ನವದೆಹಲಿ: ಕೋವಿಡ್ 19 ಸೋಂಕಿನಿಂದ ಜಾಗತಿಕವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, 3ನೇ ಅಲೆಯ ಭೀತಿಯನ್ನು ಎದುರಿಸುತ್ತಿರುವ ನಡುವೆಯೇ ಇದೀಗ ಸೂಪರ್ ವೆರಿಯಂಟ್ ಕೋವಿಡ್ 22 ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಲಸಿಕೆ ಪಡೆಯದ ವ್ಯಕ್ತಿಗಳಿಂದ ಕೋವಿಡ್ 22 ಕ್ಷಿಪ್ರವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳ, 648 ಸಾವು
ಜ್ಯೂರಿಚ್ ಇಮ್ಯೂನಾಲಜಿಸ್ಟ್, ಪ್ರೊ.ಸಾಯಿ ರೆಡ್ಡಿ ಅವರ ಪ್ರಕಾರ, ಈ ನೂತನ ಸೋಂಕು ಹಿಂದಿನ ಕೋವಿಡ್ 19ಗಿಂತ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿರುವುದಾಗಿ ದ ಸನ್ ವರದಿ ಮಾಡಿದೆ. ಕೋವಿಡ್ 22 ಶೀಘ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದು, ಇದು ಡೆಲ್ಟಾ ಮಾದರಿಗಿಂತಲೂ ಅಪಾಯಕಾರಿಯಾಗಲಿದೆ ಎಂದು ತಿಳಿಸಿದೆ.
ಪ್ರಸ್ತುತ ನಾವು ಗಮನಿಸಿರುವಂತೆ ಕೋವಿಡ್ 19ನಿಂದ ಅಪಾರ ಪ್ರಮಾಣದ ಜೀವ ಹಾನಿಯಾಗಿದೆ. ಉದ್ಯೋಗ, ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುವಂತಾಗಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕೋವಿಡ್ ವಿರುದ್ಧ ಹೋರಾಡಲು ಎರಡು ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿ ವಿವರಿಸಿದೆ.
ಕೋವಿಡ್ ಸೋಂಕಿನ ಅಪಾಯ ಎದುರಿಸಲು ಲಸಿಕೆ ಮತ್ತು ಬೂಸ್ಟರ್ ವ್ಯಾಕ್ಸಿನ್ ಅಗತ್ಯ ಹೆಚ್ಚಾಗಿದೆ ಎಂದು ಡಾ.ರೆಡ್ಡಿ ತಿಳಿಸಿದ್ದಾರೆ. ಕೋವಿಡ್ 22 ಮಾದರಿ ರೂಪಾಂತರಿ ತಳಿಗಿಂತ ಹೆಚ್ಚು ಅಪಾಯಕಾರಿಯಾಗುವ ಲಕ್ಷಣ ಇದ್ದಿರುವುದಾಗಿ ತಜ್ಞರು ಎಚ್ಚರಿಸಿದ್ದಾರೆ.
2019ರಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಕೋವಿಡ್ 19 ಮಾದರಿಯಲ್ಲಿಯೇ 2022ರಲ್ಲಿ ಈ ಕೋವಿಡ್ ಸೋಂಕು ಬರುವ ಸಂಭವವಿದೆ. ಇದು ಹಿಂದಿನ ಸೋಂಕಿಗಿಂತ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇರುವುದರಿಂದ ಕೋವಿಡ್ 22 ಎಂದು ಡಾ.ರೆಡ್ಡಿ ಅವರು ಪ್ರಸ್ತಾಪಿಸಿದ್ದಾರೆ. ಆ ನಿಟ್ಟಿನಲ್ಲಿ ನಾವು ಈಗಾಗಲೇ ಸಿದ್ದರಾಗಲು ಮುಂದಿನ ಕೆಲವು ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ಲಸಿಕೆಯನ್ನು ಪಡೆಯಬೇಕಾಗಿದೆ. ಇದರಿಂದ ನೂತನ ರೂಪಾಂತರಿ ಸೋಂಕನ್ನು ತಡೆಯಲು ನೆರವಾಗುತ್ತದೆ ಎಂದು ಡಾ.ರೆಡ್ಡಿ ಸಲಹೆ ನೀಡಿರುವುದಾಗಿ ದ ಸನ್ ವರದಿ ಮಾಡಿದೆ.