ರಾಮನಗರ: ನಗರದ ಟಿಪ್ಪು ನಗರದಲ್ಲಿ ಪತ್ತೆಯಾದ ಎರಡು ಸುಧಾರಿತ ಸ್ಫೋಟಕಗಳ ಪ್ರಕರಣ ಜಿಲ್ಲಾ ಕೇಂದ್ರದ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಟಿಪ್ಪು ನಗರದ ನಿವಾಸಿಗಳು ಆತಂಕದಿಂದ ಹೊರ ಬಂದಿಲ್ಲ.
ಸ್ಫೋಟಕಗಳು ಪತ್ತೆಯಾದ ಸ್ಥಳದ ಬಳಿಯಲ್ಲೇ ಇರುವ ಖಾಸಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ತೀರಾ ವಿರಳವಾಗಿರುವುದು ಇದಕ್ಕೆ ಸಾಕ್ಷಿ. ಶಾಲೆ ನಡೆಯುತ್ತಿದೆ ಎಂದು ಶಿಕ್ಷಕರು ಪೋಷಕರಿಗೆ ತಿಳಿಸಿದರು, ಆತಂಕದಲ್ಲಿ ರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯ ತೋರಲಿಲ್ಲ. ಎನ್‌ಐಎ ಅಧಿಕಾರಿಗಳು ಸ್ಫೋಟಕಗಳ ಪತ್ತೆಗೆ ಮುನ್ನ ಸದರಿ ಶಾಲೆಯ ತರಗತಿಗಳನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರು. ತದ ನಂತರ ಈ ಭಾಗದಲ್ಲಿ ವಿಭಿನ್ನವಾದ ವದಂತಿಗಳು ನಗರದಲ್ಲಿ ಹರಡಿದ್ದವು. ಇವು ಪೋಷಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಫೋಟಕಗಳು ಪತ್ತೆಯಾದ ರಸ್ತೆಯಲ್ಲಿ ಜನ ಸಂಚಾರವೂ ಎಂದಿನಂತೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಗರವಾಸಿಗಳಲ್ಲಿ ಹೆಚ್ಚಿದೆ ಆತಂಕ: ದೊಡ್ಡಬಳ್ಳಾಪುರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರ ಹಬೀಬುರ್ ಕೊಟ್ಟ ಸುಳಿವಿನ ಮೇರೆಗೆ ರಾಷ್ಟ್ರೀಯ ತನಿಖಾ ದಳ ರಾಮನಗರದ ಟಿಪ್ಪುನಗರದ ಸೀರಹಳ್ಳದ ಸೇತುವೆ ಬಳಿ ಎರಡು ಸುಧಾರಿತ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕಳೆದ ವರ್ಷವಷ್ಟೇ ಶಂಕಿತ ಉಗ್ರನೊಬ್ಬ ಇಲ್ಲಿ ಪತ್ತೆಯಾಗಿದ್ದ ಪ್ರಕರಣ ಇನ್ನು ಜನಮಾನಸದಲ್ಲಿ ಮಾಸುವ ಮುನ್ನವೇ ಸ್ಫೋಟಕಗಳು ಪತ್ತೆಯಾಗಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಇಡೀ ನಗರದಲ್ಲಿ ಇದೇ ಚರ್ಚೆಯ ವಸ್ತುವಾಗಿದೆ.
ಬಾಡಿಗೆ ಸಹವಾಸವೇ ಬೇಡ ಎನ್ನುತ್ತಿರುವ ಮಾಲೀಕರು: ಸೀರಳ್ಳ, ಟಿಪ್ಪು ನಗರ ಮತ್ತು ಸುತ್ತಮು ತ್ತಲ ಸ್ಥಳಗಳಲ್ಲಿ ವಾಸಿಸುವ ನಾಗರಿಕರು ಹೊಸಬರನ್ನು ಅನುಮಾನದಿಂದಲೇ ನೋಡುವಂತಾಗಿದೆ. ಕೆಲವು ಮನೆ ಮತ್ತು ಅಂಗಡಿ ಮಳಿಗೆಯ ಮಾಲೀಕರು ಬಾಡಿಗೆ ಸಹವಾಸವೇ ಸಾಕೆನಿಸಿದೆ ಎಂದಿದ್ದಾರೆ. ಗುರುತಿಸಿಕೊಳ್ಳಲು ಇಚ್ಛಿಸದ ವ್ಯಕ್ತಿಯೊಬ್ಬರು, ಈ ಭಾಗದಲ್ಲಿ ಇನ್ನು ಮುಂದೆ ಆಧಾರ್ ಕಾರ್ಡಿನಲ್ಲಿ ಕರ್ನಾಟಕದ ವಿಳಾಸವಿದ್ದರೆ ಮಾತ್ರ ಬಾಡಿಗೆಗೆ ಕೊಡುವ ಬಗ್ಗೆ ಚಿಂತನೆ ನಡೆಸಿರುವ ಬಗ್ಗೆ ತಿಳಿಸಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್