ವಾಡಿ: ಮಾನವ ಶೋಷಣೆ ಹೆಚ್ಚುತ್ತಿದ್ದಂತೆ ಬಂಡವಾಳಶಾಹಿಗಳ ಆಸ್ತಿ ಶಿಖರದಂತೆ ಬೆಳೆದಿದೆ. ಇದು ನಿರುದ್ಯೋಗ ಸಮಸ್ಯೆ ಸೃಷ್ಟಿಗೆ ಪ್ರಮುಖ ಕಾರಣವಾಗಿದೆ ಎಂದು ಆಲ್ ಇಂಡಿಯಾ ಡೇಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಶನಿವಾರ ಎಐಡಿವೈಒ ವತಿಯಿಂದ ಏರ್ಪಡಿಸಲಾಗಿದ್ದ 8ನೇ ಜಿಲ್ಲಾ ಮಟ್ಟದ ಯವಜನ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದ ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಅಶಾಖುಲ್ಲಾಖಾನ್, ಖುರಾಂ ಬೋಸ್ ಅವರಂತ ಕ್ರಾಂತಿಕಾರಿಗಳ ನೇತೃತ್ವದಲ್ಲಿ ರಾಜಿರಹಿತ ಹೋರಾಟ ಹೂಡುವ ಮೂಲಕ ಬ್ರಿಟಿಷರ ಎದೆಗುಂಡಿಗೆ ನಡುಗಿಸಿದ್ದರು. ಆದರೆ ಸ್ವಾತಂತ್ರ್ಯ ಭಾರತದ ಆಡಳಿತ ವ್ಯವಸ್ಥೆ ಕ್ರಾಂತಿಕಾರಿಗಳ ಆಶಯ ಧಿಕ್ಕರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಹೊಸ ಬದಲಾವಣೆ ಬರಲು ಯುವಕರು ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಸಂಪ್ರದಾಯ, ಮೌಢ್ಯಾಚರಣೆಗಳಿಂದ ಹೊರಬರಬೇಕು. ಎಐಡಿವೈಒ ಸಂಘಟನೆ ಬಲಪಡಿಸಬೇಕು ಎಂದು ಕರೆ ನೀಡಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ, ದುಡಿಯುವ ಕೈಗಳಿಗೆ ಕೆಲಸವಿಲ್ಲ. ಬೆಲೆ ಏರಿಕೆಯಿಂದ ಜನರ ಶೋಷಣೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಲ್ಲೆ ಆರೋಪ: ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ
ಎಐಡಿವೈಒ ಜಿಲ್ಲಾಧ್ಯಕ್ಷ ನಿಂಗಣ್ಣ ಜಂಬಗಿ, ಕಾರ್ಯದರ್ಶಿ ಜಗನ್ನಾಥ ಎಸ್. ಎಚ್, ಮುಖಂಡರಾದ ಭೀಮಾಶಂಕರ ಪಾಣೇಗಾಂವ, ಶರಣು ವಿ.ಕೆ, ಮಲ್ಲಿನಾಥ ಹುಂಡೇಕಲ್, ರಾಜು ಒಡೆಯರ, ಸಿದ್ಧು ಚೌದ್ರಿ, ಅಂಬಿಕಾ ಗುತ್ತೇದಾರ, ಸಾಯಿನಾಥ ಚಿಟೇಲಕರ, ಅವಿನಾಶ ಒಡೆಯರ ಹಾಗೂ ಜಿಲ್ಲೆಯ ಯುವ ಪ್ರತಿನಿಧಿಗಳು ಪಾಲ್ಗೊಂಡಿದ್ದರು.