ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಗುಜರಿ ವ್ಯಾಪಾರಿಯಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದ ಪೊಲೀಸ್ ಬಾತ್ಮೀದಾರನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಿ.ಅಗ್ರಹಾರ ನಿವಾಸಿ ಎಸ್.ನಿವಾಸ್ (34) ಎಂಬಾತನನ್ನು ಬಂಧಿಸಲಾಗಿದೆ. ಮತ್ತೂಬ್ಬ ಆರೋಪಿ ಮೋಕ್ಷಿತ್ ಸೇರಿ ಇತರೆ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಗುಜರಿ ವ್ಯಾಪಾರಿ ಆಕ್ತರ್ ಅಲಿ ಮಂಡಲ್ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು.
ಆರೋಪಿಗಳಿಬ್ಬರು ಪೊಲೀಸ್ ಬಾತ್ಮೀದಾರರಾಗಿ ಕೆಲಸ ಮಾಡುತ್ತಿದ್ದರು. ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪರಾಧ ಹಾಗೂ ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಅದನ್ನೇ ದುರುಪಯೋಗ ಪಡಿಸಿಕೊಂಡು ವೈಟ್‌ಫೀಲ್ಡ್ ಪೊಲೀಸರ ಹೆಸರು ಹೇಳಿಕೊಂಡು ಗುಜರಿ ವ್ಯಾಪಾರಿ ಬಳಿ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಪಟ್ಟಂದೂರು ಅಗ್ರಹಾರ ಬಳಿ ದೂರುದಾರ ಅಖೀ¤ರ್ ಅಲಿ ಮೊಂಡಲ್ ಗುಜರಿ ಮಳಿಗೆ ನಡೆಸುತ್ತಿದ್ದಾರೆ. ಏ.17ರಂದು ಗುಜರಿ ಮಳಿಗೆಗೆ ಹೋಗಿದ್ದ ಆರೋಪಿಗಳು, “ನಾವು ಪೊಲೀಸರು, ನಿಮ್ಮ ಮಳಿಗೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಇದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲು ಬಂದಿದ್ದೇವೆ. ಪ್ರಕರಣ ದಾಖಲಿಸಬಾರದೆಂದರೆ ಹಣ ನೀಡಬೇಕು’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆಗ ನಾನು ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲ ಎಂದು ದೂರುದಾರ ಹೇಳಿ, ಹಣ ನೀಡಲು ನಿರಾಕರಿಸಿದ್ದರು. ಆಗ ಆರೋಪಿಗಳು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಬಲವಂತವಾಗಿ ಪೋನ್ ಪೇ ಮೂಲಕ 80 ಸಾವಿರ ರೂ. ವರ್ಗಾವಣೆ ಮಾಡಿಕೊಂಡು, ನಗದು ರೂಪದಲ್ಲಿ 20 ಸಾವಿರ ರೂ. ಕಸಿದುಕೊಡಿದ್ದಾರೆ. ಜತೆಗೆ, ಎಟಿಎಂ ಕಾರ್ಡ್ ಕಿತ್ತುಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಅದೇ ಎಟಿಎಂ ಕಾರ್ಡ್ ಬಳಸಿ ಏ.18ರಂದು ಬಾಕಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ದೂರುದಾರರಿಂದ ಒಟ್ಟು 2 ಲಕ್ಷ ರೂ. ದೋಚಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಯ ವಿಚಾರಣೆ ವೇಳೆ ಪೊಲೀಸ್ ಬಾತ್ಮೀದಾರ ಎಂದು ಹೇಳಿಕೊಂಡು ಹಲವು ಕಡೆಗಳಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಸದ್ಯ ಒಂದು ಪ್ರಕರಣ ದಾಖಲಾಗಿದೆ. ಯಾರಾದರೂ ದೂರು ನೀಡಿದರೆ, ಅದನ್ನೂ ಪರಿಗಣಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.