Advertisement

ಸ್ಫೋಟ ಅಪರಾಧಿಗಳಿಗೆ 7 ವರ್ಷ ಶಿಕ್ಷೆ

11:40 AM Jul 10, 2018 | |

ಬೆಂಗಳೂರು: ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದಿದ್ದ ಸ್ಫೋಟ ಪ್ರಕರಣದ ಮೂವರು ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

Advertisement

ಸತತ ಎಂಟು ವರ್ಷಗಳ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ಆರೋಪಿಗಳಿಗೆ ತಲಾ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ಇಬ್ಬರಿಗೆ 7.5 ಲಕ್ಷ ರೂ. ಹಾಗೂ ಮತ್ತೂಬ್ಬನಿಗೆ 10 ಲಕ್ಷ ರೂ. ದಂಡ ವಿಧಿಸಿ ಆದೇಶಿದ್ದಾರೆ.

ಬಿಹಾರದ ದರ್ಬಾಂಗ್‌ ಜಿಲ್ಲೆಯ ಗೌಹರ್‌ ಅಜೀಬ್‌ ಖೋಮೇನಿ, ಕಮಲ್‌ ಹಸನ್‌ ಹಾಗೂ ಮೊಹಮ್ಮದ್‌ ಕಪಿಲ್‌ ಅಖ್ತರ್‌ಗೆ ತಲಾ 7 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಹಾಗೆಯೇ ಖೋಮೇನಿ ಮತ್ತು ಕಮಲ್‌ ಹಸನ್‌ಗೆ ತಲಾ 7.5 ಲಕ್ಷ ರೂ. ದಂಡ ಹಾಗೂ ಕಪಿಲ್‌ ಅಖ್ತರ್‌ಗೆ 10 ಲಕ್ಷ ರೂ. ವಿಧಿಸಿದೆ.

ಒಂದು ವೇಳೆ ದಂಡ ಕಟ್ಟಲು ಸಾಧ್ಯವಾಗದಿದ್ದರೆ ಪ್ರತಿ 50 ಸಾವಿರಕ್ಕೆ ಒಂದು ವರ್ಷದಂತೆ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್‌ ಆದೇಶಿಸಿದೆ. ಇದೇ ವೇಳೆ ಆರೋಪಿಗಳಿಂದ ಸಂಗ್ರಹವಾದ ಒಟ್ಟು ಮೊತ್ತವನ್ನು 8 ವರ್ಷಗಳ ಹಿಂದೆ ನ್ಪೋಟದಲ್ಲಿ ಗಾಯಗೊಂಡ ಎಲ್ಲ ಗಾಯಾಳುಗಳಿಗೆ ಹಂಚಲು ಕೋರ್ಟ್‌ ನಿರ್ದೇಶನ ನೀಡಿದೆ.

ಮೂವರು ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಹಾಗೂ ಸಿಆರ್‌ಪಿಸಿ ಕಾಯ್ದೆಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಮೂವರು ಆರೋಪಿಗಳು ಈ ಹಿಂದೆ ನ್ಯಾಯಾಧೀಶರ ಎದುರು ತಪ್ಪೋಪ್ಪಿಗೆ ಹೇಳಿಕೆ ನೀಡಿದ್ದು, ನಾವು ನೇರವಾಗಿ ನ್ಪೋಟದಲ್ಲಿ ಭಾಗಿಯಾಗಿಲ್ಲ.

Advertisement

ಒಮ್ಮೆ ಮಾತ್ರ ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ಯಾಸಿನ್‌ ಭಟ್ಕಳ್‌, ರಿಯಾಜ್‌ ಭಟ್ಕಳ್‌ ಹಾಗೂ ಇತರೆ ಆರೋಪಿಗಳ ಜತೆ ಸ್ಫೋಟಕ್ಕೆ ಒಳಸಂಚು ರೂಪಿಸಿದ್ದೆವು. ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ ಅಷ್ಟೇ. ಬೆಂಗಳೂರಿಗೂ ಬಂದಿಲ್ಲ ಎಂದು ಹೇಳಿಕೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

2010ರ ಏಪ್ರಿಲ್‌ 17ರಂದು ಐಪಿಎಲ್‌ ಪಂದ್ಯ ಆರಂಭಕ್ಕೂ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದ ಕಾಂಪೌಂಡ್‌ ಬಳಿ ಐದು ಬಾಂಬ್‌ಗಳ ಪೈಕಿ ಮೂರು ಬಾಂಬ್‌ಗಳು ಸ್ಫೋಟಗೊಂಡಿದ್ದವು. ತುಮಕೂರಿನ ಸದಾಶಿವನಗರದ ಮಸೀದಿಯೊಂದರ ಬಳಿ ಬಾಂಬ್‌ಗಳನ್ನು ತಯಾರಿಸಿ ಬ್ಯಾಗ್‌ಗಳಲ್ಲಿ ತಂದು ಸ್ಫೋಟಿಸಿದ್ದರು.

ಈ ವೇಳೆ ಕೆಲ ಪೊಲೀಸರು ಸೇರಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅನಂತರ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಇಂಡಿಯನ್‌ ಮುಜಾಯಿದ್ದೀನ್‌ ಸಂಘಟನೆಯ ಉಗ್ರ ಯಾಸಿನ್‌ ಭಟ್ಕಳ್‌ ಮತ್ತು ಈತನ ಸಂಬಂಧಿ ರಿಯಾಜ್‌ ಭಟ್ಕಳ್‌ ಕೈವಾಡದ ಬಗ್ಗೆ ಪತ್ತೆ ಹಚ್ಚಿದ್ದರು. 

ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ  14 ಮಂದಿ ಪೈಕಿ 7 ಮಂದಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈ ಪೈಕಿ ಒಬ್ಬ ಮೃತಪಟ್ಟಿದ್ದು, ಇನ್ನುಳಿದ ಆರು ಮಂದಿಯ ಪೈಕಿ ಮೂವರು ತಪ್ಪೋಪ್ಪಿಕೊಂಡಿದ್ದಾರೆ.  ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಪ್ರತ್ಯೇಕ 5 ಪ್ರಕರಣಗಳು ದಾಖಲಾಗಿವೆ.  

ಮತ್ತೂಬ್ಬ ಆರೋಪಿ ಮೊಹಮ್ಮದ್‌ ತಾರೀಕ್‌ ಅಂಜಂ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದು, ಆದರೆ, ಪ್ರಕರಣವೊಂದರಲ್ಲಿ ಹೈದರಾಬಾದ್‌ ಪೊಲೀಸರು ಆರೋಪಿಯನ್ನು ಬಾಡಿ ವಾರೆಂಟ್‌ ಮೇಲೆ ಕರೆದೊಯ್ದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸರ್ಕಾರಿ ಅಭಿಯೋಜಕರಾದ ರವೀಂದ್ರ,

ಆರೋಪಿಗಳು ತಪ್ಪೋಪ್ಪಿಗೆ ಹೇಳಿಕೆ ನೀಡುವ ಮೂಲಕ ಇಂಡಿಯನ್‌ ಮುಜಾಯಿದ್ದೀನ್‌ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಯಾಸಿನ್‌ ಭಟ್ಕಳ್‌, ರಿಯಾಜ್‌ ಭಟ್ಕಳ್‌ ಸಹಚರರು ಎಂಬುದನ್ನು ಸಮರ್ಥಿಸಿಕೊಂಡಂತಾಗಿದೆ.  ಪ್ರಕರಣದ ಪ್ರಮುಖ ಆರೋಪಿಗಳಾದ ಯಾಸಿನ್‌ ಭಟ್ಕಳ್‌ ಹಾಗೂ ಇತರರ ಜತೆ ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದೆವು ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ಕೋರ್ಟ್‌ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಈಗಾಗಲೇ ಮೂವರು 6 ವರ್ಷ ಜೈಲು ಶಿಕ್ಷೆ ಅನುಭಿಸಿದ್ದು, ಇನ್ನು ಒಂದು ವರ್ಷಗಳ ಕಾಲ ಕಠಿಣ ಶಿಕ್ಷೆ ಅನುಭವಿಸಬೇಕಿದೆ. ಜತೆಗೆ ದಂಡದ ಮೊತ್ತವನ್ನು ಬಿಡುಗಡೆಗೂ ಮೊದಲು ಪಾವತಿಸಬೇಕು ಎಂದು ಕೋರ್ಟ್‌ ತೀರ್ಪು ಪ್ರಕಟಿಸಿದೆ ಎಂದು ಅವರು ತಿಳಿಸಿದರು.

ಆರೋಪಿಗಳು ನೇರವಾಗಿ ಸ್ಫೋಟದಲ್ಲಿ ಭಾಗಿಯಾಗಿಲ್ಲ. ಆದರೆ, ಯಾಸಿನ್‌ ಭಟ್ಕಳ್‌ ಹಾಗೂ ಇತರೆ ಆರೋಪಿಗಳನ್ನು ದೆಹಲಿಯ ಮನೆಯೊಂದರಲ್ಲಿ ಭೇಟಿಯಾಗಿದ್ದೇವು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಆದರೆ, ಇದಕ್ಕೆ ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ ವಿಚಾರಣೆ ವಿಳಂಬವಾದರಿಂದ ಒತ್ತಡಕ್ಕೊಳಗಾಗಿ ಆರೋಪಿಗಳು ತಪ್ಪೋಪ್ಪಿಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ಕೋರ್ಟ್‌ ಶಿಕ್ಷೆ ಹಾಗೂ ದಂಡ ಪ್ರಕಟಿಸಿದೆ.
-ಬಾಲನ್‌, ಆರೋಪಿಗಳ ಪರ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next