Advertisement

ಜಾತಿಗಣತಿ ವರದಿ ಬಹಿರಂಗಗೊಳಿಸಿ

01:27 PM Jun 14, 2017 | Team Udayavani |

ದಾವಣಗೆರೆ: ಜಾತಿಗಣತಿ, ಆರ್ಥಿಕ ಸಮೀಕ್ಷಾ ವರದಿ ಬಹಿರಂಗಕ್ಕೆ ಒತ್ತಾಯಿಸಿ ಮತ್ತು ಕೇಂದ್ರ ಸರ್ಕಾರದ ಗೋಹತ್ಯೆ ಮತ್ತು ಮಾರಾಟ ನಿಯಂತ್ರಣ ಕಾಯ್ದೆ ವಿರೋಧಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದ್ದಾರೆ. ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು. 

Advertisement

ರಾಜ್ಯದಲ್ಲಿನ ಎಲ್ಲಾ ಜಾತಿಯವರ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಳೆದ ವರ್ಷ ಜಾತಿಗಣತಿ, ಆರ್ಥಿಕ ಸಮೀಕ್ಷೆ ನಡೆಸಿತ್ತು. ಸ್ವಾತಂತ್ರ ಪೂರ್ವದಲ್ಲಿ 1931ರ ನಂತರ ಸರ್ಕಾರ ಕೈಗೊಂಡಿದ್ದ ಜಾತಿಗಣತಿ, ಆರ್ಥಿಕ ಸಮೀಕ್ಷಾ ಕಾರ್ಯವನ್ನು ಎಲ್ಲರೂ ಸ್ವಾಗತಿಸಿದ್ದರು.

ಸಮೀಕ್ಷಾ ಕಾರ್ಯ ಮುಗಿದು, ವರದಿ ಸಲ್ಲಿಕೆಯಾಗಿ ವರ್ಷವೇ ಉರುಳಿದರೂ ಈವರೆಗೆ ರಾಜ್ಯ ಸರ್ಕಾರ ಜಾತಿಗಣತಿ, ಆರ್ಥಿಕ ಸಮೀಕ್ಷಾ ವರದಿ ಬಹಿರಂಗಪಡಿಸದೇ ಇರುವುದು ಅತ್ಯಂತ ಖಂಡನೀಯ ಎಂದು ದೂರಿದರು. ಜಾತಿ ಆಧಾರದಲ್ಲಿ ಸರ್ಕಾರಿ ಸೌಲಭ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಅವಕಾಶಕ್ಕೆ ಜಾತಿಗಣತಿ ಕಾರ್ಯ ಅತ್ಯಂತ ಮಹತ್ವ ಪಡೆದಿದೆ.

ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆ, ಕಾರ್ಯಕ್ರಮ ಜಾತಿ ಜನಸಂಖ್ಯೆ ಆಧಾರದಲ್ಲಿ ರೂಪಿಸಲು ಸಾಧ್ಯವಾಗುತ್ತದೆ. ಆಯಾಯ ಜಾತಿಯವರು ತಮ್ಮ ಜಾತಿ ಬಾಂಧವರ ಜನಸಂಖ್ಯೆಯನ್ನು ನಿಖರವಾಗಿ ಪ್ರತಿಪಾದಿಸಲಿಕ್ಕೂ ಸಹಾಯವಾಗುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದಷ್ಟು ಬೇಗ ಜಾತಿಗಣತಿ, ಆರ್ಥಿಕ ಸಮೀಕ್ಷೆ ವರದಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. 

ರಾಜ್ಯ ಸರ್ಕಾರ ಜಾತಿಗಣತಿ, ಆರ್ಥಿಕ ಸಮೀಕ್ಷಾ ಕಾರ್ಯಕ್ಕೆ 600 ಕೋಟಿ ಹಣ ಖರ್ಚು ಮಾಡಿದೆ. ಸ್ಥಾಪಿತ ಹಾಗೂ ರಾಜಕೀಯ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ವರದಿ ಬಹಿರಂಗಕ್ಕೆ ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಸಲಹೆ ಪಡೆದ ನಂತರವೇ ಜಾತಿಗಣತಿ, ಆರ್ಥಿಕ ಸಮೀಕ್ಷೆಯ ವರದಿ ಬಹಿರಂಗಪಡಿಸುವಂತಾಗಬೇಕು ಎಂದರು. 

Advertisement

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಸಂಘ ಪರಿವಾರದ ಸೂಚನೆಯಂತೆ ಏಕಾಏಕಿ ಗೋಹತ್ಯೆ ಮತ್ತು ಮಾರಾಟ ನಿಯಂತ್ರಣ ಕಾಯ್ದೆ ಜಾರಿಗೆ ತಂದಿರುವುದು ಖಂಡನೀಯ. ಈ ಕಾಯ್ದೆ ಜಾರಿಯ ಅಗತ್ಯವೇ ಇರಲಿಲ್ಲ, ದುರುದ್ದೇಶದ ಕಾಯ್ದೆಯಿಂದ ದೇಶದ ಆರ್ಥಿಕ ಕ್ಷೇತ್ರದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ರೈತರು ಸಹ ಇನ್ನಿಲ್ಲದ ಕಾನೂನಾತ್ಮಕ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಕಾಯ್ದೆ ರದ್ದುಪಡಿಸಬೇಕು. 

ಕರ್ನಾಟಕದಲ್ಲಿ 1964ರಿಂದಲೇ ಗೋಹತ್ಯಾ ನಿಷೇಧ ಕಾನೂನು  ಜಾರಿಯಲ್ಲಿರುವುದರಿಂದ ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು. ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಆನಂದರಾಜ್‌, ಆವರಗೆರೆ ವಾಸು, ಪಿ. ಷಣ್ಮುಖಸ್ವಾಮಿ, ಪಾಲವನಹಳ್ಳಿ ಪ್ರಸನ್ನಕುಮಾರ್‌, ಐರಣಿ ಚಂದ್ರು, ಸೈಯದ್‌ ಖಾಜಾಪೀರ್‌, ಆವರಗೆರೆ ಎನ್‌.ಟಿ. ಬಸವರಾಜ್‌ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next