ಗದ್ದೆಯಲ್ಲಿ ಮಕ್ಕಳಿಗೆ ನೇಜಿ ನಾಟಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

ರೈತ ಮಾದರಿ ವಸ್ತ್ರ
ಅಪ್ಪಟ ಗ್ರಾಮೀಣ ಪ್ರದೇಶದ ರೈತರಂತೆ ಹುಡುಗಿಯರು ತಲೆಗೆ ಮುಟ್ಟಾಳೆ ಇಟ್ಟುಕೊಂಡರೆ, ಹುಡುಗರು ಮುಂಡಾಸುಸುತ್ತಿದ್ದರು. ಸೊಂಟಕ್ಕೆ ಬೈರಾಸು ಕಟ್ಟಿಕೊಂಡು ಗದ್ದೆಗಿಳಿದು ನಾಟಿ ಕಾರ್ಯ ಮಾಡಿದರು. ಅಧ್ಯಾಪಕರೂ ರೈತರಂತೆ ವಸ್ತ್ರ ಧರಿಸಿ ಗದ್ದೆಗಿಳಿದು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದರು. ಬಿಸಿಯೂಟ ತಯಾರಿಕೆ ಸಿಬಂದಿ ಸ್ವತಃ ನೇಜಿ ನಾಟಿ ಮಾಡಿ, ಮಕ್ಕಳಿಗೂ ಕಲಿಸಿಕೊಟ್ಟರು. ಕೆಲವು ಮಕ್ಕಳು ನಾಟಿಯಲ್ಲಿ ತೊಡಗಿಸಿಕೊಂಡರೆ ಮತ್ತೆ ಕೆಲವರು ಗದ್ದೆಯ ಕರೆ (ಪುಣಿ) ಸಿದ್ಧಪಡಿಸುವ ಕೆಲಸದಲ್ಲಿ ನಿರತರಾದರು.

ಮತ್ತೆ ಮೊಳಗಿದ ಓ..ಬೇಲೆ
ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ನೇಜಿ, ಜನಪದ ಹಾಡುಗಳುನಿಲ್ಲಿ ಮತ್ತೆ ಕೇಳಿದವು. ಓ.. ಬೇಲೆ ಪದ್ಯಗಳನ್ನು ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಆಲಿಸಿದರು. ನೇಜಿ ನಾಟಿ ಕಾರ್ಯಕ್ಕೆ ಆಗಮಿಸಿದ್ದ 19ಕ್ಕೂ ಅಧಿಕ ಹಿರಿಯ ಮಹಿಳೆಯರು ಓ.. ಬೇಲೆ, ಪಾಡ್ದನ ಹಾಡುಗಳನ್ನು ಹಾಡುವುದರ ಮೂಲಕ ಮಕ್ಕಳ ಹಾಗೂ ಸೇರಿದ್ದ ಜನತೆಯ ಮನರಂಜಿಸಿದರು. ಶಾಲಾ ವಿದ್ಯಾರ್ಥಿಗಳು ಹಾಡುಗಳಿಗೆ ಧ್ವನಿ ಸೇರಿಸಿ, ಗದ್ದೆಯಲ್ಲೇ ಹೆಚ್ಚೆ ಹಾಕಿ ಸಂಭ್ರಮಿಸಿದರು.

ಮಕ್ಕಳ ಸಂಭ್ರಮ
ಕೆರೆ, ತೋಡುಗಳ ನೀರಿನಲ್ಲಿ ಸಂಭ್ರಮಿಸುವ ಅವಕಾಶದಿಂದ ವಂಚಿತರಾದ ಮಕ್ಕಳಿಗೆ ಇಲ್ಲಿ ತೋಡಿನಲ್ಲಿ ಸ್ನಾನ ಮಾಡುವ ಭಾಗ್ಯ ಒದಗಿ ಬಂತು. ನೇಜಿ ನಾಟಿ ಮಾಡಿದ ಬಳಿಕ ಗದ್ದೆಯ ಪಕ್ಕದಲ್ಲೇ ಹರಿಯುವ ಕಿರು ತೋಡಿನಲ್ಲಿ ಮಕ್ಕಳ ಸ್ನಾನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅರ್ಧ ಗಂಟೆ ಮಕ್ಕಳು ನೀರಿನಲ್ಲಿ
ಆಡುವ ಮೂಲಕ ನಿರಾಟದ ಮೋಜನ್ನೂ ಪಡೆದುಕೊಂಡರು.

ವಿಶೇಷ ಭೋಜನ
ನೇಜಿಗೆ ಆಗಮಿಸಿದವರಿಗೆ ವಿಶೇಷ ಆಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಿಂದಿನ ಕಾಲದಲ್ಲಿ ನೇಜಿಯ ಕೆಲಸದವರಿಗೆ ಬೆಳಗ್ಗಿನ ಉಪಾಹಾರಕ್ಕೆ ನೀಡುತ್ತಿದ್ದ ಅವಲಕ್ಕಿಯನ್ನು ಇಲ್ಲಿಯೂ ಪುನರಾವರ್ತಿಸಲಾಯಿತು. ಇದರೊಂದಿಗೆ ಚಹಾ, ಕಾಫಿ ನೀಡಲಾಯಿತು. ಮಧ್ಯಾಹ್ನ ಅನ್ನ, ಮೊಳಕೆ ಬರಿಸಿದ ಹೆಸರುಕಾಳು, ಸೌತೆಯ ಪದಾರ್ಥದೊಂದಿಗೆ ಹಲಸಿನ ಕಾಯಿಯ ಗಸಿ, ಕಡ್ಲೆ ಪಾಯಸ ನೀಡಲಾಯಿತು.

Advertisement

ಪಠ್ಯೇತರ ಚಟುವಟಿಕೆ
ಕೃಷಿ, ಬೇಸಾಯದ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಇಂದಿನ ಪ್ರಾತ್ಯಕ್ಷಿಕೆಗೆ ಅವಕಾಶ ನೀಡಲಾಗಿದೆ. ನಶಿಸುತಿರುವ ಬೇಸಾಯ ಕೃಷಿಯ ಬಗ್ಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಮಕ್ಕಳಿಗೆ ಸಮಗ್ರ ಮಾಹಿತಿ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ. 
– ಕೆ.ಪಿ. ನಿಂಗರಾಜು,
   ಮುಖ್ಯಗುರು

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next