Advertisement

ಮುಗ್ಧತೆಯೊಂದಿಗೆ ಅಭಿವ್ಯಕ್ತಿಯ ಸರಸ

03:21 PM Dec 15, 2017 | |

ಕಲಾತ್ಮಕ ಅಭಿವ್ಯಕ್ತಿ ಮಾನವ ಸಹಜ ಗುಣ. ಅಭಿವ್ಯಕ್ತಪಡಿಸಬೇಕೆನ್ನುವ ಸಹಜ ಹಂಬಲದಿಂದ ಹುಟ್ಟುವ ಯಾವುದೇ ಪ್ರಕಾರದ, ಮಾಧ್ಯಮದ ಅಭಿವ್ಯಕ್ತಿಯು ಕಲೆ ಎಂದು ಕರೆಸಿಕೊಳ್ಳುತ್ತದೆ. “”ನಾನು ಮಕ್ಕಳಂತೆ ಅಭಿವ್ಯಕ್ತಿಪಡಿಸ ಬಯಸುವೆ” ಎಂಬುದನ್ನು ಪದೇ ಪದೇ ಉಲ್ಲೇಖೀಸುತ್ತಿದ್ದ ಖ್ಯಾತ ಕಲಾವಿದ ಪಿಕಾಸೋ ಕೃತಿಗಳಲ್ಲಿ ಮುಗ್ಧತೆಯ ಭಾವ ಮತ್ತು ಹೊಸತನದ, ಹೊಸತೆರದ ತುಡಿತ ಯಾವತ್ತೂ ಕಾಣು ತ್ತಲಿತ್ತು. ಇಂತಹುದನ್ನೇ ಧ್ವನಿಸುವ ಕಲಾಕೃತಿಗಳ ಪ್ರದರ್ಶನ ಇತ್ತೀಚೆಗಷ್ಟೇ ಮಣಿಪಾಲದ ಹೋಟೆಲ್‌ ವ್ಯಾಲಿವ್ಯೂನ ಕಲಾ ಪ್ರದರ್ಶನಾಂಗಣದಲ್ಲಿ ನಡೆಯಿತು. ಬೆಳೆವ ಪರಿಸರದ ಪ್ರಭಾವ ಪ್ರಯೋಗಶೀಲ ಕೃತಿಯಲ್ಲೂ ಹೇಗೆ ಮೂಡಲು ಸಾಧ್ಯ ವೆಂಬುದಕ್ಕೆ ಎಳೆಯ ಕಲಾವಿದರಾದ ಹರ್ಷಿತಾ, ನಮ್ರತಾ, ಅವನೀಕೃಷ್ಣರ ಮುಗ್ಧ ಭಾವಾಭಿ ವ್ಯಕ್ತಿಗಳು ಹೋಟೆಲ್‌ ವ್ಯಾಲಿವ್ಯೂ ಫಾರ್ಚ್ಯೂನ್‌ ಇನ್‌ನ “ಛಾಯಾ’ ಗ್ಯಾಲರಿಯಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭ ದಲ್ಲಿ ಪ್ರದರ್ಶನ ಕಂಡು ನಿದರ್ಶನವಾದವು.

Advertisement

ಸಮಕಾಲೀನ ಕಲಾವಿದರ ಕಲಾಕೃತಿಗಳ ಪ್ರಸ್ತುತಿಯೂ ಸ್ವತ್ಛಂದ ಅಭಿವ್ಯಕ್ತಿಯನ್ನು ಬಯಸುತ್ತದೆ. ಕಲಾಕೃತಿಗಳ ನಿರ್ಮಾಣದ ಪ್ರಕ್ರಿಯೆಯಿಂದ ಉಂಟಾದ ಅನುಭವಗಳು ಮತ್ತು ಬಣ್ಣಗಳೊಂದಿಗಿನ ಚೆಲ್ಲಾಟ ಒಂದು ತೆರನಾದ ಅಭಿವ್ಯಕ್ತಿಯಾದರೆ ತನ್ನದೇ ಕಥೆಗಳ, ಜೀವನಾನುಭವಗಳ ಒಟ್ಟಾರೆ ಸಂಯೋಜನೆ ಇನ್ನೊಂದು ತೆರನಾದ ಅಭಿವ್ಯಕ್ತಿ. ಅದು ಒಟ್ಟಂದದ ದೃಶ್ಯಾತ್ಮಕ ನಿರೂಪಣೆ. ಈ ಬಗೆಯ ತನ್ನದೇ ಕಥೆಗಳನ್ನು, ಮುಗ್ಧತೆಯ ಅನುಭವಗಳನ್ನು ದೃಶ್ಯ ಪರಿಧಿಯೊಳಗೆ ಅಭಿವ್ಯಕ್ತಪಡಿಸಿದುದರ ಸಂಯೋಜನೆಗಳೇ ಈ ಪ್ರದರ್ಶನದಲ್ಲಿದ್ದುವು.

ಕಲಾವಿದ ಪುರುಷೋತ್ತಮ ಅಡ್ವೆಯವರು ಪಾರಂಪರಿಕ ಕಲಾ ಸಂಗ್ರಹಗಾರರು ಮತ್ತು ಸಮಕಾಲೀನ ಕಲಾವಿದರು. ಜಯವಂತ್‌ ಮಣಿಪಾಲ ಬಿಡುವಿದ್ದಾಗಲೆಲ್ಲ ನಿತ್ಯವೂ ಮನೆಯಲ್ಲಿ ಕಲಾಕೃತಿಗಳನ್ನು ರಚಿಸುವವರು. ವಿವಿಧ ಮಾಧ್ಯಮಗಳು ಮಕ್ಕಳಿಗೆ ಹೊಸತೇನಲ್ಲ. ಆದರೆ ತಮ್ಮದೇ ಅನುಭವಗಳು, ಕಥೆಗಳು ಸಂಯೋಜನೆಯ ರೂಪುಗೊಳ್ಳುವಲ್ಲಿ ಸಾಮಾನ್ಯವಾಗಿ ಬೇರೆ ಕಲಾಕೃತಿಗಳು ಪ್ರಭಾವ ಬೀರುವುದು ಸಾಮಾನ್ಯ. ಅಡ್ವೆಯವರ ಪುತ್ರ ಅವನೀಕೃಷ್ಣರ ಕಲಾಕೃತಿಗಳಲ್ಲಿ ಬಣ್ಣಗಳ ನಿಯಮಿತ ಬಳಕೆ, ರೇಖೆಗಳಲ್ಲಿ ಬಿರುಸುತನ ಸಂಯೋಜನಾ ಅವಕಾಶದ ಬಳಕೆ ಮಧುಬನಿ ಕಲಾಕೃತಿಗಳ ಸಂಯೋಜನೆಯನ್ನು ನೆನಪಿಸಿತಲ್ಲದೆ, ತನ್ನದೇ ವಿಶೇಷ ಶೈಲಿಯನ್ನು ಒಗ್ಗಿಸಿಕೊಂಡಂತಿತ್ತು. ತನ್ನ ಕಥಾನಕಗಳನ್ನು ಹೇಳುವಲ್ಲಿ ಸಣ್ಣ ಪುಟ್ಟ ರೇಖೆಗಳೂ ಆಕಾರಗಳಾಗಿ ಹೇಗೆ ಮಹತ್ವವನ್ನು ಪಡೆಯುತ್ತವೆ ಎಂಬುದನ್ನು ಕಾಣಬಹುದಿತ್ತು.

ಕಲಾವಿದೆಯರಾದ ನಮ್ರತಾ ಮತ್ತು ಹರ್ಷಿತಾ, ಜಯವಂತ್‌ ಅವರ ಪುತ್ರಿಯರು. ಅವರ ಕಲಾಕೃತಿಗಳು ನೇರ ಅಭಿವ್ಯಕ್ತಿ ಮತ್ತು ರೇಖೆಗಳಲ್ಲಿ ಪಕ್ವತೆ ಸಾಧಿಸಿತ್ತಲ್ಲದೆ, ಶೈಲಿಯಲ್ಲಿ ಕೆಲವು ಕಲಾಕೃತಿಗಳು ಜಯವಂತರ ಕಲಾಕೃತಿಗಳ ಪ್ರಭಾವವಿತ್ತು. ತನ್ನ ಕಥೆಗೆ ತಕ್ಕುದಾದ ರೂಪು ಸೃಷ್ಟಿಸುವಲ್ಲಿ ನಮ್ರತಾಳ ಕಲಾಕೃತಿಗಳು ಅತೀ ಪಕ್ವವಾಗಿ ಕಾಣಿಸುತ್ತಿದ್ದವು. ಹಳ್ಳಿಗಾಡಿನ ಹುಡುಗಿ, ಜಾತ್ರೆ ಮತ್ತು ರಾವಣದಹನ, ಬೆಕ್ಕು ಮತ್ತು ಮೀನು ಕಲಾಕೃತಿಗಳಲ್ಲಿ ಅವಕಾಶಗಳ ಬಳಕೆ ಮತ್ತು ಕಲಾಕೃತಿಯಲ್ಲಿ ಸೃಜನಶೀಲತೆ ಬಹು ಮನೋಜ್ಞವಾಗಿತ್ತು. ಹರ್ಷಿತಾಳ ಕಲಾಕೃತಿಗಳು ಜನಸಂದಣಿಯಿಂದ ಕೂಡಿದ ಮತ್ತು ಹಿನ್ನೆಲೆಯಲ್ಲಿನ ಪಾತಳಿ ವರ್ಣ ಬಳಕೆ ಯಲ್ಲಿ ಸೃಜಿಸುವ ದೃಶ್ಯಾತ್ಮಕ ಮೈವಳಿಕೆಗಳು ಸುಂದರವಾಗಿದ್ದವು. ನಮ್ರತಾ ಮತ್ತು ಹರ್ಷಿತಾರ ಜನಪದೀಯ ಅಂಶಗಳ ಗ್ರಹಣ ಮನೋಭಾವ ಕಲಾಕೃತಿಗಳಲ್ಲಿ ಕಾಣುತ್ತಿತ್ತು.

Advertisement

ಅವನೀಕೃಷ್ಣ, ನಮ್ರತಾ ಮತ್ತು ಹರ್ಷಿತಾರ ಕಲಾಕೃತಿಗಳಲ್ಲಿ ಗುರುತಿಸಬಹುದಾದ ಇನ್ನೊಂದು ಬಹುಮುಖ್ಯ ಅಂಶವೆಂದರೆ ಮನೆಯ ಸುತ್ತಲಿನ -ಉಡುಪಿ ಪರಿಸರದ ಕಥಾ ಹಂದರಗಳನ್ನು ಒಳಗೊಂಡಿದ್ದುದು. 

ಇಂದಿಗೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕಲೆ ಹೇಗೆ ಸಹಕಾರಿಯೆಂಬುದನ್ನು ಸ್ವಲ್ಪ ಮಟ್ಟಿಗಾದರೂ ಪೋಷಕರೆನಿಸಿಕೊಂಡವರು ಅರಿತಿದ್ದಾರೆ. ಆದರೆ ಅದಕ್ಕೊಂದು ವೇದಿಕೆ ನಿರ್ಮಾಣ ಮಾಡುವಲ್ಲಿ ಹಲವಾರು ತೊಡಕುಗಳಿವೆ. ಕಲೆಯೂ ಒಂದು ಅಭಿವ್ಯಕ್ತಿಯ ಮಾಧ್ಯಮ ಮತ್ತು ಮಗು ತನ್ನ ವಿಚಾರಗಳನ್ನು ಇದರ ಮುಖೇನ ಹೇಳುವ ಪ್ರಯತ್ನವನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಅದಕ್ಕೆ ತಕ್ಕುದಾದ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪುರುಷೋತ್ತಮ ಅಡ್ವೆ ಮತ್ತು ಜಯವಂತ್‌ ಮಣಿಪಾಲ ನಿಜಕ್ಕೂ ಆದರ್ಶರು. ಇದಕ್ಕೆ ವೇದಿಕೆ ನಿರ್ಮಾಣ ಮಾಡಿಕೊಟ್ಟ “ಪ್ರಾಚಿ’ ಫೌಂಡೇಶನ್‌ ಹಾಗೂ ಮಣಿಪಾಲದ ಹೋಟೆಲ್‌ ಫಾಚೂನ್‌ ಇನ್‌ನ “ಛಾಯಾ ಗ್ಯಾಲರಿ’ ಅಭಿನಂದನಾರ್ಹರು.

ಜನಾರ್ದನ ಹಾವಂಜೆ

Advertisement

Udayavani is now on Telegram. Click here to join our channel and stay updated with the latest news.

Next