ಮಂಗಳೂರು: ಕೇಂದ್ರ ಸರಕಾರ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆದ ಕಾರಣದಿಂದ ದರ ಮೇಲ್ಮುಖವಾಗಿ ಸಾಗ ತೊಡಗಿದೆ. ಇದರೊಂದಿಗೆ ನೀರುಳ್ಳಿ ಬೆಳೆಯುವ ಮಹಾರಾಷ್ಟ್ರ ಭಾಗಗಳಲ್ಲಿ ಮಳೆ ಬಂದಿರುವುದು ಕೂಡ ದರ ಏರಿಕೆಗೆ ಕಾರಣ.
10 ದಿನಗಳ ಹಿಂದೆ 14-15 ರೂ. (ಕಿಲೋಗೆ) ಮಾರಾಟ ವಾಗುತ್ತಿದ್ದ ಈರುಳ್ಳಿ ಈಗ ರಖಂ ಮಾರು ಕಟ್ಟೆಯಲ್ಲಿ 22ರಿಂದ 25 ರೂ.ಗೆ ಮಾರಾಟ ವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 30ರಿಂದ 35 ರೂ. ದರವಿದೆ.
ಹಾಪ್‌ಕಾಮ್ಸ್ ಅಧಿಕಾರಿಗಳ ಪ್ರಕಾರ 10 ದಿನಗಳ ಹಿಂದೆ 15 ರೂ. ಆಸುಪಾಸಿನಲ್ಲಿದ್ದ ದರ ಕಳೆದ ವಾರ 25 ರೂ. ವರೆಗೂ ಹೋಗಿದೆ. ಮತ್ತೆ ತುಸು ಇಳಿಕೆಯಾಗಿದ್ದು 21-22 ರೂ.ನಲ್ಲಿ ಪ್ರಸ್ತುತ ಮಾರಾಟವಾಗುತ್ತಿದೆ.
ಈರುಳ್ಳಿ ರಖಂ ವ್ಯಾಪಾರಸ್ಥರು ಹೇಳುವಂತೆ 10 ದಿನದ ಹಿಂದೆಯೇ ನೀರುಳ್ಳಿ ರಫ್ತು ನಿಷೇಧ ರದ್ದಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಆಗ ದರ ಏರಿಕೆ ಪ್ರಾರಂಭಗೊಂಡಿದೆ. ಮತ್ತೆ ಕೆಲ ದಿನಗಳ ಹಿಂದೆ ದರ ಇಳಿಕೆಯಾಗಿದೆ. ಈಗ ಮತ್ತೆ ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ಭಾಗಗಳಲ್ಲಿ ಮಳೆಯಾಗಿರುವುದರಿಂದಲೂ ದರ ಏರಿಕೆಯಾಗಿದೆ.
ಹೀಗೆ ಪದೇಪದೆ ದರ ಏರಿಳಿತವಾಗಿರುವುದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕೇಂದ್ರ ಸರಕಾರ ನೀರುಳ್ಳಿಗೆ ರಫ್ತು ಬಾಗಿಲು ತೆರೆದಿರುವ ಕಾರಣ ರೈತರು ತಮ್ಮ ಬೆಳೆಗೆ ಹೆಚ್ಚಿನ ದರ ಬೇಡಿಕೆ ಇಡುತ್ತಿದ್ದಾರೆ. ಅನೇಕರು ಶೇಖರಿಸಿಡುವ ತಂತ್ರಕ್ಕೆ ಮೊರೆಹೋಗಿದ್ದು ಹೆಚ್ಚುವರಿ ಬೆಳೆಯನ್ನಷ್ಟೇ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ದರ ಇನ್ನಷ್ಟು ಮೇಲೆ ಹೋಗುವ ಸಾಧ್ಯತೆ ಇದೆ ಎನ್ನುವ ಸಾಧ್ಯತೆಯನ್ನೂ ನಿರೀಕ್ಷೆ ಮಾಡಲಾಗುತ್ತಿದೆ.