ರಾಯಚೂರು: ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಆರ್‌ಟಿ ಕಾರ್ನರ್ ಮಾಡಿ ಆಸ್ಪತ್ರೆಗಳಿಗೆ ಬಂದಂಥ ಫಲಾನುಭವಿಗಳಿಗೆ ಒಆರ್‌ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆಯ ಮಹತ್ವ ತಿಳಿಸಬೇಕು ಎಂದು ತಹಶೀಲ್ದಾರ್ ರಾಜಶೇಖರ ಬಿ. ಸೂಚಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ, ಕೈ ತೊಳೆಯುವ ವಿಧಾನ ಹಾಗೂ ಸ್ತನ್ಯಪಾನ ಸಪ್ತಾಹ
ಕಾರ್ಯಕ್ರಮದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆ.1ರಿಂದ 15ರವರೆಗೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ಮಾಡಿ 0-5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಒಆರ್‌ಎಸ್ ಪ್ಯಾಕೆಟ್‌ಅನ್ನು ವಿತರಿಸಲಾಗುತ್ತದೆ. ಅತಿಸಾರ ಭೇದಿ ಕಂಡುಬಂದ ಮಕ್ಕಳಿರುವ ಮನೆಗೆ ಒಆರ್‌ಎಸ್ ಮತ್ತು ಜಿಂಕ್ ಮಾತ್ರೆಯನ್ನು ವಿತರಿಸಲಾಗುತ್ತದೆ. ಜಿಂಕ್ ಮಾತ್ರೆಯನ್ನು ವಯಸ್ಸಿನ ಅನುಗುಣವಾಗಿ 14 ದಿನಗಳವರೆಗೆ ಕೊಡಲಾಗುವುದು ಎಂದು ವಿವರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಶಕೀರ್ ಮಾತನಾಡಿ, ಅತಿಸಾರ ಭೇದಿಯಿಂದ 0-5 ವರ್ಷದೊಳಗಿನ ಮಕ್ಕಳು ಶೇ.8ರಷ್ಟು ಮರಣ ಹೊಂದುತ್ತಿದ್ದಾರೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಒಆರ್‌ಎಸ್ ದ್ರಾವಣ ತಯಾರಿಸುವ, ಕೈ ತೊಳೆಯುವ ವಿಧಾನಗಳನ್ನು ಪ್ರಾತ್ಯಕ್ಷಿತೆ ಮೂಲಕ ತೋರಿಸಬೇಕು. ಈ ವರ್ಷದ ಧ್ಯೇಯ “ತೀವ್ರತರ ಅತಿಸಾರ ಭೇದಿಯಿಂದ ಶ್ಯೂನ ಮರಣ’ ಎನ್ನುವುದಾಗಿದ್ದು, ಇದಕ್ಕೆ ಇತರೆ ಇಲಾಖೆಗಳ ಸಹಕಾರ ಅಗತ್ಯವಿರುತ್ತದೆ ಎಂದು
ತಿಳಿಸಿದರು.
ಅದರ ಜತೆಗೆ ಸ್ತನ್ಯಪಾನ ಸಪ್ತಾಹ ಆಚರಿಸಲಾ ಗುತ್ತದೆ. ಈ ವರ್ಷದ ಘೋಷ ವಾಕ್ಯ ಶಿಕ್ಷಣ ಮತ್ತು ಬೆಂಬಲದೊಂದಿಗೆ ಸ್ತನ್ಯಪಾನ ವೃದ್ಧಿಸಿ ಎನ್ನುವುದಾಗಿದೆ. ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಎದೆ ಹಾಲಿನ ಮಹತ್ವದ ಬಗ್ಗೆ ಬಾಣಂತಿಯರಿಗೆ, ಗರ್ಭಿಣಿಯರಿಗೆ, ಸಾರ್ವಜನಿಕರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಯವರ ಸಹಕಾರ ಅಗತ್ಯ ಎಂದರು.
ರಕ್ತಹೀನತೆ ಮತ್ತು ಕುಂಠಿತ ಬೆಳವಣಿಗೆ ತಡೆಗಟ್ಟುವ ನಿಟ್ಟಿನಲ್ಲಿ ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ಆಚರಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ನಂತರ ಕೈ ತೊಳೆಯುವ ವಿಧಾನದ ಮಹತ್ವ ಹಾಗೂ ಕೈ ತೊಳೆಯುವ ವಿಧಾನಗಳನ್ನು ಪ್ರಾತ್ಯಕ್ಷಿತೆ ಮೂಲಕ ತೋರಿಸಬೇಕು ಎಂದರು.
ಆರೋಗ್ಯ ಇಲಾಖೆಯ ತಾಲೂಕು ಮೇಲ್ವಿಚಾರಕರು, ತಾಪಂ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಇಲಾಖೆ, ಅಧಿಕಾರಿಗಳು, ನಗರಸಭೆ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳು ಸೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.