ಯಲ್ಲಾಪುರ: ವ್ಯಾಪಕ ಅರಣ್ಯ ನಾಶ ಮಾಡಿ, ಒಂದೂವರೆ ಕಿಮೀ ರಸ್ತೆ ನಿರ್ಮಾಣ ಮಾಡಿದ ಘಟನೆ ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಂಬ್ರಾಳ ಗ್ರಾಮದಲ್ಲಿ ನಡೆದಿದೆ.
ಶಿವಪುರಕ್ಕೆ ತೆರಳುವ ತೂಗು ಸೇತುವೆ ಪಕ್ಕದಿಂದ ಜೆಸಿಬಿ ಬಳಸಿ ಕುಂಬ್ರಾಳ ಜಲಪಾತಕ್ಕೆ ಹೋಗಲು ಹೊಸದಾಗಿ ರಸ್ತೆ ನಿರ್ಮಿಸಿದ್ದು, ಭಾರಿ ಪ್ರಮಾಣದಲ್ಲಿ ಬೆಲೆ ಬಾಳುವ ವಿವಿಧ ಜಾತಿಯ ಮರಗಳನ್ನು ಧರೆಗುರುಳಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಮರಗಳ ಮಾರಣ ಹೋಮ ದಾರಿ ಮಾಡಿದ್ದಾಗಿ ಗ್ರಾಮಸ್ಥರು ಇಲಾಖೆ ಮೇಲಾಧಿ ಕಾರಿಗಳಿಗೆ ದೂರಿದ್ದಾರೆ.
ಕೇವಲ ಒಂದು ವಾರದಲ್ಲಿ ಲಾಕ್‌ಡೌನ್ ಸಮಯ ಬಳಸಿ ಇಷ್ಟೆಲ್ಲ ನಡೆದಿದ್ದು, ಈ ಕುರಿತು ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ಎರಡು ಬಾರಿ ದೂರು ಸಲ್ಲಿಸಿದರೂ ಇಲಾಖೆ ಗಮನ ಕೊಡದೇ ಪರಿಸರ ನಾಶಕ್ಕೆ ದಾರಿ ಮಾಡಿಕೊಟ್ಟಿದೆ. ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಕೆಲಸ ನಿಲ್ಲಿಸಿ, ಮುಳ್ಳಿನ ಬೇಲಿ ಹಾಕಿ ಹೋಗಿದ್ದು, ನಂತರ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಇಲಾಖೆಯವರೇ ಖುದ್ದು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆಂದು ಸ್ಥಳಿಯರು ದೂರಿದ್ದಾರೆ.
ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಈ ಫಾಲ್ಸ್‌ನಲ್ಲಿ ಬೇಸಿಗೆಯಲ್ಲಿ ನೀರೇ ಇರುವುದಿಲ್ಲ. ಮಳೆಗಾಲದಲ್ಲಿ ಸುತ್ತಮುತ್ತಲು ನೀರು ತುಂಬಿ ಪ್ರವಾಸಿಗರು ಹೋಗಲು ಸಾಧ್ಯವೇ ಇಲ್ಲ. ರಸ್ತೆ ಮಾಡಿರುವುದರಿಂದ ಈ ಭಾಗದಲ್ಲಿರುವ ಜೀವ ವೈವಿಧ್ಯತೆಗೆ ಧಕ್ಕೆ ತರುತ್ತಿದೆ. ಸಂರಕ್ಷಿತ ಅರಣ್ಯ ಪ್ರದೇಶವಾದ ಇಲ್ಲಿ ಜೇನಿನ ಮರ ಸಾಕಷ್ಟಿದ್ದು, ಅನೇಕ ಔಷಧ ಸಸ್ಯಗಳಿವೆ. ಪ್ರಾಣಿಗಳು ಸಂಚರಿಸುವ ಸ್ಥಳವೂ ಇದಾಗಿದ್ದು, ಇಲ್ಲಿ ಪ್ರವಾಸಿಗರು ಸಂಚರಿಸಿದರೆ ನೇರ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿಂದಿನ ಗ್ರಾಮ ಅರಣ್ಯ ಸಮಿತಿ ಸಾತೊಡ್ಡಿ ಫಾಲ್ಸ್‌ಗೆ ಬರುವ ಪ್ರವಾಸಿಗರಿಗೆ ಉತ್ತಮ ಹೋಟೆಲ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಅದರೆ ಈಗ ಪ್ರವಾಸಿಗರಿಗೆ ಯಾವ ಸೌಲಭ್ಯವೂ ಇಲ್ಲ, ರಸ್ತೆಯಂತೂ ಹದಗೆಟ್ಟು ಹೋಗಿದೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದಾಗಲೂ ಇನ್ನೊಂದು ಪ್ರವಾಸಿ ತಾಣದ ಅಭಿವೃದ್ಧಿಯ ಅಗತ್ಯವಿತ್ತೆ ಎಂಬುದು ಗ್ರಾಮಸ್ಥರ ಆಶಯವಾಗಿದೆ. ಉತ್ತಮ ಬೆಲೆಬಾಳುವ ಸಾಗವಾನಿ ಸೀಸಂ, ನಂದಿ, ಮತ್ತಿ ಮರಗಳು ರಸ್ತೆ ಕಾಮಗಾರಿ ಭರಾಟೆಯಲ್ಲಿ ಮಣ್ಣಿನಡಿ ಹೂತು ಹೋಗಿವೆ. ಕೆಲವಷ್ಟು ಕಾಳಿನದಿ ಹಿನ್ನೀರಿನ ಪಾಲಾಗಿವೆ. ಇನ್ನೂ ಕೆಲವು ಹೊಸ ರಸ್ತೆಯ ಪಕ್ಕದಲ್ಲಿ ಅನಾಥವಾಗಿ ಬಿದ್ದಿವೆ. ಇವನ್ನೆಲ್ಲ ನೋಡುವಾಗ ಎಂಥವರಿಗೂ ಮರುಕ ಹುಟ್ಟದೇ ಇರಲು ಸಾಧ್ಯವಿಲ್ಲ.
ಸರಿಯಾದ ತನಿಖೆಯಾದಲ್ಲಿ ಮಾತ್ರ ಇದಕ್ಕೆ ಕಾರಣರಾರು ಎಂಬ ಅಂಶ ಹೊರಗೆ ಬರಲು ಸಾಧ್ಯ. ಮಣ್ಣಿನಡಿ ಹೂತು ಹೋಗಿರುವ ಮರಗಿಡಗಳನ್ನು ಹೊರತೆಗೆಯಬೇಕು ಎಂದು ಗ್ರಾಮ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಮೆಣಸುಮನೆ, ಗ್ರಾಮಸ್ಥರಾದ ಶಶಿಧರ ಕೋಟೆಮನೆ, ವಿN°àಶ್ವರ ಕಟ್ಟೆಗದ್ದೆ ಪ್ರದೀಪ ಕೋಟೆಮನೆ, ವಿರೂಪಾಕ್ಷ ಕೋಟೆಮನೆ, ಮುಂತಾದವರು ಇಲಾಖೆಯ ಹಿರಿಯ ಅಧಿ ಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.