ನವದೆಹಲಿ: ರಷ್ಯಾದಿಂದ ಭಾರತದ ಕಚ್ಚಾ ತೈಲ ಆಮದನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡಿದ್ದು, ದೇಶಕ್ಕೆ ಉತ್ತಮ ವ್ಯವಹಾರವನ್ನು ಖಚಿತಪಡಿಸಿಕೊಳ್ಳುವುದು ನಮ್ಮ “ನೈತಿಕ ಕರ್ತವ್ಯ” ಎಂದು ಹೇಳಿದ್ದಾರೆ.
ಬ್ಯಾಂಕಾಕ್‌ನಲ್ಲಿ 9 ನೇ ಭಾರತ-ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್ ಅವರು , ಭಾರತವು ತನ್ನ ಆಸಕ್ತಿಯ ಕುರಿತಾಗಿ “ಬಹಳ ಮುಕ್ತ ಮತ್ತು ಪ್ರಾಮಾಣಿಕವಾಗಿದೆ” ಎಂದರು.
ಜಾಗತಿಕ ತೈಲ ಬೆಲೆಗಳನ್ನು ನಿರ್ಣಯಿಸಿದ ಜೈಶಂಕರ್, ತೈಲ ಮತ್ತು ಅನಿಲ ಬೆಲೆಗಳು ಪ್ರಪಂಚದಾದ್ಯಂತ “ಅಸಮಂಜಸವಾಗಿ ಹೆಚ್ಚಾಗಿದೆ” ಎಂದರು.
”ನಮ್ಮ ಆಸಕ್ತಿಗಳ ಬಗ್ಗೆ ನಾವು ತುಂಬಾ ಮುಕ್ತ ಮತ್ತು ಪ್ರಾಮಾಣಿಕರಾಗಿದ್ದು, ನಮ್ಮದು 2000 ಯುಎಸ್ ಡಾಲರ್ ತಲಾ ಆದಾಯ ಹೊಂದಿರುವ ದೇಶ, ಇವರು ಹೆಚ್ಚಿನ ಬೆಲೆಗಳನ್ನು ನಿಭಾಯಿಸುವ ಜನರಲ್ಲ. ಉತ್ತಮ ವ್ಯವಹಾರವನ್ನು ಖಚಿತಪಡಿಸಿಕೊಳ್ಳುವುದು ನನ್ನ ನೈತಿಕ ಕರ್ತವ್ಯ,”ಎಂದರು.
ರಷ್ಯಾದ ತೈಲ ಆಮದು ಕುರಿತು ಭಾರತದ ನಿಲುವು ಅಮೆರಿಕಕ್ಕೆ ತಿಳಿದಿದೆ ಮತ್ತು “ಮುಂದುವರಿಯುತ್ತಿದೆ” ಎಂದು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದಾದ್ಯಂತ ಇಂಧನ ಬೆಲೆಗಳ ಏರಿಕೆಯ ಬಗ್ಗೆಯೂ ಚರ್ಚಿಸಿದರು.