ಹುಬ್ಬಳ್ಳಿ: ಲಾಕೌಡೌನ್ ಸಂದರ್ಭದಲ್ಲಿ ಗೈರು ಹಾಜರಿಯನ್ನು ವಿಶೇಷ ರಜೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್-19 ವಿಮೆ ಸೌಲಭ್ಯ ವಿಸ್ತರಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಸಂಘದಿಂದ ಸನ್ಮಾನಿಸಿ, ಲಾಕ್‌ಡೌನ್ ಅವಧಿಯಲ್ಲಿ ಅನುಸೂಚಿಗಳು ಕಾರ್ಯಾಚರಣೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಗೈರು ಹಾಜರಿ ಅವಧಿಯನ್ನು ವಿಶೇಷ ರಜೆಯನ್ನಾಗಿ ಪರಿಗಣಿಸಬೇಕು. ಕೋವಿಡ್-19 ತುರ್ತು ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗೂ ವಿಮೆ ಸೌಲಭ್ಯ ವಿಸ್ತರಿಸಿ ಇದನ್ನು 50 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಕಳೆದ ಎರಡು ತಿಂಗಳಿಂದ ಬಸ್ ಸಂಚಾರವಿಲ್ಲದಿದ್ದರೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಅವರ ಪ್ರಯತ್ನದಿಂದ ಏಪ್ರಿಲ್ ತಿಂಗಳ ವೇತನವಾಗಿದ್ದು, ಮೇ ತಿಂಗಳ ವೇತನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಅಶೋಕ ಪಾಟೀಲ, ಪ್ರಧಾನ ಕಾರ್ಯದರ್ಶಿ ಪಿ.ವೈ.ನಾಯಕ್, ಸಂಘದ ಪದಾಧಿಕಾರಿಗಳಾದ ಸಂತೋಷಕುಮಾರ, ನಿತಿನ್ ಹೆಗಡೆ, ಎಫ್.ಸಿ.ಹಿರೇಮಠ, ವಿವೇಕಾನಂದ ವಿಶ್ವಜ್ಞ, ಬಸವಲಿಂಗಪ್ಪ ಬೀಡಿ, ಕಿರಣಕುಮಾರ ಬಸಾಪುರ, ವೈ.ಎಂ.ಶಿವರಡ್ಡಿ ಇನ್ನಿತರರಿದ್ದರು.
ಹೊಸ ನೇಮಕಾತಿ ಇಲ್ಲ : ನಾಲ್ಕು ನಿಗಮಗಳು ಸಂಕಷ್ಟದಲ್ಲಿರುವುದರಿಂದ ಯಾವುದೇ ಹೊಸ ನೇಮಕಾತಿ ಇಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ. ಆದರೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಇರುವ ಸಿಬ್ಬಂದಿ ಕಡಿತ ಮಾಡಲಾಗುವುದು. ಹೊಸ ಕಾರ್ಮಿಕ ಕಾಯ್ದೆ ಅಳವಡಿಸಿಕೊಳ್ಳುವುದಿಲ್ಲ. ನಮ್ಮಲ್ಲಿರುವ ಕಾರ್ಮಿಕ ಕಾಯ್ದೆಯೇ ಮುಂದುವರಿಯಲಿದೆ.
ರಾತ್ರಿ ಬಸ್ ಸಂಚಾರ ಶೀಘ್ರ ವ್ಯವಸ್ಥೆ: ರಾತ್ರಿ ವೇಳೆ ಬಸ್ ಸಂಚಾರಕ್ಕೆ ಅನುಮತಿ ನೀಡುವಂತೆ ಸರಕಾರಕ್ಕೆ ಕೋರಲಾಗಿದೆ. ಶೀಘ್ರ ಇದಕ್ಕೆ ಅವಕಾಶ ದೊರೆಯುವ ಸಾಧ್ಯತೆಯಿದ್ದು, ಪ್ರಯಾಣಿಕರ ಲಭ್ಯತೆ ಆಧರಿಸಿ ರಾತ್ರಿ ಬಸ್‌ಗಳ ಸಂಚಾರ ಆರಂಭಿಸಲಾಗುವುದು.