ಚೆನ್ನೈ: ತಮಿಳುನಾಡಿನ ಶಿವಕಾಶಿಯ ಪಟಾಕಿ ಉತ್ಪಾದನಾ ಘಟಕದಲ್ಲಿ ನಡೆದ ಸ್ಪೋಟದಲ್ಲಿ ಐದು ಮಹಿಳೆಯರು ಸೇರಿ ಎಂಟು ಮಂದಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಉಳಿದ ಹನ್ನೆರಡು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿರುದುನಗರ ಜಿಲ್ಲೆಯ ಶ್ರೀ ಸುದರ್ಶನ್ ಪಟಾಕಿಯಲ್ಲಿ ರಾಸಾಯನಿಕಗಳನ್ನು ನಿರ್ವಹಿಸುವಾಗ ಘರ್ಷಣೆಯು ಸ್ಫೋಟಕ್ಕೆ ಕಾರಣವಾಯಿತು ಎಂದು ಶಂಕಿಸಲಾಗಿದೆ.
“ಇದು ಪರವಾನಗಿ ಪಡೆದ ಘಟಕವಾಗಿದೆ. ಅವರು ಅಲಂಕಾರಿಕ ಪಟಾಕಿಗಳನ್ನು ತಯಾರಿಸುತ್ತಾರೆ. ರಾಸಾಯನಿಕಗಳ ಮಿಶ್ರಣದ ಸಮಯದಲ್ಲಿ ಘರ್ಷಣೆಯು ಸ್ಫೋಟಕ್ಕೆ ಕಾರಣವಾಯಿತು ಎಂದು ಶಂಕಿಸಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಜಿಲ್ಲಾ ಎಸ್ಪಿ ಕೆ ಫಿರೋಜ್ ಖಾನ್ ಅಬ್ದುಲ್ಲಾ ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶದಿಂದ ಬೃಹತ್ ಹೊಗೆ ಉಕ್ಕುತ್ತಿರುವುದನ್ನು ಮತ್ತು ಸಣ್ಣ ಸ್ಫೋಟಗಳು ಮುಂದುವರಿದಿರುವುದನ್ನು ವೀಡಿಯೊಗಳು ತೋರಿಸುತ್ತವೆ. ಗಾಯಗೊಂಡ ವ್ಯಕ್ತಿಯನ್ನು ಸ್ಥಳದಿಂದ ತಳ್ಳುಬಂಡಿಯಲ್ಲಿ ಕರೆದೊಯ್ಯಲಾಗಿದೆ.
ಭಾರತದ ಪಟಾಕಿ ರಾಜಧಾನಿ ಎಂದೇ ಹೆಸರು ಪಡೆದ ಶಿವಕಾಶಿಯಲ್ಲಿ ಇತ್ತೀಚಿನ ವರ್ಷದಲ್ಲಿ ಹಲವು ಸ್ಫೋಟಗಳೂ ನಡೆದಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳೊಂದರಲ್ಲೇ ಹದಿನೈದು ದಿನಗಳೊಳಗೆ 27 ಮಂದಿ ಸಾವನ್ನಪ್ಪಿದ್ದರು.