Advertisement

ಗರಿಗೆದರಿದ ಕೃಷಿ ಚಟುವಟಿಕೆ

05:04 PM May 28, 2018 | Team Udayavani |

ಹೊಸಪೇಟೆ: ತಾಲೂಕಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರೈತರು ಈಗಾಗಲೇ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ವಿವಿಧೆಡೆ ಮಂಗಳವಾರ, ಬುಧವಾರ ರಾತ್ರಿ ಸುರಿದ ರೋಹಿಣಿ ಮಳೆಯಿಂದಾಗಿ ಪೂರ್ವ ಮುಂಗಾರು ಬೆಳೆಗಳಾದ ಜೋಳ, ರಾಗಿ, ಹೆಸರು, ತೊಗರಿ, ಹಲಸಂದೆ, ಬೀಜ ಬಿತ್ತಲು ರೈತರು ಹೊಲ, ಗದ್ದೆಗಳ ಕಡೆ ಮುಖ ಮಾಡಿದ್ದಾರೆ.

Advertisement

ಕಳೆದ ನಾಲ್ಕಾರು ದಿನಗಳಿಂದ ಸುರಿದ ಮಳೆ ನಗರ ಸೇರಿದಂತೆ ತಾಲೂಕಿನ ಕಮಲಾಪುರ, ಕಂಪ್ಲಿ, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿರುವುದು ಮಳೆ ಮಾಪಕದಲ್ಲಿ ವರದಿಯಾಗಿದೆ.
 
ತಾಲೂಕಿನಲ್ಲಿ ಮೇ 23ರ ವರೆಗೆ 67 ಮಿ.ಮೀ. ವಾಡಿಕೆ ಮಳೆ ಪೈಕಿ ಈ ವರೆಗೂ 101 ಮಿ.ಮೀ. ಮಳೆಯಾಗಿ ಬಿತ್ತನೆಗೆ ಪೂರಕವಾಗಿದೆ. ಜಮೀನು ಹದಗೊಳಿಸುವ ಕೆಲಸ ಆರಂಭಗೊಂಡಿದ್ದು, ಮೇ ಎರಡನೇ ವಾರ ಉತ್ತಮ ಮಳೆಯಾಗಿದೆ.

ಮೇ ತಿಂಗಳ ವಾಡಿಕೆ ಮಳೆ 67 ಮಿ.ಮೀ.ಗೆ 101 ಮಿ.ಮೀ. ಮಳೆಯಾಗಿದೆ. ಹೊಸಪೇಟೆ 77 ವಾಡಿಕೆಗೆ, 107 ಮಿ.ಮೀ. ಆಗಿ ಶೇ. 69 ಹೆಚ್ಚಾಗಿದೆ. ಕಮಲಾಪುರ 68 ವಾಡಿಗೆ 72 ಮಿ.ಮೀ ಆಗಿದ್ದು, ಶೇ. 6 ಹೆಚ್ಚಾಗಿದೆ.ಕಂಪ್ಲಿ 54 ವಾಡಿಕೆಗೆ 59 ಮಿ.ಮೀ. ಆಗಿದ್ದು, ಶೇ. 9 ಅಧಿಕಾವಾಗಿದೆ, ಮರಿಯಮ್ಮನಹಳ್ಳಿ 83 ವಾಡಿಕೆಗೆ 177 ಮಿ.ಮೀ., ಶೇ.116 ಹೆಚ್ಚಾಗಿದೆ. ನೀರಾವರಿ ಸೌಲಭ್ಯ ಇರುವ ಕಡೆ ಭತ್ತದ ಬೀಜ ಹಾಕುವುದು ಆರಂಭವಾಗಿದೆ. 

ಬಿತ್ತನೆ ಗುರಿ: ತಾಲೂಕಿನಲ್ಲಿ 2018ರ ಮುಂಗಾರು ಹಂಗಾಮಿಗೆ ಒಟ್ಟಾರೆ ಸುಮಾರು 33 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಏಕದಳ ಧಾನ್ಯ ಭತ್ತ, ರಾಗಿ, ಜೋಳ, ಸಜ್ಜೆ ಇತರೆ ನೀರಾವರಿ ಪ್ರದೇಶ 16,550, ಮಳೆ ಆಶ್ರಿತ ಪ್ರದೇಶ 6,230 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗುವುದು. ಅದರಂತೆ ಬಿತ್ತನೆ ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆ ಬಿತ್ತನೆ ಕೈಗೊಳ್ಳುತ್ತಿದ್ದಾರೆ.

7 ಕೇಂದ್ರಗಳು: ತಾಲೂಕಿನ ರೈತರಿಗೆ ಅನುಕೂಲಕ್ಕಾಗಿ ನಗರ ಸೇರಿದಂತೆ ಕಂಪ್ಲಿ, ಕಮಲಾಪುರ, ಮರಿಯಮ್ಮನಹಳ್ಳಿ 4 ರೆತ ಸಂಪರ್ಕ ಕೇಂದ್ರ ಹಾಗೂ ಹೊಸದಾಗಿ ಬೈಲುವದ್ದಿಗೆರಿ, ನಾಗಲಾಪುರ, ಚಿಲಕನಹಟ್ಟಿಯಲ್ಲಿ 3 ಉಪ ಬೀಜ ಮಾರಾಟ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

Advertisement

ರಸೀದಿ ಪಡೆಯಲು ಸೂಚನೆ: ತಾಲೂಕಿನ ಎಲ್ಲ ಪರಿಕರ ಮಾರಾಟಗಾರರು ಪರಿಕರಗಳನ್ನು ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲು ಸೂಚಿಸುವ ಜತೆಗೆ ಮಾರಾಟ ಮಾಡಿದ ಪರಿಕರಗಳಿಗೆ ರಸೀದಿ ಸಂಖ್ಯೆ ಹಾಗೂ ನಿಗದಿಪಡಿಸಿದ ದರವನ್ನು ರಸೀದಿಯಲ್ಲಿ ನಮೂದಿಸುವಂತೆ ಇಲಾಖೆ ಸೂಚನೆ ನೀಡಿದೆ.

ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ, ಅವಧಿ ಮೀರಿರುವ ಪರಿಕರಗಳನ್ನು ಮಾರಾಟ ಮಾಡುವುದಾಗಲಿ, ಯಾವುದೇ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವುದಾಗಲಿ ಕಂಡು ಬಂದಲ್ಲಿ ರೆತರು ಕೂಡಲೇ ಸಮೀಪದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಕೃಷಿ ಇಲಾಖೆಯವರು ತಿಳಿಸಿದ್ದಾರೆ

ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ತಾಲೂಕಿನ 4 ಹೋಬಳಿಗಳ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮೇ 29ರಂದು ಕಂಪ್ಲಿಯ ಜಿಲ್ಲಾ ಕೃಷಿ ಕೇಂದ್ರದಲ್ಲಿ ರಸಗೊಬ್ಬರ ವ್ಯಾಪಾರಿಗಳಿಗೆ ಸಭೆ ಕರೆಯಲಾಗಿದೆ.  ಕೆ. ವಾಮದೇವ, ಸಹಾಯಕ ಕೃಷಿ ಇಲಾಖಾ ನಿರ್ದೇಶಕ, ಹೊಸಪೇಟೆ.

ಮಳೆ ಪ್ರಮಾಣ ಉತ್ತಮವಾಗಿದೆ. ಬಿತ್ತನೆಗೆ ಎಲ್ಲ ಸಿದ್ಧತೆ ಮಡಲಾಗುತ್ತಿದೆ. ಭೂಮಿ ಹದಗೊಳಿಸುವ ಕಾರ್ಯ ನಡೆಯುತ್ತಿದೆ. ಮುಂದೆಯೂ ಇದೇ ರೀತಿಯಲ್ಲಿ ಕಾಲಕಾಲಕ್ಕೆ ಮಳೆಯಾದರೆ ರೈತರಿಗೆ ಒಳ್ಳೆಯದಾಗುತ್ತದೆ.
 ವೆಂಕಪ್ಪ ಸೀತರಾಮ ತಾಂಡಾ, ಕಮಲಾಪುರ ಹೋಬಳಿ. 

Advertisement

Udayavani is now on Telegram. Click here to join our channel and stay updated with the latest news.

Next