ಬೆಂಗಳೂರು: ಕೆಲಸದ ಅವಧಿಯನ್ನು 9ರಿಂದ 12 ಗಂಟೆಗೆ ಹೆಚ್ಚಿಸುವ ಕಾಯ್ದೆಗೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ.
ವಾರದಲ್ಲಿ ಗರಿಷ್ಠ 48 ಗಂಟೆಗಳಿಗೆ ಒಳಪಟ್ಟು ಯಾವುದೇ ದಿನದಲ್ಲಿ ವಿರಾಮ ಮಧ್ಯಾಂತರಗಳನ್ನು ಒಳಗೊಂಡಂತೆ, ಪ್ರಸ್ತುತ ಇರುವ ಕೆಲಸದ ಅವಧಿಯನ್ನು 9ರಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ -2023ರಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.
ದೈನಂದಿನ ಗರಿಷ್ಠ ಕೆಲಸದ ಅವಧಿ ಹೆಚ್ಚಿಸಲು ಅನುಕೂಲವಾಗುವಂತೆ ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗ, ಕಾರ್ಮಿಕನ ಒಟ್ಟು ಕೆಲಸದ ಅವಧಿಯನ್ನು ವಿರಾಮ ಇಲ್ಲದೆ 6 ಗಂಟೆಗಳ ವರೆಗೂ ವಿಸ್ತರಿಸಬಹುದಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ಅವಧಿ ಮೀರಿದ ಕೆಲಸದ ಸಂದರ್ಭದಲ್ಲಿ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕೆಲಸಗಾರನಿಗೆ ವೇತನ ಪಾವತಿಸುವ ಜತೆಗೆ ಕೆಲಸದ ವೇಳೆಯನ್ನು ನಿಗದಿ ಮಾಡುವುದಕ್ಕೂ ಕಾಯ್ದೆಯಲ್ಲಿ ಅವಕಾಶವಿದೆ. ರಾತ್ರಿ ಪಾಳಿ ಯಲ್ಲಿ ದುಡಿಯಲು ಮಹಿಳೆಯರಿಗೂ ಅವಕಾಶ ನೀಡಲಾಗಿದ್ದು, ಆಸಕ್ತ ಮಹಿಳೆಯರ ಲಿಖೀತ ಒಪ್ಪಿಗೆ ಅಗತ್ಯ ಎಂದು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.