Advertisement

ಕರಾವಳಿಯಲ್ಲಿ ಅವಧಿಗೆ ಮುನ್ನವೇ ಸೆಕೆಗಾಲ! ವರ್ಷದಿಂದ ವರ್ಷಕ್ಕೆ ಚಳಿಗಾಲದ ಆಯಸ್ಸು ಕಡಿಮೆ

11:42 PM Feb 09, 2024 | Team Udayavani |

ಮಂಗಳೂರು: ಹವಾಮಾನ ವೈಪರೀತ್ಯದ ಪರಿಣಾಮ ಕರಾವಳಿ ಭಾಗಕ್ಕೆ ತಟ್ಟಿದ್ದು ಈ ಬಾರಿ ಚಳಿಗಾಲ ಅವಧಿಗೂ ಮುನ್ನವೇ ಕಣ್ಮರೆಯಾಗಿ ಬೇಸಗೆ ದೀರ್ಘ‌ ಕಾಲ ಕಾಡುವ ಚಿಂತೆ ಆವರಿಸಿದೆ.

Advertisement

ಹಿಂಗಾರು ಅವಧಿಯಲ್ಲಾದ ಏರು ಪೇರು ಇದಕ್ಕೆ ಕಾರಣ. ಡಿಸೆಂಬರ್‌ ಮಧ್ಯಭಾಗದವರೆಗೆ ಮಳೆ ಇರುತ್ತಿದ್ದರೆ, ಭೂಮಿಯ ಮೇಲ್ಪದರದಲ್ಲಿ ನೀರಿನ ಅಂಶ ಕ್ಷೀಣಿಸುತ್ತಿರಲಿಲ್ಲ. ಆಗ ಉಷ್ಣಾಂಶದಲ್ಲಿ ಇಳಿಕೆಯಾಗಿ ದೀರ್ಘ‌ ಚಳಿಗಾಲ ಇರುತ್ತಿತ್ತು. ಆದರೆ, ಈ ಬಾರಿ ಮಳೆ ಕಡಿಮೆಯಾದ ಕಾರಣ ಚಳಿಯೂ ಕಡಿಮೆಯಾಗಿ ಅವಧಿಗೂ ಮುನ್ನವೇ ಸೆಕೆ ಆರಂಭವಾಗಿದೆ.

ಕರಾವಳಿ ಭಾಗದಲ್ಲಿ ಈ ಸಂದರ್ಭದಲ್ಲಿ ಸಾಮಾನ್ಯವಾಗಿ 30 ಡಿ.ಸೆ. ಗರಿಷ್ಠ ಉಷ್ಣಾಂಶ ಇರುತ್ತದೆ. ಆದರೆ, ಕಳೆದೆರಡು ವಾರಗಳಿಂದ ಮಂಗಳೂರು ಸಹಿತ ಕರಾವಳಿ ಭಾಗದ ಹಲವೆಡೆ 32 ರಿಂದ 33 ಡಿ.ಸೆ. ನಷ್ಟು ಉಷ್ಣಾಂಶ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಚಳಿ ಕೇವಲ ಬೆಳಗಿನ ಜಾವಕ್ಕೆ ಸೀಮಿತವಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಮುಂದಿನ ಕೆಲ ವಾರಗಳ ಕಾಲ ಇದೇ ರೀತಿಯ ಉಷ್ಣಾಂಶ ಮುಂದುವರೆಯುವ ಸಾಧ್ಯತೆ ಇದೆ.
ಕೆಲ ವರ್ಷಗಳಿಂದ ಕರಾವಳಿಯಲ್ಲಿ ಚಳಿಯ ಅವಧಿ ಕಡಿಮೆಯಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ 1981ರಲ್ಲಿ ಅತೀ ಕಡಿಮೆ ಅಂದರೆ, 15.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಟ ಉಷ್ಣಾಂಶ ದಾಖಲಾಗಿತ್ತು. 2018ರಲ್ಲಿ 19 ಡಿ.ಸೆ. ಕನಿಷ್ಠ ಉಷ್ಣಾಂಶ ಉಂಟಾಗಿತ್ತು.

ಆರೋಗ್ಯ ಇಲಾಖೆಯಿಂಲೂ ಜಾಗೃತಿ
“ಕೇಂದ್ರದ ಹವಾಮಾನ ನಿಯಂತ್ರಣ ಮತ್ತು ಮಾನವ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮದಡಿ ವಿಪತ್ತು ನಿರ್ವಹಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಎಲ್ಲಾ ಪ್ರಾ. ಆ. ಕೇಂದ್ರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದರಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ’ ಎಂದು ಡಿಎಚ್‌ಒ ಡಾ| ತಿಮ್ಮಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.

ಕಳೆದ ವರ್ಷದಂತೆ ಬಿಸಿ ಗಾಳಿ ಭೀತಿ !
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಕಳೆದ ವರ್ಷ ಮಾರ್ಚ್‌ ನ ಆರಂಭದಲ್ಲಿ ಭಾರತೀಯ ಹವಾಮಾನ ಇಲಾಖೆಯು ಬಿಸಿ ಗಾಳಿಯ ಎಚ್ಚರಿಕೆ ನೀಡಿತ್ತು. 36 ಡಿ.ಸೆ.ಗೂ ಅಧಿಕ ತಾಪಮಾನ ಏರಿಕೆ ಕಂಡಿತ್ತು. ಮಾರ್ಚ್‌ ವೇಳೆಗೆ ಸಾಮಾನ್ಯವಾಗಿ ಅರಬಿ ಸಮುದ್ರ ಕಡೆಯಿಂದ ತೇವಾಂಶದಿಂದ ಕೂಡಿದ ಗಾಳಿ ಬೀಸಬೇಕು. ಆದರೆ ಬಂಗಾಳಕೊಲ್ಲಿ ಕಡೆಯಿಂದ ಶುಷ್ಕ ಗಾಳಿ ಬೀಸಿದ ಪರಿಣಾಮ ಬಿಸಿ ಗಾಳಿಯಿಂದ ಉಷ್ಣಾಂಶ ಏರಿಕೆಗೆ ಕಾರಣವಾಗಿತ್ತು. ಕಳೆದ ವರ್ಷದ ರೀತಿಯೇ ಈ ಬಾರಿಯೂ ಹವಾಮಾನ ಕೂಡಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ.

Advertisement

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next