Advertisement

ಎಕ್ಸ್‌ಪ್ರಸ್‌ ವೇ ನಿರ್ಮಾಣ: ದೇಶದಲ್ಲಿ ಕ್ರಾಂತಿಕಾರಿ ಪ್ರಗತಿ

12:45 AM Jan 09, 2022 | Team Udayavani |

ದೇಶದಲ್ಲಿ ಕಳೆದ ಐದಾರು ವರ್ಷಗಳಿಂದೀಚೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಶದ ಮೂಲೆಮೂಲೆಗೆ ರಸ್ತೆ ಸಂಪರ್ಕ ಒದಗಿಸುವ ಪ್ರಯತ್ನ ಸಮರೋಪಾದಿಯಲ್ಲಿ ನಡೆಯುತ್ತಿದ್ದರೆ ಮೆಟ್ರೋ ಮತ್ತು ಬೃಹತ್‌ ನಗರಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಸಂಚಾರ ದಟ್ಟಣೆ ಹೆಚ್ಚಿರುವ ಪ್ರಮುಖ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಕೂಡ ಬಿರುಸಿನಿಂದ ಸಾಗಿವೆ. ಹಲವು ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಈ ಪೈಕಿ ಕೆಲವು ಎಕ್ಸ್‌ಪ್ರೆಸ್‌ ವೇಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಎಕ್ಸ್‌ಪ್ರೆಸ್‌ ವೇಗಳನ್ನು ಸೀಮಿತ ಅವಧಿಯಲ್ಲಿ ಗರಿಷ್ಠ ದೂರವನ್ನು ತಲುಪುವುದು, ವಾಹನಗಳ ಸುರಕ್ಷಿತ ಚಾಲನೆ ಮತ್ತು ಸುಖಕರ ಪ್ರಯಾಣವನ್ನು ಖಾತರಿಪಡಿಸುವ ಜತೆಯಲ್ಲಿ ಇವುಗಳನ್ನು ರಕ್ಷಣ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಗುರಿಯೊಂದಿಗೆ ನಿರ್ಮಿಸಲಾಗುತ್ತಿದೆ. ಈ ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣ ಬಲು ವೆಚ್ಚದಾಯಕವಾದರೂ ಇವು ಸಂಚಾರಕ್ಕೆ ಮುಕ್ತಗೊಂಡ ಬಳಿಕ ಇವುಗಳಿಂದ ಗರಿಷ್ಠ ಪ್ರಮಾಣದ ಆದಾಯವನ್ನು ಸಂಗ್ರಹಿಸುವ ಇರಾದೆ ಸರಕಾರದ್ದಾಗಿದೆ. ದೇಶದಲ್ಲಿ ಈಗಾಗಲೇ ವಾಹನ ಸಂಚಾರಕ್ಕೆ ಮುಕ್ತಗೊಂಡಿರುವ ಮತ್ತು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿರುವ ಎಕ್ಸ್‌ಪ್ರೆಸ್‌ ವೇಗಳ ಸ್ಥೂಲ ಚಿತ್ರಣ ಇಲ್ಲಿದೆ.

Advertisement

ಗಂಗಾ ಎಕ್ಸ್‌ಪ್ರಸ್‌ ವೇ
ಗಂಗಾ ಎಕ್ಸ್‌ಪ್ರಸ್‌ ವೇ ಉತ್ತರ ಪ್ರದೇಶದ ಪೂರ್ವ ಪ್ರದೇಶವನ್ನು ಪಶ್ಚಿಮದೊಂದಿಗೆ ಸಂಪರ್ಕಿಸುತ್ತದೆ. 2024ರ ಡಿಸೆಂಬರ್‌ ವೇಳೆಗೆ ಇದು ಸಿದ್ಧವಾಗುವ ನಿರೀಕ್ಷೆ ಇದೆ. ಆ ವೇಳೆಗೆ ಇದು ದೇಶದ ಆರನೇ ಅತೀ ಉದ್ದದ ಎಕ್ಸ್‌ಪ್ರಸ್‌ ವೇ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. ಯಾಕೆಂದರೆ ಪ್ರಸ್ತುತ ಗಂಗಾ ಎಕ್ಸ್‌ಪ್ರಸ್‌ ವೇ ಗಿಂತಲೂ ಉದ್ದದ ಐದು ಎಕ್ಸ್‌ಪ್ರಸ್‌ ವೇ ಗಳು ನಿರ್ಮಾಣ ಹಂತದಲ್ಲಿವೆ. ಗಂಗಾ ಎಕ್ಸ್‌ಪ್ರಸ್‌ ವೇ ಯೋಜನೆಯನ್ನು 2007ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಪ್ರಾರಂಭಿಸಿದರು. 2017ರಲ್ಲಿ ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬಂದ ಬಳಿಕ ಇದರ ಕಾರ್ಯ ಪ್ರಾರಂಭವಾಯಿತು. 2021ರ ನವೆಂಬರ್‌ನಲ್ಲಿ ಪರಿಸರ ಸಚಿವಾಲಯದಿಂದ ಅನುಮತಿ ಪಡೆದು, 36,200 ಕೋ.ರೂ.ಗಳ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ.

ವಿಶೇಷತೆ
ಗಂಗಾ ಎಕ್ಸ್‌ಪ್ರೆಸ್‌ ವೇ ಉತ್ತರ ಪ್ರದೇಶದ 12 ಜಿಲ್ಲೆಗಳಾದ ಮೇರಠ, ಹಾಪುರ್‌, ಬುಲಂದ್‌ಶಹರ್‌, ಅನ್ರೋಹಾ, ಸಂಭಾಲ್, ಬದೌನ್‌, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ್‌ ಮತ್ತು ಪ್ರಯಾಗ್‌ರಾಜ್‌ ಮೂಲಕ ಹಾದುಹೋಗಲಿದ್ದು, 500ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ.
ಗಂಗಾ ಎಕ್ಸ್‌ಪ್ರಸ್‌ ವೇ ಮೇರಠ,ಜಿಲ್ಲೆಯ ಬಿಜೌಲಿ ಗ್ರಾಮದ ಎನ್‌ಎಚ್‌- 334ರಲ್ಲಿ ಪ್ರಾರಂಭವಾಗಿ ಪ್ರಯಾಗ್‌ರಾಜ್‌ ಜಿಲ್ಲೆಯ ಜುದಾಪರ್‌ ದಂಡು ಗ್ರಾಮದಲ್ಲಿನ ಎನ್‌ಎಚ್‌-19ರಲ್ಲಿ ಕೊನೆಗೊಳ್ಳುತ್ತದೆ. ಇದರ ಅಂದಾಜು ವೆಚ್ಚ 36,230 ಕೋ.ರೂ. ಆಗಿದ್ದು, ಇದರಲ್ಲಿ ಸುಮಾರು 9,500 ಕೋ.ರೂ. ಭೂಸ್ವಾಧೀನಕ್ಕೆ ವಿನಿಯೋಗವಾಗಲಿದೆ.
ಈ ಎಕ್ಸ್‌ಪ್ರಸ್‌ ವೇ 7 ಮೇಲ್ಸೇತುವೆಗಳು, 17 ಹೊರಹೋಗುವ ರಸ್ತೆಗಳು, 14 ಪ್ರಮುಖ ಸೇತುವೆಗಳು, 126 ಸಣ್ಣ ಸೇತುವೆಗಳು, 28 ಫ್ಲೈ ಓವರ್‌ಗಳು, 50 ವಾಹನ ಕೆಳಸೇತುವೆಗಳು ಮತ್ತು 946 ಮೋರಿಗಳನ್ನು ಹೊಂದಿರುತ್ತದೆ. ಗಂಗಾ ಎಕ್ಸ್‌ಪ್ರಸ್‌ ವೇ ಯೋಜನೆಗೆ ಅಗತ್ಯವಿರುವ 7,386 ಹೆಕ್ಟೇರ್‌ ಭೂಮಿಯಲ್ಲಿ ಶೇ. 94ರಷ್ಟು ಭೂಮಿಯನ್ನು 83 ಸಾವಿರ ರೈತರಿಂದ ಖರೀದಿಸಲಾಗಿದೆ. ಇದು ನಿರ್ಮಾಣಗೊಂಡರೆ ಹೊಸದಿಲ್ಲಿ ಮತ್ತು ಪ್ರಯಾಗ್‌ರಾಜ್‌ ನಡುವಿನ ಪ್ರಯಾಣದ ಅವಧಿ ಸದ್ಯದ 10- 11 ಗಂಟೆಗಳಿಂದ 6- 7 ಗಂಟೆಗಳಿಗೆ ಕಡಿಮೆಯಾಗುತ್ತದೆ. ಗಂಗಾ ಎಕ್ಸ್‌ಪ್ರಸ್‌ ವೇಯನ್ನು ಭವಿಷ್ಯದಲ್ಲಿ ಗ್ರೇಟರ್‌ ನೋಯ್ಡಾದಿಂದ ಬಲ್ಲಿಯಾವರೆಗೆ 1,047 ಕಿ.ಮೀ. ಉದ್ದ 8 ಪಥಗಳ ಹೆದ್ದಾರಿಯನ್ನಾಗಿ ವಿಸ್ತರಿಸುವ ಉದ್ದೇಶವಿದೆ.

ಎಕ್ಸ್‌ಪ್ರಸ್‌ ವೇ ಎಂದರೇನು?
ಭೂ ಸಾರಿಗೆ ವ್ಯವಸ್ಥೆಯಲ್ಲಿ ಒಂದಾದ ಎಕ್ಸ್‌ಪ್ರಸ್‌ ವೇ ಯಲ್ಲಿ ವಾಹನಗಳ ಪ್ರವೇಶ, ನಿರ್ಗಮನ ಮತ್ತು ನಿಲುಗಡೆಗೆ ಸೀಮಿತ ಅವಕಾಶಗಳಿರುತ್ತವೆ. ಎಕ್ಸ್‌ ಪ್ರಸ್‌ ವೇಯಿಂದ ಹೊರಹೋಗಲು ಅನುಕೂಲವಾಗುವಂತೆ ಅಲ್ಲಲ್ಲಿ ಛೇದಕಗಳು ಮತ್ತು ಕೆಂಪು ದೀಪಗಳನ್ನು ಅಳವಡಿಸಲಾಗಿರುತ್ತದೆ. ಟ್ರಾಫಿಕ್‌ ದಟ್ಟಣೆ ಉಂಟಾಗದಂತೆ ನಿರ್ದಿಷ್ಟ ಪ್ರದೇಶಗಳಲ್ಲಿ ಓವರ್‌ಪಾಸ್‌, ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ವಾಹನ ಚಾಲಕರು ಮನಬಂದಂತೆ ಎಕ್ಸ್‌ಪ್ರೆಸ್‌ ವೇಯನ್ನು ಪ್ರವೇಶಿಸಲು ಅಥವಾ ವೇಯಿಂದ ನಿರ್ಗಮಿಸಲು ಸಾಧ್ಯವಾಗುವುದಿಲ್ಲ. 6ರಿಂದ 14 ಲೇನ್‌ಗಳಲ್ಲಿರುವ ಎಕ್ಸ್‌ಪ್ರಸ್‌ ವೇಯಲ್ಲಿ ವಾಹನಗಳು ನಿರ್ದಿಷ್ಟವಾದ ವೇಗದಲ್ಲಿ ಸಂಚರಿಸಬಹುದಾಗಿದೆ.
ಉತ್ತರ ಪ್ರದೇಶದ ಮೇರಠ,, ಪ್ರಯಾಗ್‌ರಾಜ್‌ಗೆ ಸಂಪರ್ಕ ಕಲ್ಪಿಸುವ ಗಂಗಾ ಎಕ್ಸ್‌ಪ್ರೆಸ್‌ ವೇಗೆ ವಾರಗಳ ಹಿಂದೆಯಷ್ಟೇ ಶಹಜಹಾನ್‌ಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಂಡರೆ ಇದು ಉತ್ತರ ಪ್ರದೇಶದ ಅತೀ ಉದ್ದದ ಎಕ್ಸ್‌ಪ್ರಸ್‌ ವೇ ಆಗಲಿದೆ. 594 ಕಿ.ಮೀ. ಉದ್ದ, 6 ಪಥಗಳ ಈ ಎಕ್ಸ್‌ಪ್ರಸ್‌ ವೇ ಪೂರ್ವ ಮತ್ತು ಪಶ್ಚಿಮ ಉ. ಪ್ರದೇಶದಿಂದ ಹೊಸದಿಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಸ್ತುತ ದೇಶದ ಅತೀ ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಯನ್ನು ನವೆಂಬರ್‌ನಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. 341 ಕಿ.ಮೀ. ಉದ್ದದ ಈ ಎಕ್ಸ್‌ಪ್ರಸ್‌ ವೇ ಉ.ಪ್ರ. ದ ರಾಜಧಾನಿ ಲಕ್ನೋದಿಂದ ರಾಜ್ಯದ ಪೂರ್ವ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ವಾರಾಣಸಿ, ಗೋರಖ್‌ಪುರ, ಪ್ರಯಾಗ್‌ರಾಜ್‌ ಜಿಲ್ಲೆಗಳಿಗೂ ಅನುಕೂಲವಾಗಿದೆ.

Advertisement

ವಿಮಾನ ನಿಲುಗಡೆಗೆ ಅವಕಾಶ
ಪೂರ್ವಾಂಚಲ ಎಕ್ಸ್‌ಪ್ರಸ್‌ ವೇಯಂತೆ ಗಂಗಾ ಎಕ್ಸ್‌ಪ್ರಸ್‌ ವೇಯಲ್ಲೂ ತುರ್ತು ಸಂದರ್ಭದಲ್ಲಿ ವಾಯುಪಡೆಯ ವಿಮಾನಗಳನ್ನು ಇಳಿಸಲು ಶಹಜಹಾನ್‌ಪುರ ಬಳಿ 3.5 ಕಿ.ಮೀ. ಉದ್ದದ ಏರ್‌ ಸ್ಟ್ರಿಪ್‌ ಅನ್ನು ನಿರ್ಮಿಸಲಾಗುತ್ತದೆ. ಗಂಗಾ ಎಕ್ಸ್‌ಪ್ರಸ್‌ ವೇಯಲ್ಲಿ ವಾಯುಪಡೆಯ ಯುದ್ಧ ವಿಮಾನಗಳ ತುರ್ತು ಭೂಸ್ಪರ್ಶಕ್ಕಾಗಿ ಏರ್‌ ಸ್ಟ್ರಿಪ್‌ ಸೇರ್ಪಡೆಯೊಂದಿಗೆ ಉತ್ತರ ಪ್ರದೇಶವು ತನ್ನ ನಾಲ್ಕು ಎಕ್ಸ್‌ಪ್ರೆಸ್‌ ವೇಗಳಲ್ಲಿ ಇಂತಹ ಸೌಲಭ್ಯವನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಲಿದೆ. ಉತ್ತರ ಪ್ರದೇಶವು ಈಗಾಗಲೇ ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಮಥುರಾ ಬಳಿ ಏರ್‌ ಸ್ಟ್ರಿಪ್‌ ಅನ್ನು ಹೊಂದಿದೆ. ಅಲ್ಲದೇ ಲಕ್ನೋ- ಆಗ್ರಾ ಎಕ್ಸ್‌ಪ್ರೆಸ್‌ ವೇನ ಬಗಮೌರ್‌ ಬಳಿಯೂ ಏರ್‌ ಸ್ಟ್ರಿಪ್‌ ನಿರ್ಮಿಸಲಾಗಿದೆ.

ಉ.ಪ್ರದೇಶದ ಅತೀ ಉದ್ದದ ಎಕ್ಸ್‌ಪ್ರಸ್‌ ವೇಗಳು: ಈ ಹಿಂದೆ 302 ಕಿ.ಮೀ. ಉದ್ದದ ಆಗ್ರಾ- ಲಕ್ನೋ ಎಕ್ಸ್‌ಪ್ರಸ್‌ ವೇ ಉತ್ತರ ಪ್ರದೇಶದಲ್ಲಿನ ಅತೀ ಉದ್ದದ ಎಕ್ಸ್‌ಪ್ರಸ್‌ ವೇ ಆಗಿತ್ತು. ಈಗ ಪೂರ್ವಾಂಚಲ ಎಕ್ಸ್‌ಪ್ರಸ್‌ ವೇ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಆಗ್ರಾ- ಲಕ್ನೋ ಎಕ್ಸ್‌ಪ್ರಸ್‌ ವೇಗಿಂತ ಸುಮಾರು 39 ಕಿ.ಮೀ. ಹೆಚ್ಚು ಉದ್ದವಿದೆ. ಆದರೆ ಈ ದಾಖಲೆ ಹೆಚ್ಚು ಕಾಲ ಉಳಿಯಲಾರದು. ಯಾಕೆಂದರೆ 2024ರ ವೇಳೆಗೆ 594 ಕಿ.ಮೀ. ಉದ್ದದ ಗಂಗಾ ಎಕ್ಸ್‌ಪ್ರಸ್‌ ವೇ ಸಿದ್ಧವಾಗಲಿದೆ.

ದೇಶದ ಅತೀ ಉದ್ದದ ಎಕ್ಸ್‌ಪ್ರಸ್‌ ವೇ: ಸದ್ಯ ನಿರ್ಮಾಣ ಹಂತದಲ್ಲಿರುವ ಹೊಸದಿಲ್ಲಿ- ಮುಂಬಯಿ ಎಕ್ಸ್‌ಪ್ರಸ್‌ ವೇ, ಅಮೃತಸರ- ಜಾಮ್‌ನಗರ ಎಕ್ಸ್‌ಪ್ರಸ್‌ ವೇಗಳು ಸಿದ್ಧವಾದರೆ ಅವುಗಳ ಉದ್ದ ಸಾವಿರ ಕಿ.ಮೀ. ಗಿಂತಲೂ ಅಧಿಕವಾಗಿರಲಿದೆ. ಹೊಸದಿಲ್ಲಿ- ಮುಂಬಯಿ ಎಕ್ಸ್‌ಪ್ರಸ್‌ ವೇ ದೇಶದ ಅತೀ ಉದ್ದದ ಎಕ್ಸ್‌ಪ್ರಸ್‌ ವೇ ಆಗಲಿದೆ. ಇದರ ಉದ್ದ 1,380 ಕಿ.ಮೀ. ಇದರ ಕಾಮಗಾರಿ 2023ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಾಮಗಾರಿಗೆ ಗಡುವು- ಜನವರಿ 2023
ವಿಶೇಷತೆ- ಪ್ರಸ್ತುತ ಹೊಸದಿಲ್ಲಿಯಿಂದ ಮುಂಬಯಿ ತಲುಪಲು 24 ಗಂಟೆಗಳು ಬೇಕು. ಆದರೆ ಈ ಎಕ್ಸ್‌ಪ್ರಸ್‌ ವೇ ಮೂಲಕ ಕೇವಲ 12 ಗಂಟೆಗಳಲ್ಲಿ ಹೊಸದಿಲ್ಲಿಯಿಂದ ಮುಂಬಯಿ ತಲುಪಬಹುದು.

ಯುದ್ಧ ವಿಮಾನ ನಿಲುಗಡೆಗೆ ಅವಕಾಶ
2021ರ ನವೆಂಬರ್‌ನಲ್ಲಿ ಭಾರತೀಯ ವಾಯುಪಡೆಯು ಯುದ್ಧ ವಿಮಾನ ಸುಖೋಯ್‌- 30 ಲ್ಯಾಂಡಿಂಗ್‌ ಮತ್ತು ಟೇಕ್‌ ಆಫ್ ಅನ್ನು ಪೂರ್ವಾಂಚಲ್‌ ಎಕ್ಸ್‌ಪ್ರಸ್‌ ವೇ ಯ ಏರ್‌ ಸ್ಟ್ರಿಪ್‌ನಲ್ಲಿ ಪರೀಕ್ಷಿಸಿತ್ತು. ಅದಕ್ಕೂ ಮೊದಲು 2015ರಲ್ಲಿ ಮಿರಾಜ್‌- 2000ದ ಲ್ಯಾಂಡಿಂಗ್‌ ಮತ್ತು ಟೇಕ್‌ಆಫ್ ಯಮುನಾ ಎಕ್ಸ್‌ಪ್ರಸ್‌ ವೇ ಯ ಏರ್‌ ಸ್ಟ್ರಿಪ್‌ನಲ್ಲಿ ಆಗಿತ್ತು. ಅಲ್ಲದೇ ಸುಖೋಯ್‌- 30 ಮತ್ತು ಮಿರಾಜ್‌- 2000 ಯುದ್ಧ ವಿಮಾನಗಳು ಲಕ್ನೋ- ಆಗ್ರಾ ಎಕ್ಸ್‌ಪ್ರೆಸ್‌ ವೇನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್‌ ಮತ್ತು ಟೇಕ್‌-ಆಫ್ ಮಾಡಿವೆ.

ಭಾರತೀಯ ಸೇನೆಗೆ ಏನು ಪ್ರಯೋಜನ?
ಉತ್ತರ ಪ್ರದೇಶದ ಎಕ್ಸ್‌ಪ್ರಸ್‌ ವೇ ಯಲ್ಲಿ ವಾಯು ಪಡೆಯ ವಿಮಾನಗಳ ತುರ್ತು ಭೂಸ್ಪರ್ಶಕ್ಕಾಗಿ ನಿರ್ಮಿಸಲಿರುವ ಏರ್‌ ಸ್ಟ್ರಿಪ್‌ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇದರಿಂದ ಆಗ್ರಾ ಮತ್ತು ಹಿಂಡನ್‌ ವಾಯುನೆಲೆ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಚೀನ ಮತ್ತು ಪಾಕಿಸ್ಥಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್‌ ಮಾಡಲು ಈ ಏರ್‌ಸ್ಟ್ರಿಪ್‌ಗಳು ಪ್ರಮುಖ ಉಡಾವಣ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ.

ಎಕ್ಸ್‌ಪ್ರಸ್‌ ವೇನಲ್ಲಿ ಏರ್‌ ಸ್ಟ್ರಿಪ್‌ ನಿರ್ಮಿಸುವುದು ಭಾರತೀಯ ವಾಯುಪಡೆಯ ಕಾರ್ಯತಂತ್ರದ ಭಾಗವಾಗಿದೆ. ಮಿರಾಜ್‌- 2000 ದಂತಹ ಯುದ್ಧ ವಿಮಾನಗಳು ಮತ್ತು ಸಿ-130ಜೆ ಹಕ್ಯುಲಸ್‌ನಂತಹ ವಿಮಾನಗಳನ್ನು ಇಳಿಸಲು ರಸ್ತೆಗಳಲ್ಲೇ ವಿಶೇಷ ವಿನ್ಯಾಸ ಮಾಡಲಾಗುತ್ತದೆ.

1965 ಮತ್ತು 1971ರ ಯುದ್ಧದ ವೇಳೆ ಪಾಕಿಸ್ಥಾನಿ ವಾಯುಪಡೆಯ ವಿಮಾನಗಳು ಭಾರತೀಯ ವಾಯು ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದ್ದರಿಂದ ಭಾರತೀಯ ವಾಯುಪಡೆ ಬಹಳಷ್ಟು ತೊಂದರೆ ಎದುರಿಸಬೇಕಾಯಿತು. ಹೀಗಾಗಿಯೇ ಭಾರತೀಯ ವಾಯುಪಡೆಯು ಎಕ್ಸ್‌ಪ್ರಸ್‌ ವೇಗಳ ಈ ಏರ್‌ಸ್ಟ್ರಿಪ್‌ಗಳನ್ನು ತುರ್ತು ಲ್ಯಾಂಡಿಂಗ್‌ ಮತ್ತು ಟೇಕ್‌-ಆಫ್, ಮೊಬೈಲ್‌ ಏರ್‌ ಟ್ರಾಫಿಕ್‌ ಸಂವಹನ, ಇಂಧನ ತುಂಬುವಿಕೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯಲು ಬಳಸಲು ನಿರ್ಧರಿಸಿದೆ.

ಎಕ್ಸ್‌ಪ್ರಸ್‌ ವೇ ಗಳ ರಾಜಧಾನಿ ಯುಪಿ
ಎಕ್ಸ್‌ಪ್ರಸ್‌ ವೇ- ಹಾದುಹೋಗಲಿರುವ ಉತ್ತರ ಪ್ರದೇಶದ ಪ್ರಮುಖ ಸ್ಥಳಗಳು
-ಗಂಗಾ ಎಕ್ಸ್‌ಪ್ರಸ್‌ ವೇ- ಮೇರಠ, ಬದಾಯುಂ, ಹರ್ದೋಯಿ, ಉನ್ನಾವ್‌, ಶಹಾಜಹನ್‌ ಪುರ್‌, ರಾಯಿ ಬರೇಲಿ, ಪ್ರಯಾಗ್‌ರಾಜ್‌, ವಾರಾಣಸಿ, ಬಲಿಯಾ
-ಪೂರ್ವಾಂಚಲ್‌ ಎಕ್ಸ್‌ಪ್ರಸ್‌ ವೇ – ಲಕ್ನೋ, ಬಾರಾಬಂಕಿ, ಅಯೋಧ್ಯೆ, ಅಂಬೇಡ್ಕರ್‌ ನಗರ, ಅಮೇಠಿ, ಸುಲ್ತಾನ್‌ಪುರ, ಆಜಂಗಢ, ಮಾವ್‌, ಘಾಜೀಪುರ್‌
-ಬುಂದೇಲ್‌ಖಂಡ್‌ ಎಕ್ಸ್‌ಪ್ರಸ್‌ ವೇ- ಇಟಾವಾ, ಜಲೌನ್‌, ಹಮೀರ್‌ಪುರ್‌, ಬಂದ್‌ ಚಿತ್ರಕೂಟ್‌
-ಯಮುನಾ ಎಕ್ಸ್‌ಪ್ರಸ್‌ ವೇ- ನೋಯ್ಡಾ, ಆಗ್ರಾ
-ಗೋರಖ್‌ಪುರ್‌ ಲಿಂಕ್‌ ಎಕ್ಸ್‌ಪ್ರಸ್‌ ವೇ- ಅಜಂಗಢ, ಗೋರಖ್‌ಪುರ
-ಆಗ್ರಾ- ಲಕ್ನೋ ಎಕ್ಸ್‌ಪ್ರೇಸ್‌ ವೇ- ಆಗ್ರಾ- ಇಟಾವ್‌, ಲಕ್ನೋ

-ವಿದ್ಯಾ ಇರ್ವತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next