ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ನದಾತರಿಗೆ ನಿರಂತರವಾಗಿ ಶೋಷಣೆ ಮಾಡುತ್ತಲೇ ಬರುತ್ತಿರುವ ಕಾರಣ ಇಂದು ದೇಶದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ನೀತಿ, ನಿರೂಪಣೆ ಮಾಡುವ ಜನಪ್ರತಿನಿಧಿಗಳು ಉತ್ತರದಾಯಿಗಳಾಗಿದ್ದಾರೆ. ಅನ್ನದಾತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ, ಇಲ್ಲವೆ ಖುರ್ಚಿ ಬಿಟ್ಟು ಕೆಳಗಿಳಿಯಿರಿ ಎಂದು ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ಅಮೃತ ಮಹೋತ್ಸವ ಶುಭ ಗಳಿಗೆಯಲ್ಲಿ ನಾವಿದ್ದರೂ ಸಹ ಇಂದು ದೇಶಕ್ಕೆ ಅಲ್ಲದೆ ಇಡೀ ವಿಶ್ವಕ್ಕೆ ಅನ್ನ ಹಾಕುತ್ತಿರುವ ಭಾರತ ದೇಶದ ಅನ್ನದಾತ ಅನೇಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳು ಭವಿಷ್ಯದಲ್ಲಿ ರೈತರಿಗೆ ಮರಣ ಶಾಸನವಾಗುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಸರ್ಕಾರ ಇಂದು ಖಾಸಗೀಕರಣದ ನೆಪದಲ್ಲಿ ಸರ್ಕಾರಿ ಒಡೆತನದ ಇಲಾಖೆಗಳನ್ನು ಮಾರಾಟ ಮಡುತ್ತಿದೆ. ಇದೇನಾ ಅಚ್ಚೆದಿನ್?. ವಿದ್ಯುತ್ ಮಸೂದೆ, ಎಪಿಎಂಸಿ ಮಸೂದೆಗಳನ್ನು ಜಾರಿಗೆ ತಂದು ಎಪಿಎಂಸಿಗಳಲ್ಲಿ ಶ್ರೀಮಂತ ದಲ್ಲಾಳಿಗಳ ಮುಂದೆ ರೈತರು ಮಂಡೆಯೂರಿ ಕುಳಿತುಕೊಳ್ಳುವ ಸಂದರ್ಭ ಸೃಷ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಡೆಚೂರು- ಬಾಡಿಯಾಳ ಸಮೀಪ ಅಂತಾರಾಷ್ಟಿಯ ಡ್ರಗ್ ಪಾರ್ಕ್ ನಿರ್ಮಾಣದ ನೆಪದಲ್ಲಿ 1500 ಎಕರೆ ರೈತರ ಭೂಸ್ವಾ ಧೀನಕ್ಕೆ ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು. ತುಮಕೂರು ಕೋರ್ ಗ್ರೀನ್ ಶುಗರ್ ಕಾರ್ಖಾನೆ ಬಾಕಿ ಉಳಿಸಿಕೊಂಡ ಕಬ್ಬಿನ ಪಾವತಿ ರೈತರಿಗೆ ಕೂಡಲೇ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರದ ಜತೆಯಲ್ಲಿ ಆತನ ಸುಸ್ತಿ ಸಾಲವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಕೋಟೆಕಾನಿ, ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಭೀಮರೆಡ್ಡಿ ಯರಗೋಳ, ವೆಂಕಟೇಶ ಮಿಲಿó, ಅನಿಲ, ಯಲ್ಲಪ್ಪ, ಕಾಶಿರಾಜ, ಅಮೃತರಾವ ಕೊಟಿಕಾನಿ, ಶ್ರೀನಿವಾಸ ಚಾಮನಳ್ಳಿ, ಸುಭಾಷ ನಡುವಿನಕೇರಿ, ಅಶೋಕ ಯಕ್ಷಿಂತಿ, ನಾಗರಾಜ ಗುಂಡಕನಾಳ ಸೇರಿದಂತೆ ಇತರರಿದ್ದರು.