Advertisement

ಫಿಲ್ಮ್ ಶೀಟ್‌ ನೆಪ: ಹೊಸತಿದ್ದರೂ ಇನ್ನೂ ಹಳೆ ಯಂತ್ರದಲ್ಲೇ ಎಕ್ಸ್‌ರೇ

10:22 AM Jul 23, 2018 | |

ಬೆಳ್ತಂಗಡಿ: ಸರಕಾರವು ಸರಕಾರಿ ಆಸ್ಪತ್ರೆಗೆ ಕೋಟ್ಯಂತರ ರೂ. ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿದೆ. ಕೆಲವು ಸಂದರ್ಭ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಜನತೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಬೆಳ್ತಂಗಡಿ ಆಸ್ಪತ್ರೆಯಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವಿದೆ.

Advertisement

ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕಳೆದ ವರ್ಷ ಅತ್ಯಾಧುನಿಕ ಕಂಪ್ಯೂಟರ್‌ ಎಕ್ಸ್‌ರೇ ಯಂತ್ರ ಬಂದಿದ್ದರೂ ಫಿಲ್ಮ್ ಶೀಟ್‌ ಇಲ್ಲ ಎಂಬ ಕಾರಣವೊಡ್ಡಿ ಆಸ್ಪತ್ರೆಯಲ್ಲಿ ಹಳೆ ಮಾದರಿಯ ಎಕ್ಸ್‌ರೇ ಯಂತ್ರದಿಂದಲೇ ರೋಗಿಗಳಿಗೆ ಎಕ್ಸ್‌ರೇ ಮಾಡಿಕೊಳ್ಳಲಾಗುತ್ತದೆ. ಆದರೆ ಇದರ ಹಿಂದೆ ಖಾಸಗಿ ಲಾಬಿ ನಡೆಯುತ್ತಿದೆ ಎಂಬ ಗಂಭೀರ ಆರೋಪವೂ ಇದೆ.

15 ಲಕ್ಷ ರೂ.ಗಳ ಯಂತ್ರ
ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಸುಮಾರು 15 ಲಕ್ಷ ರೂ. ವೆಚ್ಚದ ಕಂಪ್ಯೂಟರ್‌ ಎಕ್ಸ್‌ರೇ ಯಂತ್ರ ಬಂದಿದ್ದು, ಇದು ಖಾಸಗಿ ಆಸ್ಪತ್ರೆಯ ಯಂತ್ರಕ್ಕಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿದೆ. ಜಿಲ್ಲೆಯ ತಾ| ಆಸ್ಪತ್ರೆಗಳ ಪೈಕಿ ಬೆಳ್ತಂಗಡಿ ಆಸ್ಪತ್ರೆಗೆ ಮೊದಲ ಬಾರಿಗೆ ಈ ಯಂತ್ರ ಬಂದಿದ್ದು, ಬಳಿಕ ಪುತ್ತೂರು, ಬಂಟ್ವಾಳದ ಆಸ್ಪತ್ರೆಗಳಿಗೆ ಬಂದಿದೆ.

ಸೆಪ್ಟಂಬರ್‌ನಲ್ಲಿ ಮೆಷಿನ್‌ ಬಂದಿದ್ದರೂ ಅದು ಕಾರ್ಯಾರಂಭಗೊಂಡದ್ದು ಡಿಸೆಂಬರ್‌ನಲ್ಲಿ. ಬಳಿಕ ಫೆಬ್ರವರಿವರೆಗೆ ಕಾರ್ಯಾಚರಣೆ ನಡೆಸಿದ್ದು, ಅನಂತರ ಮೇ ತಿಂಗಳವರೆಗೆ ಎಕ್ಸ್‌ರೇಗೆ ಹಳೆಯ ಯಂತ್ರವನ್ನೇ ಬಳಸಲಾಗಿದೆ. ಮುಂದೆ ಜೂನ್‌ನಲ್ಲಿ ಹೊಸ ಯಂತ್ರ ಮತ್ತೆ ಕಾರ್ಯಾರಂಭಗೊಂಡಿದ್ದರೂ ಜುಲೈ ಬಳಿಕ ಹಳೆಯ ಯಂತ್ರವನ್ನೇ ಬಳಸಲಾಗುತ್ತಿದೆ. ಕೇಳಿದರೆ ಫಿಲ್ಮ್ ಶೀಟ್‌ ಖಾಲಿಯಾಗಿದೆ ಎಂದು ಉತ್ತರ ನೀಡುತ್ತಾರೆ ಎಂದು ರೋಗಿಗಳು ಹೇಳುತ್ತಾರೆ.

ಹೊಸ ಯಂತ್ರದ ಒಂದು ಬಾಕ್ಸ್‌ ಫಿಲ್ಮ್ ಶೀಟ್‌ಗೆ 8 ಸಾವಿರ ರೂ. ಇದ್ದು, 150 ಶೀಟ್‌ ಇರುತ್ತದೆ. ಪ್ರಸ್ತುತ ಆಸ್ಪತ್ರೆಗೆ ತಿಂಗಳಿಗೆ ಸುಮಾರು 2 ಬಾಕ್ಸ್‌ ಗಳು ಬೇಕಾಗುತ್ತವೆ. 75 ರೂ.ಗಳ ಎಕ್ಸ್‌ರೇ ಶುಲ್ಕದಲ್ಲೇ ಫಿಲ್ಮ್ ಶೀಟ್‌ ಗಳನ್ನು ತರಬಹುದಾಗಿದೆ. ಆದರೆ ಹಳೆ ಫಿಲ್ಮ್ ಶೀಟ್‌ 4 ಸಾವಿರ ರೂ.ಗೆ ಸಿಗುತ್ತದೆ ಎಂಬ ಕಾರಣಕ್ಕೆ ಪ್ರಸ್ತುತ ಅದನ್ನೇ ಬಳಸಲಾಗುತ್ತಿದೆ.

Advertisement

15 ನಿಮಿಷದಲೇ ಲಭ್ಯ 
ಹೊಸ ಯಂತ್ರ ಮೂಲಕ ಎಕ್ಸ್‌ರೇ ಮಾಡುವುದಾದರೆ 15 ನಿಮಿಷಗಳಲ್ಲೇ ಪ್ರಿಂಟ್  ಸಿಗುತ್ತಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಎಕ್ಸ್‌ರೇಗೆ ಬರೆದರೆ ಅಂದೇ ಅದನ್ನು ತೋರಿಸಿ ಔಷಧ ಪಡೆಯಬಹುದು. ಆದರೆ ಹಳೆಯ ಯಂತ್ರದಲ್ಲಿ ಪ್ರಿಂಟ್‌ಗೆ ಒಂದು ಗಂಟೆ ಕಾಯಬೇಕಾಗಿದ್ದು, ಆಗ ವೈದ್ಯರು ತೆರಳಿರುತ್ತಾರೆ. ರೋಗಿಗಳು ಮತ್ತೆ ಮರುದಿನ ಬಂದು ವೈದ್ಯರನ್ನು ಕಾಣಬೇಕಾದ ತೊಂದರೆಯೂ ಇದೆ.

ದೂರು ಬಂದಿಲ್ಲ
ಸರಕಾರಿ ಆಸ್ಪತ್ರೆಯ ಕಂಪ್ಯೂಟರ್‌ ಎಕ್ಸ್‌ರೇಗೆ ಫಿಲ್ಮ್ ಶೀಟ್‌ ಇದೆ. ಇಲ್ಲದಿದ್ದರೆ ದೂರು ಬರುತ್ತಿತ್ತು. ಹಳೆ ಯಂತ್ರ ಬಳಸುತ್ತಿರುವ ಕುರಿತು ನನಗೆ ಮಾಹಿತಿಯಿಲ್ಲ.
– ಡಾ| ರಾಮಕೃಷ್ಣ ರಾವ್‌
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next