Advertisement

14 ದಿನದಲ್ಲಿ 325 ಟನ್‌ ಗುಲಾಬಿ ರಫ್ತು

01:43 PM Feb 15, 2018 | |

ಬೆಂಗಳೂರು: ಕೇವಲ 14 ದಿನಗಳ ಅಂತರದಲ್ಲಿ ನಗರದಿಂದ 325 ಟನ್‌ ಗುಲಾಬಿ ಹೂವುಗಳು 25 ದೇಶಗಳಿಗೆ ರಫ್ತು ಆಗಿವೆ! ಇದು ಪ್ರೇಮಿಗಳ ದಿನಾಚರಣೆ ಎಫೆಕ್ಟ್.

Advertisement

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೇ ಪ್ರೇಮದ ನಿವೇದನೆಗೆ ಬಹುತೇಕರು ಈಗಲೂ “ಪ್ರೇಮದ ಸಂಕೇತ’ ಗುಲಾಬಿ ಹೂವುಗಳನ್ನು ಅವಲಂಬಿಸಿದ್ದಾರೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಸ್ವತಃ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ.

ಪ್ರೇಮಿಗಳ ದಿನಾಚರಣೆ ಅಂಗವಾಗಿ ಗುಲಾಬಿ ಹೂವುಗಳಿಗೆ ಹಿಂದೆಂದಿಗಿಂತ ಬೇಡಿಕೆ ಬಂದಿದ್ದು, ಫೆ.1ರಿಂದ 14ರವರೆಗೆ 325 ಟನ್‌ ಗುಲಾಬಿಗಳನ್ನು 5.2 ಮಿಲಿಯನ್‌ ಸ್ಟೆಮ್‌ಗಳ ರೂಪದಲ್ಲಿ 25 ದೇಶಗಳಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದಿಂದ ರಫ್ತು ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 293 ಟನ್‌ಗಳಷ್ಟು ಹೂವುಗಳ ರಫ್ತು ಆಗಿತ್ತು.

ಮಲೇಷಿಯಾ, ಕುವೈತ್‌, ಸಿಂಗಾಪುರ, ಜಪಾನ್‌, ಅಮೆರಿಕ ಸೇರಿದಂತೆ 25 ದೇಶಗಳಲ್ಲಿ 36 ತಾಣಗಳಿಗೆ ಹೂವುಗಳನ್ನು ರಫ್ತು ಮಾಡಲಾಗಿದ್ದು, ಈ ಸರಕು ಸಾಗಣೆಗಾಗಿಯೇ ಏಳು ವಿಮಾನಗಳ ಮಾರ್ಗಗಳನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದಲ್ಲಿ ಗುಲಾಬಿ ಹೂವುಗಳನ್ನು ಬೆಳೆಯವುದು ಮಾತ್ರವಲ್ಲ; ಸಾಗಣೆಗೆ ಬೆಂಗಳೂರು ವಿಮಾನ ನಿಲ್ದಾಣ ಪ್ರಮುಖ ತಾಣವಾಗಿ ಅಭಿವೃದ್ಧಿ ಹೊಂದಿರುವುದು ಕೂಡ ಪ್ರಮುಖ ಕಾರಣವಾಗಿದೆ. ರಫ್ತಾದ ವಸ್ತುಗಳಲ್ಲಿ ರೋಸ್‌ ಸ್ಟೆಮ್‌ ಕೂಡ ಸೇರಿದೆ. ಕಳೆದ ಎರಡು-ಮೂರು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚು ಗುಲಾಬಿ ಹೂವುಗಳ ರಫ್ತು ಆಗಿದೆ ಎಂದೂ ಅವರು ಹೇಳಿದ್ದಾರೆ.

ವೇದಿಕೆಯಾದ ಉದ್ಯಾನಗಳು: ಈ ಮಧ್ಯೆ ನಗರದಲ್ಲಿ ಯುವಕ-ಯುವತಿಯರ ಪ್ರೇಮ ನಿವೇದನೆಗೆ ಪ್ರಮುಖ ಉದ್ಯಾನಗಳು, ನಂದಿಬೆಟ್ಟ, ಕಾಫಿ ಡೇ, ಕೆಲ ಕಾಲೇಜುಗಳು, ಮ್ಯಾಕ್‌ಡೊನಾಲ್ಡ್‌, ಚಿತ್ರಮಂದಿರಗಳು, ಮೊಬೈಲ್‌ಗ‌ಳು ವೇದಿಕೆಯಾಗಿದ್ದವು.

Advertisement

ಸಾಮಾನ್ಯವಾಗಿ ಉದ್ಯಾನಗಳಲ್ಲಿ ಹಿರಿಯಜೀವಗಳು ಕಾಣಿಸಿಕೊಳ್ಳುತ್ತವೆ. ಆದರೆ, ಬುಧವಾರ ಪ್ರೇಮಿಗಳಿಂದ ತುಂಬಿತುಳುಕುತ್ತಿತ್ತು. ಕಾಲೇಜುಗಳಿಗೆ ಬಂಕ್‌ ಹಾಕುವವರು ಏಕಾಏಕಿ ಪ್ರತ್ಯಕ್ಷರಾದರು. 

ಮಾರುಕಟ್ಟೆಗಳಲ್ಲಿ ಶಾಪಿಂಗ್‌ ಭರಾಟೆ ಜೋರಾಗಿತ್ತು. ಪ್ರಿಯತಮ-ಪ್ರೇಯಸಿಯ ಇಷ್ಟಗಳಿಗೆ ಕೇಕ್‌, ಐಸ್‌ಕ್ರೀಂ, ಮೊಬೈಲ್‌, ಟಿ-ಶರ್ಟ್‌ಗಳು, ಪ್ರೀತಿಯ ಗುರುತಿನ ಚಾಕೋಲೇಟ್‌ಗಳು ಹೀಗೆ ಪ್ರೀತಿಯ ಸಂಕೇತಗಳಿರುವ ಹತ್ತಾರು ಉಡುಗೊರೆಗಳನ್ನು ನೀಡಿ, ಪ್ರೇಮಿಯ ಮೆಚ್ಚುಗೆ ಗಿಟ್ಟಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಕಂಡುಬಂತು. ಅದರಲ್ಲೂ ನಗರದ “ಹಾಟ್‌ ಸ್ಪಾಟ್‌’ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲೇ ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಉಡುಗೊರೆ ಖರೀದಿ ಜೋರಾಗಿತ್ತು. 

ಟಗರು-ಕುರಿಗೆ ಮದುವೆ!
ಈ ಮಧ್ಯೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಕುರಿ ಮತ್ತು ಟಗರಿಗೆ ಮದುವೆ ಮಾಡಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ ಆಚರಿಸಿದರು. ಟಗರು ಮತ್ತು ಕುರಿಗೆ ಶಾಸ್ತ್ರೋಕ್ತವಾಗಿ ಸೀರೆ ತೊಡಿಸಿ, ಹೂವಿನ ಹಾರ ಹಾಕಿ ಮದುವೆ ಮಾಡಿದರು. ನಂತರ ಆ ಜೋಡಿಯನ್ನು ಎಂ.ಜಿ. ರಸ್ತೆ ಮತ್ತು ಬ್ರಿಗೇಡ್‌ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next