ಬೆಂಗಳೂರು: ಸಲಿಂಗ ಕಾಮಿಗಳ ಡೇಟಿಂಗ್ ಆ್ಯಪ್‌ವೊಂದರಲ್ಲಿ ಪರಿಚಿತನಾಗಿದ್ದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದ ಯುವಕನಿಗೆ ಆ ವ್ಯಕ್ತಿ ಹಾಗೂ ಆತನ ಗ್ಯಾಂಗ್ ಹಲ್ಲೆಗೈದು ಸುಲಿಗೆ ಮಾಡಿ ಪರಾರಿ ಆಗಿರುವ ಘಟನೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಡುಗೋಡಿಯ ಓಂಶಕ್ತಿ ನಗರದಲ್ಲಿ ನ.22ರಂದು ಈ ಘಟನೆ ನಡೆದಿದೆ. ಸಂತ್ರಸ್ತ ನದೀಮ್(29) ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿ ಫರಾನ್, ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಘಟನೆ?: ಸಂತ್ರಸ್ತ ನದೀಮ್‌ಗೆ ಇತ್ತೀಚೆಗೆ “ಗ್ರಿಂಡರ್’ ಎಂಬ “ಗೇ’ ಡೇಟಿಂಗ್ ಆ್ಯಪ್‌ನಲ್ಲಿ ಫರಾನ್ ಎಂಬಾತ ಪರಿಚಿತನಾಗಿದ್ದ. ನ.22ರಂದು ಸಂಜೆ 4 ಗಂಟೆಗೆ ನದೀಮ್, ಫರಾನ್‌ನನ್ನು ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಇಬ್ಬರೂ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಫರಾನ್ ವಾಶ್ ರೂಂಗೆ ತೆರಳಿದ್ದಾನೆ. ಈ ಸಮಯಕ್ಕೆ ನಾಲ್ಕೈದು ಮಂದಿ ಅಪರಿಚಿತರು ನದೀಮ್ ಅವರ ಮನೆ ಬಾಗಿಲು ತೆರೆಯಲು ಹೇಳಿದ್ದಾರೆ. ಇದರಿಂದ ಆತಂಕಗೊಂಡ ನದೀಮ್, ತಕ್ಷಣ ವಾಶ್ ರೂಂನ ಬಾಗಿಲಿಗೆ ಚಿಲಕ ಹಾಕಿದ್ದಾನೆ. ಬಳಿಕ ಮನೆ ಬಾಗಿಲ ಬಳಿ ನಿಂತು ಯಾರು ನೀವು? ಇಲ್ಲಿಂದ ಹೊರಡಿ. ಇಲ್ಲವಾದರೆ, ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಸಿದ್ದಾನೆ. ಈ ಸಮಯಕ್ಕೆ ವಾಶ್ ರೂಂನಲ್ಲಿದ್ದ ಫರಾನ್ ಹೊರಗೆ ಬರಲು ಪ್ರಯತ್ನಿಸಿದ್ದಾನೆ. ಹೊರಗೆ ಬರಬೇಡ ಎಂದರೂ ಫರಾನ್ ವಾಶ್ ರೂಂ ಬಾಗಿಲು ಮುರಿದು ಹೊರಗೆ ಬಂದು ಮನೆ ಬಾಗಿಲು ತೆರೆದು ಹೊರಗೆ ಹೋಗಿದ್ದಾನೆ. ಈ ವೇಳೆ ಆರು ಮಂದಿ ಅಪರಿಚಿತರು ಮನೆಗೆ ನುಗ್ಗಿ ನದೀಮ್ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಯುಪಿಐ ಮುಖಾಂತರ 2 ಸಾವಿರ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ದುಬಾರಿ ವಾಚ್, ಮೊಬೈಲ್, ಬೆಳ್ಳಿಯ ಉಂಗುರ ಸೇರಿ ಕೆಲ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.