Advertisement
ಆದಾಗ್ಯೂ, 1947 ಮತ್ತು 1965ರ ಘಟನೆಗಳಂತೆ ಈ ಬಾರಿಯ ದಾಳಿ ಅನಿರೀಕ್ಷಿತವಾದದ್ದಾಗಿರಲಿಲ್ಲ. 1971 ರ ಮಾರ್ಚ್ 25ರ ರಾತ್ರಿ, ಯಾಹ್ಯಾ ಖಾನ್ ನೇತೃತ್ವದ ಪಶ್ಚಿಮ ಪಾಕಿಸ್ತಾನಿ ಸರ್ಕಾರವು ಪೂರ್ವ ಪಾಕಿಸ್ತಾನದಲ್ಲಿ (ಪ್ರಸ್ತುತ ಬಾಂಗ್ಲಾದೇಶ) ಬಂಗಾಳಿ ಮಾತನಾಡುವ ಜನರನ್ನು ಕ್ರೌರ್ಯದಿಂದ ನಿಗ್ರಹಿಸಲು ಪ್ರಾರಂಭಿಸಿದಾಗ, ಭಾರತಕ್ಕೆ ನಿರಾಶ್ರಿತರ ನಿರಂತರ ಒಳಹರಿವು ಉಂಟಾಗಿತ್ತು. ಅದಾಗಲೇ, 25 ವರ್ಷಗಳ ಅವಧಿಯಲ್ಲಿ ನೆರೆಯ ದೇಶಗಳ ನಡುವೆ ಮೂರನೇ ಸಶಸ್ತ್ರ ಸಂಘರ್ಷವು ಅನಿವಾರ್ಯ ಎಂದು ಖಚಿತವಾಗಿತ್ತು.
Related Articles
Advertisement
ಬಿಎಎಫ್ ಉಗಮಕ್ಕೆ ಐಎಎಫ್ ಏರ್ ಮಾರ್ಷಲ್ ಪತ್ನಿಯ ಬೆಂಬಲ!
ಪಾಕಿಸ್ತಾನಿ ವಾಯುಪಡೆಯ ಮಾಜಿ ಅಧಿಕಾರಿ, ಗ್ರೂಪ್ ಕ್ಯಾಪ್ಟನ್ ಖಾಂಡ್ಕರ್ ಮುಕ್ತಿ ಬಾಹಿನಿಗಾಗಿಯೇ ವಾಯುಪಡೆ ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿದರು. ಆದರೆ, ಬಾಂಗ್ಲಾದೇಶಕ್ಕೆ ಆಗ ಅಂತರರಾಷ್ಟ್ರೀಯ ಮನ್ನಣೆ ದೊರೆತಿರದ ಕಾರಣ ಈ ಪ್ರಸ್ತಾಪವು ಹೆಚ್ಚು ಗಮನ ಸೆಳೆಯಲಿಲ್ಲ. ಆದಾಗ್ಯೂ ಕೋಲ್ಕತ್ತದಲ್ಲಿ ನಡೆದ ಔತಣಕೂಟವು ಮಹತ್ವದ ಬದಲಾವಣೆಗೆ ನಾಂದಿ ಹಾಡಿತು. 1971ರ ಆಗಸ್ಟ್ ನಲ್ಲಿ ನಡೆದ ಔತಣ ಕೂಟಕ್ಕೆ ಭಾರತೀಯ ವಾಯುಪಡೆ ಏರ್ ಮಾರ್ಷಲ್ ಪಿಸಿ ಲಾಲ್ ಅವರನ್ನು ಖಾಂಡ್ಕರ್ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ, ಖಾಂಡ್ಕರ್ ಅವರು ಮುಕ್ತಿ ವಾಹಿನಿಗಾಗಿ ವಾಯುಪಡೆ ಸ್ಥಾಪಿಸುವ ಬಗ್ಗೆ ಚರ್ಚಿಸಿದರು. ಅಚ್ಚರಿಯೆಂಬಂತೆ ಇದಕ್ಕೆ ಲಾಲ್ ಅವರ ಪತ್ನಿಯಿಂದ ಬಲವಾದ ಬೆಂಬಲ ವ್ಯಕ್ತವಾಯಿತು. ಆಕೆ ಸ್ಫೂರ್ತಿಯಿಂದ ಖಾಂಡ್ಕರ್ ಇಚ್ಛೆ ಪರ ವಹಿಸಿ ಮಾತನಾಡಿದ್ದರು. ಪರಿಣಾಮವಾಗಿ ಲಾಲ್ ಅವರೂ ಭರವಸೆ ನೀಡಲೇಬೇಕಾಯಿತು. ಈ ವಿಚಾರವಾಗಿ, ಅನಿರೀಕ್ಷಿತ ಬೆಂಬಲಕ್ಕಾಗಿ ಖಾಂಡ್ಕರ್ ಯಾವಾಗಲೂ ಲಾಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತೀಯ ವಾಯುಪಡೆಯ ಮುಖ್ಯಸ್ಥರು ಭರವಸೆಯನ್ನು ಈಡೇರಿಸಿದರು. ಭಾರತ ಸರ್ಕಾರವು ಮುಕ್ತಿ ವಾಹಿನಿಗಾಗಿ ವಾಯುಪಡೆ ಸ್ಥಾಪಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದು ಖಾಂಡ್ಕರ್ ಅವರನ್ನು ಪುಳಕಿತರನ್ನಾಗಿಸಿತು. ಬಾಂಗ್ಲಾದೇಶ ವಾಯುಪಡೆಯನ್ನು ಸ್ಥಾಪಿಸಲು ಬೇಕಾದ ಸಮರ್ಥ ಬಾಂಗ್ಲಾದೇಶಿ ಪೈಲಟ್‌ಗಳ ಹುಡುಕಾಟದಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.
ದಿಮಾಪುರದಲ್ಲಿ ಕಠಿನ ತರಬೇತಿ
ಭಾರತೀಯ ವಾಯುಪಡೆಯ ದಿಮಾಪುರ್ ನೆಲೆಯಿಂದ ಬಾಂಗ್ಲಾದೇಶ ವಾಯುಪಡೆ ಸ್ಥಾಪನೆಯ ಕಾರ್ಯ ಆರಂಭಗೊಂಡಿತು. ಪಾಕಿಸ್ತಾನಿ ವಾಯುಪಡೆಯ ಮಾಜಿ ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಶಂಸುಲ್ ಅಲಂ ಅವರು ಆರು ಮಂದಿ ಪೈಲಟ್ ಗಳಿಗೆ (ಇವರೆಲ್ಲ ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಕಾರ್ಯನಿರ್ವಹಿಸಿದ್ದವರು) ತರಬೇತಿ ಆರಂಭಿಸಿದರು. ಓಟರ್ ಹಾಗೂ ಡಗ್ಲಾಸ್ ಡಕೋಟ ಸರಕು ಸಾಗಣೆ ವಿಮಾನದ ಮೂಲಕ ತರಬೇತಿ ಶುರುಮಾಡಲಾಯಿತು. ದಿಮಾಪುರ್ ನಗರವು ಈಶಾನ್ಯ ಭಾರತದ ನಾಗಾಲ್ಯಾಂಡ್ ನಲ್ಲಿದೆ.
ನಾಲ್ಕು ದಿನಗಳ ತರುವಾಯ ಸ್ಕ್ವಾಡ್ರನ್ ಲೀಡರ್ ಸುಲ್ತಾನ್ ಅಹ್ಮದ್ ಅವರು ವಾಯುನೆಲೆಗೆ ಬಂದರು. ಯುನಿಟ್ ನ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡು ತರಬೇತಿಯ ಪೂರ್ಣ ನೇತೃತ್ವ ವಹಿಸಿದರು. ಎರಡು ದಿನಗಳ ನಂತರ, ಅಕ್ಟೋಬರ್ 4ರಂದು ಯುನಿಟ್ ಗೆ ಅಧಿಕೃತವಾಗಿ ‘ಕಿಲೋ ಫ್ಲೈಟ್’ ಎಂದು ನಾಮಕರಣ ಮಾಡಲಾಯಿತು. ದಿಮಾಪುರ್ ನೆಲೆಯಲ್ಲಿನ ಕಠಿಣ ಜೀವನ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶದ ಏರ್‌ಮೆನ್‌ಗಳು ಭಾರತೀಯ ವಾಯುಪಡೆಯ ತರಬೇತುದಾರರ ಮೇಲ್ವಿಚಾರಣೆಯಲ್ಲಿ ಶ್ರದ್ಧೆಯಿಂದ ತರಬೇತಿ ಪಡೆದರು. ಅಕ್ಟೋಬರ್ 11 ರಂದು ಓಟರ್ ವಿಮಾನವು ತನ್ನ ರೆಕ್ಕೆಯಲ್ಲಿ ಬಾಂಗ್ಲಾದೇಶದ ಹಸಿರು ಬಣ್ಣ ಮತ್ತು ಧ್ವಜವನ್ನು ಧರಿಸಿಕೊಂಡು ದಿಮಾಪುರದಲ್ಲಿ ಲ್ಯಾಂಡ್ ಆದಾಗ ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಾಯಿತು.
ಡಿಸೆಂಬರ್ 1ರಂದು ‘ ಕಿಲೋ ಫ್ಲೈಟ್’ ಪೈಲಟ್ ಗಳು ದಿಮಾಪುರದಿಂದ ಜೋರ್ಹತ್ ಗೆ ತೆರಳಿದರು. ತಮ್ಮ ಮುಂದಿನ ಕಾರ್ಯಾಚರಣೆಗಾಗಿ ಅವರು ಕಾತರದಿಂದ ಕಾಯುತ್ತಿದ್ದರು. ಅಂತಿಮವಾಗಿ, ಅವರ ನಿರೀಕ್ಷೆಯ ಕ್ಷಣ ಬಂದೇಬಿಟ್ಟಿತು. ಸ್ಟೇಷನ್ ಕಮಾಂಡರ್ ಗ್ರೂಪ್ ಕ್ಯಾಪ್ಟನ್ ಚಂದನ್ ಸಿಂಗ್ ಅವರು ಸಭೆಯನ್ನು ಉದ್ದೇಶಿಸಿ, “ಮಹನೀಯರೇ, ನೀವು ಕುತೂಹಲದಿಂದ ಕಾಯುತ್ತಿದ್ದ ದಿನವು ಬಂದೇಬಿಟ್ಟಿದೆ. ನೀವು, ಕಿಲೋ ಫ್ಲೈಟ್ ನವರು ಪೂರ್ವ ಮುಂಭಾಗದಲ್ಲಿ ಯುದ್ಧವನ್ನು ಪ್ರಾರಂಭಿಸಲಿದ್ದೀರಿ ಎಂದು ನಾವು ನಿರ್ಧರಿಸಿದ್ದೇವೆ” ಎಂದರು. ಜೊರ್ಹಾತ್ ಪ್ರದೇಶವು ಅಸ್ಸಾಂನಲ್ಲಿದೆ.
ನಂತರ ಪೈಲಟ್‌ಗಳಿಗೆ ಅವರ ಗುರಿಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ನಾರಾಯಣಗಂಜ್ ಮತ್ತು ಚಿತ್ತಗಾಂಗ್‌ನಲ್ಲಿನ ಇಂಧನ ಡಂಪ್‌ಗಳ ಮೇಲೆ ರಾತ್ರಿ ದಾಳಿ ನಡೆಸಲು ತಿಳಿಸಲಾಯಿತು. ಈ ಕಾರ್ಯಾಚರಣೆಗಾಗಿ ಓಟರ್ ಮತ್ತು ಅಲೌಟ್ಟೆ ಎರಡೂ ರಾಕೆಟ್ ಪಾಡ್‌ಗಳನ್ನು ಹೊಂದಿದ್ದವು. ಏತನ್ಮಧ್ಯೆ, ಭಾರತೀಯ ರಕ್ಷಣಾ ಪಡೆಗೆ ಅಷ್ಟರಲ್ಲೇ ಭಾರತೀಯ ಗುರಿಗಳ ಮೇಲೆ ದಾಳಿಗಳು ಸಂಭವಿಸಬಹುದೆಂಬ ನಿರೀಕ್ಷೆ ಇತ್ತು. ಅವರ ನಿರೀಕ್ಷೆಯು ಡಿಸೆಂಬರ್ 3 ರ ಸಂಜೆ ನಿಜವಾಯಿತು. ಪರಿಣಾಮವಾಗಿ, ದಾಳಿಯ ನಂತರ ತಕ್ಷಣವೇ ಕಿಲೋ ಫ್ಲೈಟ್‌ನ ಕಾರ್ಯಾಚರಣೆಗೆ ಕ್ಷಣಗಣನೆ ಪ್ರಾರಂಭವಾಯಿತು.
ನಾರಾಯಣಗಂಜ್ ಎಂಬುದು ಬಾಂಗ್ಲಾದೇಶದ ನಗರ. ರಾಜಧಾನಿ ಢಾಕಾದ ಹೊರವಲಯದಲ್ಲಿದೆ. ಚಿತ್ತಗಾಂಗ್ ಸಹ ಬಾಂಗ್ಲಾದೇಶದಲ್ಲಿದೆ. ಇದು ದೇಶದ ಆಗ್ನೇಯ ಕರಾವಳಿಯಲ್ಲಿರುವ ಪ್ರಮುಖ ಬಂದರು ನಗರವಾಗಿದೆ.
ಶುರುವಾಯಿತು ಕಾರ್ಯಾಚರಣೆ
ಕಿಲೋ ಫ್ಲೈಟ್ ನವರು ಪಡೆದಿದ್ದ ಕಠಿಣ ತರಬೇತಿಯ ಪ್ರಯೋಜಕಾರಿ ಎಂಬುದು ಈಗ ಸಾಬೀತಾಯಿತು. ಡಿಸೆಂಬರ್ 3 ರಂದು ರಾತ್ರಿ 9:30ಕ್ಕೆ, ಕಿಲೋ ಫ್ಲೈಟ್‌ನ ಕಮಾಂಡಿಂಗ್ ಆಫೀಸರ್, ಸ್ಕ್ವಾಡ್ರನ್ ಲೀಡರ್ ಸುಲ್ತಾನ್ ಅಹ್ಮದ್ ಅವರು ಅಗರ್ತಲಾದಿಂದ ಅಲೌಟ್ಟೆ 3 ಹೆಲಿಕಾಪ್ಟರ್‌ನಲ್ಲಿ ನಾರಾಯಣಗಂಜ್ ಕಡೆಗೆ ಹೊರಟರು. ಇದಾದ ಸ್ವಲ್ಪ ಸಮಯದ ನಂತರ, ಫ್ಲೈಟ್ ಲೆಫ್ಟಿನೆಂಟ್ ಶಂಸುಲ್ ಆಲಂ, ಚಿತ್ತಗಾಂಗ್‌ಗೆ ಟೇಕಾಫ್ ಮಾಡಲು ಓಟರ್ ವಿಮಾನವನ್ನು ಸಿದ್ಧಪಡಿಸಿದರು.
ಒಂದು ಗಂಟೆ ಹಾರಾಟದ ನಂತರ, ಓಟರ್ ವಿಮಾನವು ಚಿತ್ತಗಾಂಗ್ ಬಂದರನ್ನು ತಲುಪಿತು. ಇದು ಅವರು ಬಹಳ ದಿನಗಳಿಂದ ತಯಾರಿ ನಡೆಸುತ್ತಿದ್ದ ಕ್ಷಣ. ಹಿಂಜರಿಕೆಯಿಲ್ಲದೆ, ಎರಡು ರಾಕೆಟ್‌ಗಳನ್ನು ಉಡಾಯಿಸಲಾಯಿತು. ಇದರಿಂದಾಗಿ ತೈಲ ಟ್ಯಾಂಕ್‌ಗಳು ಜ್ವಾಲೆಗಳಾಗಿ ಸಿಡಿದವು. ಪ್ರಯಾಗಿ, ಬಂದರಿನಲ್ಲಿ ಆ್ಯಂಟಿ ಏರ್ ಕ್ರಾಫ್ಟ್ ಗಳು ಗುಂಡು ಹಾರಿಸಲು ಪ್ರಾರಂಭಿಸಿದವು. ನಂತರ ಓಟರ್ ಹಿಂತಿರುಗಬೇಕಾಯಿತು. ಆದಾಗ್ಯೂ, ಹಿಂತಿರುಗಿ ಹೊರಡುತ್ತಿದ್ದಂತೆ, ಫ್ಲೈಟ್ ಲೆಫ್ಟಿನೆಂಟ್ ಆಲಂ ತನ್ನ ಕೊನೆಯ ಎರಡು ರಾಕೆಟ್‌ಗಳನ್ನು ಬಳಸಿ ಅಲ್ಲಿ ಲಂಗರು ಹಾಕಿದ್ದ ಹಡಗನ್ನು ಹೆಚ್ಚು ಹಾನಿಗೊಳಿಸಿದರು. ಉಲ್ಲಾಸದ ಭಾವದಿಂದ, ಉತ್ಸಾಹ ತುಂಬಿದ ನಾಲ್ವರು ಸಿಬ್ಬಂದಿ ಒಟ್ಟಾಗಿ “ಜೈ ಬಾಂಗ್ಲಾ” ಎಂದು ಘೋಷಣೆ ಕೂಗಿದರು.
ಅದೇ ಸಮಯದಲ್ಲಿ, ಸ್ಕ್ವಾಡ್ರನ್ ಲೀಡರ್ ಸುಲ್ತಾನ್ ಅಹ್ಮದ್ ಅವರ ಅಲೌಟ್ಟೆ ಯುದ್ಧವಿಮಾನವು ನಾರಾಯಣಗಂಜ್‌ನಲ್ಲಿ ಯಶಸ್ವಿ ದಾಳಿಗಳನ್ನು ನಡೆಸಿತು. ಎರಡೂ ವಿಮಾನಗಳು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಅಗರ್ತಲಾಕ್ಕೆ ಮರಳಿದವು. ಮಿಗ್, ಗ್ನಾಟ್ ಮತ್ತು ಸುಖೋಯ್ ಸೇರಿದಂತೆ ಭಾರತೀಯ ವಾಯುಪಡೆಯ ಶಕ್ತಿಶಾಲಿ ಯುದ್ಧ ವಿಮಾನಗಳು ಈಗ ಶತ್ರುಗಳ ಮೇಲೆ ದಾಳಿಗೆ ಸಿದ್ಧವಾದವು.
ಕಿಲೋ ಫ್ಲೈಟ್‌ನ ಎರಡು ದಾಳಿಗಳು ಹೆಚ್ಚು ಸಾಂಕೇತಿಕ ಪರಿಣಾಮವನ್ನು ಬೀರಿದವು. ಇವು ಶತ್ರುಗಳಿಗೆ ಸೀಮಿತ ಹಾನಿಯನ್ನು ಉಂಟುಮಾಡಿದವು. ಆದಾಗ್ಯೂ, ಬಾಂಗ್ಲಾದೇಶದ ಪೈಲಟ್‌ಗಳೇ ಮೊದಲಾಗಿ ದಾಳಿ ನಡೆಸಲು ಮತ್ತು ಆರಂಭಿಕ ಪ್ರತೀಕಾರದ ಹೊಡೆತಗಳನ್ನು ನೀಡಲು ಭಾರತೀಯ ರಕ್ಷಣಾ ಪಡೆ ಅನುಮತಿಸಿತು. ಆ ಮೂಲಕ, ಭಾರತೀಯ ರಕ್ಷಣಾ ಪಡೆ ಮತ್ತು ಭಾರತೀಯ ವಾಯುಪಡೆಗಳು ತಮ್ಮ ಬೆಂಬಲವನ್ನು ಬಾಂಗ್ಲಾ ವಿಮೋಚನೆಯ ಯುದ್ಧತಂತ್ರವಾಗಿ ಪರಿವರ್ತಿಸಿದವು. ಇದು ಮುಕ್ತಿ ಬಾಹಿನಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ಭಾರತದ ಒಗ್ಗಟ್ಟನ್ನು ಎತ್ತಿ ತೋರಿಸಿತು.
ಇದಾದ ಎರಡು ವಾರಗಳಲ್ಲಿ ಪೂರ್ವ ಪಾಕಿಸ್ತಾನವು ರೂಪಾಂತರಕ್ಕೆ ಒಳಗಾಯಿತು. ಆ ಮೂಲಕ ಹೊಸ ರಾಷ್ಟ್ರ ಬಾಂಗ್ಲಾದೇಶದ ಉದಯವಾಯಿತು.
ಬಾಂಗ್ಲಾದೇಶಕ್ಕೆ ಸ್ವಾಂತಂತ್ರ್ಯ ದೊರೆತ ಬಳಿಕ ಖಾಂಡ್ಕರ್ ಅವರು ಅಲ್ಲಿನ ವಾಯುಪಡೆಯ ಮೊದಲ ಚೀಫ್ ಏರ್ ಮಾರ್ಷಲ್ ಆಗಿ ಕಾರ್ಯನಿರ್ವಹಿಸಿದರು. ಅದೇ ದಿನವನ್ನು ಬಾಂಗ್ಲಾದೇಶ ವಾಯುಪಡೆಯು ಅಧಿಕೃತ ಸಂಸ್ಥಾಪನಾ ದಿನವನ್ನಾಗಿ ಆಚರಿಸಿಕೊಳ್ಳುತ್ತಿದೆ.