ಜಮ್ಮು: ಪುಲ್ವಾಮ ಜಿಲ್ಲೆಯಲ್ಲಿ ಶಾಲೆಯೊಂದರ ಆವರಣದಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ಕಾರಣದಿಂದ 12 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ತರಗತಿಗಳು ನಡೆಯುತ್ತಿದ್ದ ಕಾರಣ ವಿದ್ಯಾರ್ಥಿಗಳೆಲ್ಲಾ ತರಗತಿಯ ಒಳಗಿದ್ದರು ಎನ್ನಲಾಗಿದೆ. ಸ್ಪೋಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ನರ್ಬಾಲ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರ ತರಗತಿ ಕೊಠಡಿಯೊಳಗೆ ಈ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
‘ನಾನು ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಪೋಟದ ಸದ್ದು ಕೇಳಿಸಿತು. ಆದರೆ ಎಷ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಶಾಲಾ ಶಿಕ್ಷಕ ಜಾವೆದ್ ಅಹಮ್ಮದ್ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸ್ಪೋಟಕ್ಕೆ ಕಾರಣ ಮತ್ತು ಘಟನೆಯಲ್ಲಿ ಸಾವು ನೋವೇನಾದರೂ ಸಂಭವಿಸಿದೆಯೇ ಎಂಬ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.