Advertisement

ಅಡಿಕೆ ಬೆಂಬಲ ಬೆಲೆ ಅವಧಿ ವಿಸ್ತರಣೆಗೆ ಆದೇಶ: ನಿರ್ಮಲಾ ಸೀತಾರಾಮನ್‌

03:45 AM Jan 13, 2017 | Team Udayavani |

ಪುತ್ತೂರು: ಕೆಂಪಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನೀಡಿದ ಆದೇಶ ಡಿಸೆಂಬರ್‌ 31ಕ್ಕೆ ಮುಗಿದಿದ್ದು, ಅದನ್ನು ವಿಸ್ತರಣೆ ಮಾಡಲು ತತ್‌ಕ್ಷಣ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಬೆಂಬಲ ಬೆಲೆ ವಿಸ್ತರಣೆಗೆ ಸಂಬಂಧಿಸಿ ಎರಡು ದಿನಗಳ ಹಿಂದೆ ರಾಜ್ಯ ಸರಕಾರದಿಂದ ಬೇಡಿಕೆ ಸಲ್ಲಿಕೆಯಾಗಿದ್ದರೂ ಕೇಂದ್ರ ಈ ಮೊದಲೇ ಅವಧಿ ವಿಸ್ತರಣೆಗೆ ನಿರ್ಧರಿಸಿತ್ತು. ಅವಧಿ ವಿಸ್ತರಣೆ ಎಷ್ಟರ ತನಕ ಎಂದು ನಿಗದಿ ಮಾಡಿ, ತತ್‌ಕ್ಷಣ ಆದೇಶ ಹೊರಡಿಸಲಾಗುವುದು ಎಂದರು.

ವಾಣಿಜ್ಯ ಇಲಾಖೆ ಅಡಿಕೆ ಬೆಳೆಗಾರರ ಪರವಾಗಿ ನಿರ್ದಿಷ್ಟ ಕೆಲಸವನ್ನಷ್ಟೇ ಮಾಡಬಹುದು. ವಾಣಿಜ್ಯ ಇಲಾಖೆ ಎಲ್ಲ ಕೆಲಸವನ್ನು ಸ್ವಯಂಪ್ರೇರಿತವಾಗಿ, ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿ ಒಟ್ಟು 9 ಇಲಾಖೆಗಳಿವೆ. ಆದರೂ ಅಡಿಕೆ ಬೆಳೆಗಾರರಿಗೆ ಸಹಾಯ ಮಾಡುವ ಸಂಬಂಧ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಕೃಷಿ ಸಚಿವರ ಗಮನಕ್ಕೂ ತರಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಯಲ್ಲಿ ಅಡಿಕೆ ಬೆಳೆಗೆ ನೆರವು ನೀಡಬೇಕು ಎಂದು ಕರ್ನಾಟಕದ ಸಂಸದರು ಮನವಿ ಸಲ್ಲಿಸಿದ್ದರು. ರೈತ ಸಂಸ್ಥೆ ಕ್ಯಾಂಪ್ಕೋ ಕೂಡ ಬೇಡಿಕೆ ಇಟ್ಟಿತ್ತು. ಸುದೀರ್ಘ‌ ಪ್ರಕ್ರಿಯೆಯ ಅನಂತರ ಕನಿಷ್ಠ ಬೆಂಬಲ ಬೆಲೆ ನೀಡುವ ನಿರ್ಧಾರಕ್ಕೆ ಬರಲಾಯಿತು ಎಂದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಈ ಬಗ್ಗೆ ಮನವಿ ಮಾಡಿದ್ದರು. ಅದೇ ದಿನ ನಾನು ಆದೇಶದ ಪ್ರತಿಯನ್ನು ಅವರಿಗೆ ನೀಡಿದ್ದೆ. ದುರದೃಷ್ಟವಶಾತ್‌ ಬೆಂಬಲ ಬೆಲೆ ಯೋಜನೆ ಅವಧಿ ಡಿಸೆಂಬರ್‌ 31ಕ್ಕೆ ಮುಕ್ತಾಯಗೊಂಡಿತು ಎಂದು ಹೇಳಿದರು.

ನಾನೇ ವಿಷಯ ಪ್ರಸ್ತಾವಿಸಿದ್ದೆ
ಅವಧಿ ವಿಸ್ತರಣೆ ಮಾಡಬೇಕು ಎಂಬ ಮನವಿ ರಾಜ್ಯ ಸರಕಾರದಿಂದ ಬಂದಿರಲಿಲ್ಲ. ಸಿಎಂ ಅವರು ದಿಲ್ಲಿಗೆ ಬಂದು ಪ್ರಧಾನಿ ಅವರನ್ನು ಭೇಟಿ ಮಾಡಿದ್ದ ಸಂದರ್ಭ ನಾನೇ ಈ ವಿಷಯ ಎತ್ತಿದ್ದು, ಬೆಂಬಲ ಬೆಲೆ ಅವಧಿ ವಿಸ್ತರಿಸುವಂತೆ ಯಾಕೆ ಮನವಿ ಸಲ್ಲಿಸುತ್ತಿಲ್ಲ ಎಂದು ಕೇಳಿದ್ದೆ. ಇದಾದ ಅನಂತರ ರಾಜ್ಯ ಸರಕಾರದಿಂದ ಬೇಡಿಕೆ ಬಂದಿದೆ ಎಂದು ನಿರ್ಮಲಾ ಹೇಳಿದರು.

Advertisement

ಅಮೆರಿಕದ ಆರ್ಥಿಕತೆಗೂ ಹೊಡೆತ
ಅಮೆರಿಕ ಐಟಿ ಕಂಪೆನಿಗಳಲ್ಲಿ ಅರೆಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ವಿದೇಶೀಯರಿಗಾಗಿ ಒಬಾಮಾ ಅವಧಿಯಲ್ಲಿ ಎಚ್‌-ಐಬಿ ಎಂಬ ವಿಶೇಷ ವೀಸಾ ಪದ್ಧತಿ ಜಾರಿಗೊಳಿಸಿತ್ತು. ಅದನ್ನು ಹೊಸ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರದ್ದುಪಡಿಸುವುದಾಗಿ ಹೇಳಿಕೆ ನೀಡಿದ್ದು, ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಅಪಾಯ ಇರುವ ಹಿನ್ನೆಲೆಯಲ್ಲಿ ಸರಕಾರದ ನಿಲುವು ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಟ್ರಂಪ್‌ ಸರಕಾರ ರದ್ದುಪಡಿಸುವ ಬಗ್ಗೆ ಹೇಳಿರುವುದು ನಿಜ. ಇದರಿಂದ ಅಮೆರಿಕದ ಕಂಪೆನಿಗಳಿಗೂ ಸಮಸ್ಯೆ ಉಂಟಾದೀತು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.ಸಂಸದ ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next